“ಪ್ರೇಮದೂರಿನ ಪಯಣ” ಆಲ್ಬಮ್ ಸಾಂಗ್ ಬಿಡುಗಡೆ

0

ತಪಸ್ಯ ಮೀಡಿಯಾ ಸುಳ್ಯ ಮತ್ತು ನೈಂಟಿ ತ್ರೀ ಸ್ಟುಡಿಯೋ ಪ್ರಸ್ತುತ ಪಡಿಸುವ ಕೀರ್ತನ್ ಶೆಟ್ಟಿ ನಿರ್ದೇಶನದ “ಪ್ರೇಮದೂರಿನ ಪಯಣ” ಆಲ್ಬಂ ಸಾಂಗ್ ಸುಳ್ಯ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಾರ್ಚ್ 18ರಂದು ಬಿಡುಗಡೆಯಾಯಿತು.

ಕಾರ್ಯಕ್ರಮದಲ್ಲಿ ಮುಖ್ಯಅತಿಥಿಯಾಗಿ ಭಾಗವಹಿಸಿದ ಖ್ಯಾತ ನಟ, ಕಲಾ ನಿರ್ದೇಶಕ ಎಂ.ಕೆ.ಮಠ ರವರು ಬಟನ್ ಒತ್ತಿ ಆಲ್ಬಂ ಸಾಂಗ್ ಬಿಡುಗಡೆಗೊಳಿಸಿದರು. ಸುಳ್ಯದ ಯೂಟ್ಯೂಬರ್ ವಿನ್ಯಾಸ್, ಪ್ರೆಸ್ ಕ್ಲಬ್ ಸುಳ್ಯದ ಅಧ್ಯಕ್ಷ ಹರೀಶ್ ಬಂಟ್ವಾಳ್, ಕಾಲೇಜಿನ ಪ್ರಾಂಶುಪಾಲ ಸತೀಶ್ ಕುಮಾರ್ ಕೊಯಿಂಗಾಜೆ ಅತಿಥಿಯಾಗಿದ್ದರು.

ತಂಡಕ್ಕೆ ಶುಭ ಹಾರೈಸಿದ ಎಂ.ಕೆ. ಮಠರವರು, ” ಕಲೆ ಅನ್ನುವುದು ಯೋಗದಿಂದ ಅಲ್ಲ. ಯಾಗ ದಿಂದ ಬರುವಂತದ್ದು. ಅಂತಹ ಒಂದು ಪ್ರಯತ್ನ ಇಲ್ಲಿದೆ. ಈ ಹಾಡಲ್ಲಿ ಒಂದು ಸಿನೆಮಾ ಮಾಡುವ ಕತೆಯಿದೆ. ನಿರ್ದೇಶಕ ಕೀರ್ತನ ಶೆಟ್ಟಿಯವರ ಪ್ರತಿಭೆಯಿಲ್ಲಿ ಗೋಚರಿಸುತ್ತದೆ. ಇದರಲ್ಲಿನ ಸಾಹಿತ್ಯ ಮತ್ತು ದೃಶ್ಯ ನನ್ನ ಜೀವನದ ಘಟನೆಗಳನ್ನು ನೆನಪಿಸುತ್ತದೆ” ಎಂದರು.

” ಭಾವನಾತ್ಮಕವಾಗಿ ಮನಸನ್ನು ಆರ್ದ್ರಗೊಳಿಸುವ ಈ ಆಲ್ಬಂ ಸಾಂಗ್ ಒಳ್ಳೆಯ ಸಂದೇಶ ನೀಡುವ ಮತ್ತು ವಾಸ್ತವ ಪರಿಚಯಿಸುವ ಕೆಲಸ ಮಾಡಿದೆ ” ಎಂದು ಹರೀಶ್ ಬಂಟ್ವಾಳ್ ಹೇಳಿದರು.

ಪ್ರಾಂಶುಪಾಲ ಸತೀಶ್ ಕುಮಾರ್ ಕೊಯಿಂಗಾಜೆ , ಹಾಗೂ ಯೂಟ್ಯೂಬರ್ ವಿನ್ಯಾಸ್ ತಂಡದ ಪ್ರಯತ್ನಕ್ಕೆ ಶುಭ ಹಾರೈಸಿದರು. ತಂಡದ ಸದಸ್ಯರು ತಮ್ಮ ಅನುಭವಗಳನ್ನು ಹಂಚಿಕೊಂಡರು.
ಮಿಥುನ್ ಸೋನ ನಿರೂಪಿಸಿದರು.

ಕೀರ್ತನ್ ಶೆಟ್ಟಿಯವರ ನಿರ್ದೇಶನದ ಪ್ರೇಮದೂರಿನ ಪಯಣದಲ್ಲಿ ಅನಿಲ್ ರೈ ಪೆರಿಗೇರಿ ಮತ್ತು ರೋಶನಿ ದಯಾನಂದ್ ಮುಖ್ಯ ಭೂಮಿಕೆಯಲ್ಲಿ ಪಯಣಿಸಿದ್ದಾರೆ. ಪ್ರಶಾಂತ್ ಎಂ ಟಿ ವಿಟ್ಲ ರವರ ಮತ್ತೆ ಮತ್ತೆ ಗುನುಗುಣಿಸುವಂತ ಸಾಹಿತ್ಯ ಮತ್ತು ಸಂಗೀತಕ್ಕೆ ಅರ್ಪಿತಾ ಮುಳ್ಳೇರಿಯ ಮತ್ತು ವಿಷ್ಣು ನಾಗ್ ಶೇಟ್ ರ ಇಂಪೆರೆಯುವ ಧ್ವನಿ, ಗಿರೀಶ್ ಆಚಾರ್ ಬೈತಡ್ಕರವರ ಛಾಯಾಗ್ರಹಣ ಮತ್ತು ಸಂಕಲನ ಕಣ್ಮನ ಸೆಳೆಯುವಂತಿದೆ.