ಈ ಬಾರಿ ಸುಳ್ಯ‌ ಕ್ಷೇತ್ರದಿಂದ ಆದಿದ್ರಾವಿಡ ಸಮಾಜಕ್ಕೆ ಅವಕಾಶ ಸಿಗಲಿ

0

ಅವಕಾಶ ನೀಡದಿದ್ದರೆ ಗೆಲ್ಲುವ ಮುಂಚೂಣಿ ಪಕ್ಷಕ್ಕೆ ನಾವು ಮತ ಹಾಕುವುದಿಲ್ಲ

ಸುಳ್ಯದಲ್ಲಿ ಅಂಬೇಡ್ಕರ್ ಭವನ ಮಾಡಲು 30 ವರ್ಷ ಬೇಕಾ? : ಆದಿದ್ರಾವಿಡ ಸಮಾಜ ಸೇವಾ ಸಂಘ ಪ್ರಶ್ನೆ

ಸುಳ್ಯ ವಿಧಾನ ಸಭಾ ಕ್ಷೇತ್ರದಲ್ಲಿ ಈ ಬಾರಿಯ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳು ಅಭ್ಯರ್ಥಿ ಆಯ್ಕೆಯಲ್ಲಿ ಆದಿದ್ರಾವಿಡ ಸಮುದಾಯವನ್ನು ಪರಿಗಣಿಸಬೇಕು. ಕಳೆದ ಮೂರು – ನಾಲ್ಕು ಅವಧಿಯಿಂದ ನಾವು ಬೇಡಿಕೆಯಿಡುತ್ತಿದ್ದರೂ ನಮ್ಮ ಬೇಡಿಕೆಗೆ ಪ್ರಮುಖ ರಾಜಕೀಯ ಪಕ್ಷಗಳು ಸ್ಪಂದಿಸಿಲ್ಲ. ಈ‌ ಬಾರೀ ಸ್ಪಂದನೆ ಸಿಗದಿದ್ದರೆ ನಾವು ಗೆಲ್ಲುವ ಮುಂಚೂಣಿ ಪಕ್ಷಕ್ಕೆ ಮತ ಹಾಕುವುದಿಲ್ಲ ಎಂದು ಆದಿ ದ್ರಾವಿಡ ಸಮಾಜ ಸೇವಾ ಸಂಘದ ತಾಲೂಕು ಅಧ್ಯಕ್ಷ ‌ಮೋನಪ್ಪ ರಾಜರಾಂಪುರ ಹಾಗೂ ಯುವ ವೇದಿಕೆ ಜಿಲ್ಲಾಧ್ಯಕ್ಷ ರಾಮಚಂದ್ರರು ಹೇಳಿದ್ದಾರೆ.

ಮಾ.25 ರಂದು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಸುಳ್ಯ ಎಸ್ಸಿ‌ ಮೀಸಲಾತಿ ಇರುವ ಕ್ಷೇತ್ರ. ಇಲ್ಲಿ‌ಗೌಡ ಸಮುದಾಯ ಬಿಟ್ಟರೆ ಅತೀ ಹೆಚ್ಚು‌ ಮತದಾರರಿರುವುದು ಆದಿ ದ್ರಾವಿಡ ಸಮುದಾಯದಲ್ಲಿ. ಹೀಗಿರುವಾಗ 30 ವರ್ಷಗಳಿಂದ ನಮ್ಮನ್ನು ಯಾರೂ ಪರಿಗಣಿಸಿಲ್ಲ. ಬೇಡಿಕೆ ಇಡುತ್ತೇವಾದರೂ‌ ಮುಂದಿನ ಬಾರಿ ಅವಕಾಶ ನೀಡುವ ಭರವಸೆ ನೀಡಿ ನಮ್ಮನ್ನು ಎಲ್ಲ‌ಪಕ್ಷಗಳ ನಾಯಕರು ವಂಚಿಸುತ್ತಿದ್ದಾರೆ ಈ‌ಬಾರಿ‌ ನಮ್ಮ ಸಮುದಾಯಕ್ಕೆ ನೀಡಬೇಕು ಎಂದವರು ಹೇಳಿದರು.

