ಅರಂತೋಡಿನಲ್ಲಿ ಅಮೃತ ಉದ್ಯಾನವನ, ಅಮೃತ ಮುಕ್ತಿಧಾಮ, ಅಮೃತ ಸಭಾಂಗಣ ಲೋಕಾರ್ಪಣೆ

0

ವ್ಯವಸ್ಥಿತವಾಗಿ ಕ್ಷೇತ್ರದ ಅಭಿವೃದ್ಧಿ ಮಾಡಿದ ತೃಪ್ತಿ ಇದೆ: ಎಸ್. ಅಂಗಾರ

ಸುಳ್ಯ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಯನ್ನು ವ್ಯವಸ್ಥಿತವಾಗಿ ಮಾಡಿದ ತೃಪ್ತಿ ಇದೆ. ಹೆಚ್ಚು ಕೆಲಸ ಮಾಡುತ್ತಿರುವಾಗ ಇನ್ನಷ್ಟು ಹೆಚ್ಚು ಬೇಡಿಕೆಗಳು ಬರುವುದು ಸಹಜ. ಅವುಗಳಿಗೆಲ್ಲಾ ಸ್ಪಂದಿಸುವ ಕೆಲಸವನ್ನು ಇನ್ನು ಮುಂದಕ್ಕೂ ಮಾಡುತ್ತೇನೆ ಎಂದು ಸಚಿವ ಎಸ್. ಅಂಗಾರ ಹೇಳಿದರು.


ಅರಂತೋಡು ಗ್ರಾಮ ಪಂಚಾಯತ್ ವತಿಯಿಂದ ಕುಲ್ಚಾರು ಸೇತುವೆಯ ಬಳಿ ನಿರ್ಮಾಣಗೊಂಡಿರುವ ಅಮೃತ ಉದ್ಯಾನವನ, ಕೊಡೆಂಕಿರಿಯಲ್ಲಿ ನಿರ್ಮಾಣಗೊಳಿಸಿರುವ ಅಮೃತ ಮುಕ್ತಿಧಾಮ ಹಾಗೂ ಗ್ರಾಮ ಪಂಚಾಯಿತಿ ಕಚೇರಿ ಕಟ್ಟಡದ ತಾರಸಿಯಲ್ಲಿ ನಿರ್ಮಿಸಿರುವ ಅಮೃತ ಸಭಾಂಗಣದ ಉದ್ಘಾಟನೆಯನ್ನು ಮಾರ್ಚ್ ೨೫ರಂದು ನೆರವೇರಿಸಿದ ಬಳಿಕ ಅವರು ಮಾತನಾಡಿದರು.


ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀಮತಿ ಹರಿಣಿ ದೇರಾಜೆ ವಹಿಸಿದ್ದರು. ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಎ.ವಿ. ತೀರ್ಥರಾಮ, ಸುಳ್ಯ ತಾ. ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಭವಾನಿ ಶಂಕರ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಹರೀಶ್ ಕಂಜಿಪಿಲಿ, ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷ ಶ್ರೀಮತಿ ಪುಷ್ಪ ಮೇದಪ್ಪ, ನಿವೃತ್ತ ಪ್ರಾಚಾರ್ಯ ಕೆ.ಆರ್. ಗಂಗಾಧರ್, ಅರಂತೋಡು – ತೊಡಿಕಾನ ಪ್ರಾ.ಕೃ. ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷ ಟಿ.ಎಂ. ಶಹೀದ್, ತೊಡಿಕಾನ ಮಲ್ಲಿಕಾರ್ಜುನ ದೇವಸ್ಥಾನದ ಆಡಳಿತ ಮೊಕ್ತೇಸರ ಕಿಶೋರ್ ಕುಮಾರ್ ಉಳುವಾರು, ಮಲ್ಲಿಕಾರ್ಜುನ ಭಜನಾ ಮಂಡಳಿ ಅಧ್ಯಕ್ಷ ಕೆ. ಆರ್. ಪದ್ಮನಾಭ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಂಪಾಜೆ ವಲಯ ಮೇಲ್ವಿಚಾರಕ ಸುಧೀರ್ ನೆಕ್ರಾಜೆ ಮುಖ್ಯ ಅತಿಥಿಗಳಾಗಿದ್ದರು.


ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್ ಗುಂಡಿ ಸ್ವಾಗತಿಸಿ, ಗ್ರಾಮ ಪಂಚಾಯಿತಿ ಸದಸ್ಯ ಶಿವಾನಂದ ಕುಕ್ಕುಂಬಳ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಗ್ರಾಮ ಪಂಚಾಯತ್ ಸದಸ್ಯ ಕೇಶವ ಅಡ್ತಲೆ ವಂದಿಸಿದರು. ದಯಾನಂದ ಪತ್ತುಕುಂಜ ಕಾರ್ಯಕ್ರಮ ನಿರೂಪಿಸಿದರು.


ಎಸ್ ಕೆ ಡಿ ಆರ್ ಡಿ ಪಿ ಯ ಸುಧೀರ್ ನೆಕ್ರಾಜೆ ಮತ್ತಿತರರನ್ನು ಸನ್ಮಾನಿಸಲಾಯಿತು. ಪಂಚಾಯತ್ ಉಪಾಧ್ಯಕ್ಷೆ ಶ್ವೇತ, ಪಂಚಾಯತ್ ಸದಸ್ಯರುಗಳು ಸಹಕರಿಸಿದರು.