ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ದೃಢಕಲಶಾಭಿಷೇಕ – ಸ್ಮರಣ ಸಂಚಿಕೆ ಬಿಡುಗಡೆ

0

ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶವು ಜ.೩೧ ರಿಂದ ಫೆ.೦೮ ವರೆಗು ನಡೆದು ಇಂದಿಗೆ ೪೮ ದಿನ ಕಳೆಯಿತು. ಮಾ.೨೩ ಮತ್ತು ಮಾ.೨೪ ರಂದು ಬ್ರಹ್ಮಶ್ರೀ ವೇದಾಮೂರ್ತಿ ದೇಲಂಪ್ಪಾಡಿ ಗಣೇಶ ತಂತ್ರಿ ಮಾರ್ಗದರ್ಶನದಲ್ಲಿ ದೃಢಕಲಶಾಭಿಷೇಕ ಕಾರ್ಯಕ್ರಮ ನಡೆಯಿತು.

ಮಾ.೨೩ ರಂದು ಸಂಜೆ ಶುದ್ಧಿಕಲಶ ಪ್ರಕ್ರಿಯೆಗಳು ನಡೆದು ಮಾ.೨೪ರಂದು ಗಣಪತಿ ಹವನ ದೃಢಕಲಶಾಭಿಷೇಕ ಕಾರ್ಯಕ್ರಮವು ನಡೆಯಿತು. ನಂತರ ನಡೆದ ಸಭಾಕಾರ್ಯಕ್ರಮದಲ್ಲಿ ಬ್ರಹ್ಮಶ್ರೀ ವೇದಾಮೂರ್ತಿ ದೇಲಂಪಾಡಿ ಗಣೇಶ ತಂತ್ರಿವರ್ಯರು ಆಶೀರ್ವಚನ ಗೈದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವ್ಯವಸ್ಥಾಪನ ಅಧ್ಯಕ್ಷ ಪಿ.ಕೆ.ಉಮೇಶ ರವರ ವಹಿಸಿದರು.

ಮುಖ್ಯ ಅಭ್ಯಗತರಾಗಿ ಕೃಷ್ಣ ಕಾಮತ್ ಅಧ್ಯಕ್ಷರು ಬ್ರಹ್ಮಕಲಶೋತ್ಸವ ಸಮಿತಿ ಶ್ರೀ ಮಹಾವಿಷ್ಣು ದೇವಸ್ಥಾನ ಕಾಯರ್ತೋಡಿ, ವೇದಿಕೆಯಲ್ಲಿ ಎ.ಟಿ.ಕುಸುಮಾಧರ ಪ್ರಧಾನ ಕಾರ್ಯದರ್ಶಿ ಬ್ರಹ್ಮಕಲಶ ಸಮಿತಿ, ನಾರಾಯಣ ಕೇಕಡ್ಕ ಆರ್ಥಿಕ ಸಮಿತಿ ಸಂಚಾಲಕರು, ಪುರುಷೋತ್ತಮ ಕೀರ್ಲಾಯ ಸ್ಮರಣೆ ಸಂಚಿಕೆಯ ಸಂಪಾದಕರು, ಸೇವಾ ಸಮಿತಿ ಸದಸ್ಯರಾದ ಗಿರೀಶ್ ದೇವರಗುಂಡ, ಪರಮೇಶ್ವರ ಬೊಳಿಯಮಜಲು, ಕೃಷ್ಣ ಬೆಟ್ಟ, ಆನಂದ ನಡುಮುಟ್ಲು, ನಮಿತಾ ಕುಸುಮಾಧರ, ಅನಂತೇಶ್ವರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಭೆಯನ್ನು ಉದ್ದೇಶಿಸಿ ಎ.ಟಿ.ಕುಸುಮಾಧರ, ನಾರಾಯಣ ಕೇಕಡ್ಕ ಮಾತನಾಡಿದರು. ಬ್ರಹ್ಮಕಲಶಕ್ಕೆ ಸುಮಾರು ೫೮ ಲಕ್ಷ ರೂ. ಸಂಗ್ರಹವಾಗಿದ್ದು ಬ್ರಹ್ಮಕಲಶದ ಕಾರ್ಯಕ್ಕೆ ೩೯ ಲಕ್ಷ ಖರ್ಚಾಗಿದ್ದು ಅಂದಾಜು ೧೮ ಲಕ್ಷ ರೂ. ಉಳಿತಾಯವಾಗಿದ್ದು ಈಗಾಗಲೇ ದೇವಾಲಯದ ಆವರಣಕ್ಕೆ ಗ್ರಾನೈಟ್ ಅಳವಡಿಕೆ ಪ್ರಾರಂಭಗೊಂಡಿದ್ದು ಸುಮಾರು ೭೫% ಕೆಲಸವು ನಡೆದಿದೆ. ಇನ್ನು ಅಂದಾಜು ೫ ಲಕ್ಷದ ಕೊರತೆ ಬರಬಹುದೆಂದು ಬ್ರಹ್ಮಕಲಶ ಸಮಿತಿ ಅಧ್ಯಕ್ಷ ಕೃಷ್ಣ ಕಾಮತ್ ರವರು ಸಭೆಗೆ ತಿಳಿಸಿದರು. ನಂತರ ಸಭಾಧ್ಯಕ್ಷರು ಮಾತನಾಡಿ ಸಹಕರಿಸಿದ ಎಲ್ಲರಿಗೂ ಧನ್ಯವಾದ ಸಮರ್ಪಿಸಿದರು.

ಸೇವಾ ಸಮಿತಿ ಸಂಚಾಲಕ ನವೀನ್ ಕುದ್ಪಾಜೆ ಎಲ್ಲಾರನ್ನು ವಂದಿಸಿದರು. ಕಾರ್ಯಕ್ರಮವನ್ನು ಶ್ರೀಮತಿ ಸ್ವಪ್ನ ನಿರೂಪಸಿದರು. ಊರ ಹಾಗೂ ಪರವೂರ ಭಕ್ತಾಭಿಮಾನಿಗಳು ಭಾಗವಹಿಸಿದರು. ನಂತರ ಮಹಾಪೂಜೆ ನಡೆದು ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ಕಾರ್ಯಕ್ರಮವು ನಡೆಯಿತು. ಬ್ರಹ್ಮಕಲಶೋತ್ಸವದ ಸ್ಮರಣೆ ಸಂಚಿಕೆಯನ್ನು ಸಾಂಕೇತಿಕವಾಗಿ ಬ್ರಹ್ಮಶ್ರೀ ವೇದಾಮೂರ್ತಿ ದೇಲಂಪಾಡಿ ಗಣೇಶ ತಂತ್ರಿಯವರು ಬಿಡುಗಡೆಗೊಳಿಸಿದರು.

LEAVE A REPLY

Please enter your comment!
Please enter your name here