ವಿಜಯದ ಮುಂಚೂಣಿಯಲ್ಲಿರುವ ಬಿಜೆಪಿ ಪಕ್ಷದಲ್ಲಿ ಶಾಸಕರಾಗಿ ಅಂಗಾರರು 30 ವರ್ಷಗಳಿಂದ ಇದ್ದಾರೆ. ಆದರೂ ಇಲ್ಲಿ ಸುಸಜ್ಜಿತ ಅಂಬೇಡ್ಕರ್ ಭವನ ಆಗಿಲ್ಲ. ಒಂದು ಮೀಸಲಾತಿ‌ ಕ್ಷೇತ್ರದಲ್ಲಿ ಅಂಬೇಡ್ಕರ್ ‌ಭವನ ಆಗಲು 30 ವರ್ಷ ಬೇಕಾ ? ಆದರೂ ಅದನ್ನು ಪೂರ್ತಿ ಮಾಡಿಲ್ಲ.‌ ಇದು ಬೇಸರ ತರಿಸಿದೆ. ಅಂಬೇಡ್ಕರ್ ರ ಪ್ರತಿಮೆಯನ್ನೂ ಮಾಡಲು ಆಸಕ್ತಿ ವಹಿಸಿಲ್ಲ ಎಂದು‌ ಹೇಳಿದ ಅವರು ಅಂಗಾರರು ಕೆಲಸ ಮಾಡಿರಬಹುದು.‌ಆದರೆ ಹೇಳಿಕೊಳ್ಳುವ ಸಾಧನೆ ಏನೂ‌ ಮಾಡಿಲ್ಲ ಎಂದು ಹೇಳಿದರು.
ತಾಲೂಕಿನ ಕೆಲವು ಕಡೆ ಗೋಣಿ‌ ಚೀಲ, ಸೀರೆಗಳನ್ನು ಗೋಡೆ ಮಾಡಿರುವ ಶೌಚಾಲಯ ಕಾಲೊನಿಗಳಲ್ಲಿ ಇದೆ.‌ ಇದರ ನಿರ್ಮೂಲನೆಗೂ ಸೂಕ್ತ ವ್ಯವಸ್ಥೆ ಕಲ್ಪಿಸಿಲ್ಲ. ಆದ್ದರಿಂದ ಆದಿ ದ್ರಾವಿಡ ಸಮುದಾಯದ ಅಭಿವೃದ್ಧಿ ಗೆ ಒಂದು ಬಾರಿಯಾದರೂ ನಮ್ಮ ಸಮುದಾಯದ ಅಭ್ಯರ್ಥಿಯನ್ನು ಗೆಲ್ಲುವ ಪಕ್ಷ ಕಣಕ್ಕಿಳಿಸಬೇಕು ಎಂದವರು ಹೇಳಿದರು. ‌ನಮ್ಮ ಸಮುದಾಯಕ್ಕೆ ಅವಕಾಶ ಸಿಗದಿದ್ದರೆ ನಾವು ನಮ್ಮ ನಿರ್ಧಾರ ಕೈಗೊಳ್ಳುತ್ತೇವೆ.‌


ಬಿಜೆಪಿಯಲ್ಲಿ ನಮ್ಮ ಸಮುದಾಯದ ಪ್ರಮುಖರಾದ ಭಾಗೀರಥಿ ‌ಮುರುಳ್ಯ, ಚನಿಯ‌ ಕಲ್ತಡ್ಕ‌ ಮೊದಲಾದವರು ಇದ್ದಾರೆ.‌ಇಂತವರಿಗೇ‌ ಕೊಡಿ ಎಂದು‌ ನಾವು ಹೇಳುವುದಿಲ್ಲ. ಆದರೆ ನಮ್ಮ ಸಮಯಾದಯಕ್ಕೆ ಅವಕಾಶ ಸಿಗಬೇಕಷ್ಟೆ ಎಂದು ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಗೋಪಾಲ ಅರಂಬೂರು, ಕಾಂಜೇಶ್ ಕಿಲಂಗೋಡಿ, ಕುಮಾರ ಪಾನತ್ತಿಲ ಇದ್ದರು.