ಸಂಪಾಜೆ ಸಾಮಾನ್ಯ ಸಭೆ : ಹಮೀದ್, ಕೊಯಿಂಗಾಜೆ ವಾಗ್ವಾದ

0

ಸತ್ಯ ಪ್ರಮಾಣಕ್ಕೆ ಮುಂದಾದ ಜನಪ್ರತಿನಿಧಿಗಳು


ಸಂಪಾಜೆ ಗ್ರಾ. ಪಂ ನ ಸಾಮಾನ್ಯ ಸಭೆಯು ಇಂದು ಪಂಚಾಯತ್ ಸಭಾಭವನದಲ್ಲಿ ಗ್ರಾ. ಪಂ ಅಧ್ಯಕ್ಷ ಜಿ. ಕೆ ಹಮೀದ್ ಅವರ ಅಧ್ಯಕ್ಷತೆಯಲ್ಲಿ ನಡೆದಿದ್ದು, ಅವರಿಗೆ ಮತ್ತು ಸದಸ್ಯ ಸೋಮಶೇಖರ ಕೊಯಿಂಗಾಜೆಯವರಿಗೆ ವಾಗ್ವಾದ ನಡೆದು, ಸತ್ಯ ಪ್ರಮಾಣದವರೆಗೆ ಮುಟ್ಟಿದ ಘಟನೆ ನಡೆಯಿತು.

ಗ್ರಾ. ಪಂ ಸಿಬ್ಬಂದಿ ಗೋಪಮ್ಮನವರು ಗ್ರಾಮ ಸಭೆಯಲ್ಲಿ ಆದ ನಿರ್ಣಯವನ್ನು ಸಭೆಯಲ್ಲಿ ಓದಿ ಹೇಳಿದರು. ಆಗ ಗ್ರಾ. ಪಂ ಸದಸ್ಯ ಸೋಮಶೇಖರ ಕೊಯಿಂಗಾಜೆಯವರು, ಕೂಲಿ ಶೆಡ್ ನ ಎ. ಕೆ ಇಬ್ರಾಹಿಂ ಅವರು ಪಂಚಾಯತ್ ಕಟ್ಟಡದ ಎರಡು ವರ್ಷ ಐದು ತಿಂಗಳ ಬಾಡಿಗೆಯನ್ನು ಪಂಚಾಯತ್ ಗೆ ಕಟ್ಟಿದ್ದಾರಾ? ಎಂದು ಕೇಳಿದಾಗ ಅಧ್ಯಕ್ಷರು ಇಲ್ಲ. ಅವರು ಐದು ತಿಂಗಳ ಬಾಡಿಗೆಯನ್ನು ಮಾತ್ರ ಕಟ್ಟಿದ್ದಾರೆ ಎಂದರು. ಯಾರು ಕಲೆಕ್ಟ್ ಮಾಡಿದ್ದು ಎಂದು ಸೋಮಶೇಖರರು ಕೇಳಿದಾಗ ಜಿ. ಕೆ ಹಮಿದ್ ಉತ್ತರಿಸಿ, ಅವರು ನನ್ನ ಕೈಯಲ್ಲಿ ಕೊಟ್ಟಿದ್ದಾರೆ. ಅದನ್ನು ತಂದು ಕಚೇರಿಗೆ ಕಟ್ಟಿ ರಶೀದಿ ಕೊಡಲಾಗಿದೆ ಎಂದರು. ಅವರು ೨೦೨೦-೨೨ರ ಬಿಲ್ಲನ್ನು ಕೂಡಾ ಪಾವತಿಸಿದ್ದಾರೆ ಎಂದು ಸೋಮಶೇಖರರು ಹೇಳಿದಾಗ ಇಬ್ಬರೊಳಗೆ ಮಾತಿಗೆ ಮಾತು ಬೆಳೆಯಿತು. ಈ ಹಣವನ್ನು ಅಧ್ಯಕ್ಷರೇ ಸಂಗ್ರಹಿಸಿ ತಿಂದಿದ್ದಾರೆ ಎಂದು ಸೋಮಶೇಖರರು ಆರೋಪಿಸಿದರು.


ನೀವು ಹಣ ತಿನ್ನಲಿಲ್ಲವೆಂದು ಪ್ರಮಾಣ ಮಾಡಬೇಕು ಎಂದು ಸೋಮಶೇಖರರು ಹೇಳಿದಾಗ ನಾನು ಪ್ರಮಾಣ ಮಾಡುತ್ತೇನೆ ಎಂದು ಹಮೀದ್ ಹೇಳಿದರು. ಇದು ಒಂದು ವಿಷಯವಲ್ಲ. ಇಂತ ಎಷ್ಟು ಪ್ರಕರಣಗಳು ಇದೆ ಎಂಬುದನ್ನು ನಾನು ಸಾಬೀತು ಪಡಿಸುತ್ತೇನೆ ಎಂದು ಸೋಮಶೇಖರರು ಹೇಳಿದಾಗ, ನೀವು ಈ ಬಗ್ಗೆ ಕೋರ್ಟ್ ಗೆ ಬೇಕಾದರೂ ಹೋಗಿ. ಇದಕ್ಕೆ ಹಿಂದಿನ ಅವಧಿಯಲ್ಲಿ ಆದ ಅವ್ಯವಹಾರವನ್ನು ನಾನೂ ಬಯಲಿಗೆಳೆಯುತ್ತೇನೆ ಎಂದರು.


ಈ ಸಂದರ್ಭ ಕೊಯಿಂಗಾಜೆಯವರು ಎ. ಕೆ ಇಬ್ರಾಹಿಂ ಅವರ ಫೋನ್ ಗೆ ಕರೆಮಾಡಿ ಮೊಬೈಲಿನ ಲೌಡ್ ಸ್ಪೀಕರ್ ಇಟ್ಟು ನೀವು ಎಷ್ಟು ಸಮಯದಿಂದ ಬಾಡಿಗೆ ಕಟ್ಟುತ್ತಿದ್ದೀರಿ ಯಾರ ಕೈಯಲ್ಲಿ ಕೊಟ್ಟಿದ್ದೀರಿ ಎಂದು ಕೇಳಿದ್ದು, ಆಗ ಇಬ್ರಾಹಿಂ ಅವರು ೨೦೨೦ರಿಂದ ನಾನು ರೂಮ್ ಬಾಡಿಗೆಯನ್ನು ಕಟ್ಟುತ್ತಿದ್ದೇನೆ. ಅದನ್ನು ಅಧ್ಯಕ್ಷರ ಕೈಯಲ್ಲಿ ಕೊಟ್ಟಿರುತ್ತೇನೆ ಎಂದು ಹೇಳಿದರೆಂದು ಆಗ ಜಿ. ಕೆ ಹಮೀದ್, ಅವರು ೧೦ ವರ್ಷದ ಬಿಲ್ಲು ಕಟ್ಟುತ್ತಾರೆಂದು ಸುಳ್ಳು ಹೇಳಬಹುದು ಇದೊಂದು ಗ್ರಾ. ಪಂ ಅಧ್ಯಕ್ಷರ ವಿರುದ್ಧ ನಡೆಯುತ್ತಿರುವ ಷಡ್ಯಂತ್ರ ಎಂದು ಆರೋಪಿಸಿದರು.