ಬೆಳ್ಳಾರೆ ಝಕರಿಯ್ಯಾ ಜುಮ್ಮಾ ಮಸ್ಜಿದ್ ಅಭಿವೃದ್ಧಿ ಕಾರ್ಯಕ್ಕೆ ವಖ್ಫ್ ಬೋರ್ಡಿನಿಂದ ಅನ್ಯಾಯ

0

ರಂಜಾನ್ ತಿಂಗಳೊಳಗೆ ಸಮಸ್ಯೆ ಬಗ್ಗೆ ಹರಿಯದಿದ್ದರೆ ಉಗ್ರ ಹೋರಾಟಕ್ಕೆ ತೀರ್ಮಾನ: ಜಮಾಲುದ್ದೀನ್ ಕೆ ಬೆಳ್ಳಾರೆ

ಬೆಳ್ಳಾರೆ ಝಕರಿಯಾ ಜುಮಾ ಮಸೀದಿಯಲ್ಲಿ ಕಳೆದ ಕೆಲವು ವರ್ಷಗಳಿಂದ ಆಡಳಿತ ವಿಷಯದಲ್ಲಿ ಸಮಸ್ಯೆಗಳು ಉಂಟಾಗಿದ್ದು ಅದು ಬಗೆ ಹರಿಯದೆ ಇದ್ದು, ವಖ್ಫ್ ಬೋರ್ಡಿನಿಂದ ಅನ್ಯಾಯವಾಗಿದೆ.ಇದಕ್ಕೆ ಕರ್ನಾಟಕ ರಾಜ್ಯ ವಖ್ಫ್ ಬೋರ್ಡ್ ಅಧ್ಯಕ್ಷ ಶಾಫಿ ಸಅದಿ ನೇರ ಹೊಣೆಯಾಗಿದ್ದು, ರಂಜಾನ್ ತಿಂಗಳೊಳಗೆ ಸಮಸ್ಯೆ ಬಗೆಹರಿಯದಿದ್ದರೆ ಉಗ್ರ ಹೋರಾಟ ನಡೆಸುವ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಬೆಳ್ಳಾರೆಯ ಮಸೀದಿ ಸದಸ್ಯ ಜಮಾಲುದ್ದೀನ್ ಕೆ ಇಂದು ಸುಳ್ಯ ಪ್ರೆಸ್ ಕ್ಲಬ್ಬಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿರುವ ಅವರು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಝಕರಿಯಾ ಜುಮಾ ಮಸೀದಿ ಹಾಗೂ ವಲಿಯುಲ್ಲಾಹಿ ರವರ ಪ್ರಸಿದ್ಧ ಝಿಯಾರತ್ ಕೇಂದ್ರವಿದ್ದು ಮೂರು ವರ್ಷಕ್ಕೊಮ್ಮೆ ಇಲ್ಲಿ ಉರೂಸ್ ಕಾರ್ಯಕ್ರಮ, ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿತ್ತು. ಇದೀಗ ಮಸೀದಿಯಲ್ಲಿ ಆಡಳಿತ ಸಮಿತಿ ಇಲ್ಲದೆ ಯಾವುದೇ ಕಾರ್ಯಕ್ರಮಗಳು ಅಥವಾ ಅಭಿವೃದ್ಧಿ ಕಾರ್ಯಕ್ರಮಗಳು ನಡೆಯುತ್ತಿಲ್ಲ.
ಕಳೆದ ಕೆಲವು ವರ್ಷಗಳಿಂದ ಆಡಳಿತ ಸಮಿತಿ ಇಲ್ಲದಿದ್ದಾಗ ವಖ್ಫ್ ಬೋರ್ಡಿನಿಂದ ಅಧಿಕಾರಿಯನ್ನು ನೇಮಕ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಬೆಳ್ತಂಗಡಿ ಮೂಲದವರಾದ ಮಹಮ್ಮದ್ ರಫಿ ಎಂಬುವರನ್ನು ಆಡಳಿತಾಧಿಕಾರಿಯಾಗಿ ನೇಮಕಗೊಂಡು ಬಂದಿರುತ್ತಾರೆ.ಅವರಿಗೆ ಆರು ತಿಂಗಳ ಅವಧಿಮಾತ್ರ ಇದ್ದು ಆದರೆ ವಖ್ಫ್ ಇಲಾಖೆ ಅವರನ್ನು ಕಳೆದ ಎರಡುವರೆ ವರ್ಷದಿಂದ ಮುಂದುವರಿಸಿಕೊಂಡು ಹೋಗುತ್ತಿದೆ.
ಇವರ ಅವಧಿಯಲ್ಲಿ ಮಸೀದಿಯ ಯಾವುದೇ ಸಮಸ್ಯೆಗಳು ಬಗೆಹರಿಯಲಿಲ್ಲ. ಸಮಸ್ಯೆಗಳು ಉಲ್ಬಣ ಗೊಂಡು ಪರಸ್ಪರ ಹಲ್ಲೆಗಳು ನಡೆದು ಕೋರ್ಟುಗಳಿಗೆ ಈಗಲೂ ಸಂಬಂಧಪಟ್ಟ ಜನರು ಅಲೆದಾಡುತ್ತಿದ್ದಾರೆ. ಆದರೆ ಎರಡು ಕಡೆಯವರನ್ನು ಸೇರಿಸಿ ಮಾತುಕತೆ ಮಾಡಬೇಕಾದ ಅಧಿಕಾರಿ ಕೇವಲ ಒಂದು ಕಡೆಯ ಪರವಾಗಿ ಮಾತನಾಡಿ ಅವರ ಪರವಾದ ನಿರ್ಧಾರವನ್ನು ತೆಗೆದುಕೊಂಡು ಸಮಸ್ಯೆಗಳನ್ನು ಹೆಚ್ಚು ಮಾಡುತ್ತಿದ್ದಾರೆ.

ಅಲ್ಲದೆ ಈ ಅಧಿಕಾರಿ ಇದುವರೆಗೆ ಜಮಾಅತರ ಮುಂದೆ ನೇರವಾಗಿ ನಿಂತು ಮಾತನಾಡಿದವರಲ್ಲ. ಇವರ ಈ ಧೋರಣೆಯಿಂದಾಗಿ ಮಸೀದಿಯಲ್ಲಿ ಯಾವುದೇ ಕಾರ್ಯಕ್ರಮಗಳು ಅಥವಾ ಯಾವುದೇ ಅಭಿವೃದ್ಧಿಯು ಇಲ್ಲದಂತಾಗಿದೆ.
ಕಳೆದ 40 ವರ್ಷಗಳಿಂದ ನಡೆಯುತ್ತಿದ್ದ ದರ್ಸ್ ವಿದ್ಯಾಭ್ಯಾಸಕ್ಕೂ ತೊಂದರೆಯಾಗಿದೆ. ಅಲ್ಲದೆ ಕಳೆದ ಐದು ವರ್ಷಗಳಿಂದ ಊರೂಸ್ ಕಾರ್ಯಕ್ರಮ ನಡೆಯದೆ,ಇದೀಗ ಮಸೀದಿಯಲ್ಲಿ ಮುಖ್ಯ ಗುರುಗಳು ಇಲ್ಲದೆ ಮತ್ತು ಮದ್ರಸ ಮತ್ತು ಶಾಲೆಯ ಕಟ್ಟಡದ ಕಾಮಗಾರಿ ಅರ್ಧದಲ್ಲಿ ನಿಂತು ಕಬ್ಬಿಣಗಳು ತುಕ್ಕು ಹಿಡಿಯುತ್ತಿದೆ.
ಇದಕ್ಕೆಲ್ಲ ಪರಿಹಾರವಾಗಿ ನೂತನ ಸಮಿತಿ ರಚನೆ ಮಾಡಲು ಪ್ರಯತ್ನ ಪಟ್ಟಾಗ ಸ್ಥಳೀಯವಾಗಿರುವ ಕೆಲವು ಕೈಗಳು ಇದರಲ್ಲಿ ಸೇರಿಕೊಂಡು ಮಾತುಕತೆ ನಡೆಯಲು ಬಿಡುತ್ತಿಲ್ಲ. ಬಳಿಕ ಚುನಾವಣೆ ನಡೆಸಲು ತೀರ್ಮಾನವಾಗಿದ್ದು ಚುನಾವಣೆ ಘೋಷಣೆಯಾಗಿ ಒಂದುವರೆ ವರ್ಷ ಕಳೆದರೂ ಕೂಡ ಕೆಲವೊಂದು ಕಾರಣಗಳ ನೆಪವನ್ನು ಒಡ್ಡಿ ಚುನಾವಣಾ ಪ್ರಕ್ರಿಯೆಯನ್ನು ಮುಂದೂಡುತ್ತಿದ್ದಾರೆ.
2021 ಸೆಪ್ಟಂಬರ್ 9ರಂದು ಚುನಾವಣಾ ದಿನಾಂಕವನ್ನು ನೀಡಿದ್ದು ಇಲ್ಲಿಯವರೆಗೆ ಚುನಾವಣೆ ನಡೆದಿಲ್ಲ. ಚುನಾವಣೆ ನಡೆಸುತ್ತಾರೆ ಎಂದು ಜಮಾಅತಿನ ಸುಮಾರು 525 ಸದಸ್ಯರು 150 ರೂಪಾಯಿಗಳನ್ನು ಪಾವತಿ ಮಾಡಿ ಮತದಾರ ಪಟ್ಟಿಯಲ್ಲಿ ಹೆಸರನ್ನು ನೋಂದಾಯಿಸಿಕೊಂಡಿದ್ದರು.
ಜಮಾಅತರಿಂದ ಲಕ್ಷಕ್ಕಿಂತಲೂ ಹೆಚ್ಚು ಹಣವನ್ನು ಪಡೆದು ಈ ರೀತಿಯಾದ ಅನ್ಯಾಯವನ್ನು ವಖ್ಫ್ ಬೋರ್ಡ್ ಮಾಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಪ್ರಸ್ತುತ ಅಧಿಕಾರದಲ್ಲಿ ಇರುವ ವಖ್ಫ್ ಬೋರ್ಡ್ ಅಧ್ಯಕ್ಷ ಶಾಫಿ ಸಅದಿ ತಮಗೆ ತೋಚಿದಾಗ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದು, ಇವರಿಗೆ ಜಿಲ್ಲಾ ವಖ್ಫ್ ಸಲಹಾ ಮಂಡಳಿಯವರು ಸಾತ್ ನೀಡುತ್ತಿದ್ದು ಇವರ ಕೈಗೊಂಬೆ ತರ ವರ್ತಿಸುತ್ತಿದ್ದಾರೆ.

ಉಳ್ಳಾಲದಲ್ಲಿ ಇದೇ ಶಾಪಿ ಸಅದಿಯವರು ಎರಡು ತಿಂಗಳಲ್ಲಿ ಚುನಾವಣೆ ನಡೆಸಲು ಸಾಧ್ಯವಾಗಿದ್ದರೆ ಬೆಳ್ಳಾರೆ ಮಸೀದಿಯಲ್ಲಿ ಚುನಾವಣೆ ಘೋಷಣೆಯಾಗಿ ಒಂದುವರೆ ವರ್ಷಗಳು ಕಳೆದರೂ ಕೂಡ ಏಕೆ ಚುನಾವಣೆ ಮಾಡುತ್ತಿಲ್ಲ ಎಂದು ಅವರು ಪ್ರಶ್ನಿಸಿದ್ದಾರೆ. ಆದ್ದರಿಂದ ಇದಕ್ಕೆಲ್ಲ ಹೊಣೆ ಕರ್ನಾಟಕ ರಾಜ್ಯ ವಖ್ಫ್ ಬೋರ್ಡ್ ಅಧ್ಯಕ್ಷ ಶಾಫಿ ಸಅದಿಯವರೇ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆದ್ದರಿಂದ ಇದೀಗ ರಂಜಾನ್ ತಿಂಗಳು ಆರಂಭಗೊಳ್ಳಲಿದ್ದು ಅದು ಮುಗಿಯುವುದರ ಒಳಗೆ ನಮ್ಮ ಈ ಸಮಸ್ಯೆಗಳನ್ನು ಪರಿಹರಿಸಿ ಕೊಡದಿದ್ದಲ್ಲಿ ಉಗ್ರವಾದ ಹೋರಾಟ ಮಾಡಲು ನಿರ್ಧರಿಸುತ್ತೇವೆ ಎಂದು ಅವರು ಹೇಳಿದ್ದಾರೆ.
ಈ ರೀತಿಯ ಸಮಸ್ಯೆಗಳು ಕೇವಲ ಬೆಳ್ಳಾರೆ ಮಸೀದಿ ಮಾತ್ರವಲ್ಲದೆ ದಕ್ಷಿಣ ಕನ್ನಡ ಜಿಲ್ಲೆಯ ಸಮಸ್ತದ ಅಧೀನದಲ್ಲಿ ಕಾರ್ಯಚರಿಸುತ್ತಿರುವ ಹಲವಾರು ಮಸೀದಿಗಳು ಈ ರೀತಿ ಆಡಳಿತ ದುರುಪಯೋಗವನ್ನು ಮಾಡುತ್ತಿದ್ದಾರೆ.ಆದ್ದರಿಂದ ಮುಂದಿನ ದಿನಗಳಲ್ಲಿ ಜಿಲ್ಲೆಯಾದ್ಯಂತ ಉಗ್ರ ಪ್ರತಿಭಟನೆ ಮಾಡುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಬೆಳ್ಳಾರೆ ಜಮಾಅತಿನ ಸದಸ್ಯರುಗಳಾದ ಇ ಎಚ್ ಅಬೂಬಕ್ಕರ್ ಹಾಜಿ, ಹಸೈನಾರ್ ಅಮ್ಮು, ಅಬ್ದುನ್ನಾಸಿರ್,ಕುಂಞಾಮ್ಮದ್ ಉಪಸ್ಥಿತರಿದ್ದರು.