ನಂದಕುಮಾರ್ ಅವರಿಗೆ ಕಾಂಗ್ರೆಸ್ ಸೀಟ್ ಕೈತಪ್ಪಿರುವ ಹಿನ್ನಲೆ

0


ತುರ್ತು ಸಭೆ ಸೇರಿದ ನಂದಕುಮಾರ್ ಅಭಿಮಾನಿ ಬಳಗ


ಸುಳ್ಯ ಬ್ಲಾಕ್ ಕಾಂಗ್ರೆಸ್ ವಿರುದ್ಧ ಭುಗಿಲೆದ್ದ ಅಸಮಾಧಾನ

ಸುಳ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದಿಂದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದ ಹೆಚ್.ಎಂ ನಂದಕುಮಾರ್ ಅವರಿಗೆ ಟಿಕೆಟ್ ನೀಡದೇ ಇರುವುದನ್ನು ಖಂಡಿಸಿ ಅಸಮಾಧಾನಗೊಂಡಿರುವ ಕಾಂಗ್ರೆಸ್ ಕಾರ್ಯಕರ್ತರು ಮತ್ತು ನಂದಕುಮಾರ್ ಅವರ ಅಭಿಮಾನಿ ಬಳಗದವರ ಸಭೆ ಮಾ.೨೬ರಂದು ಸುಳ್ಯ ಯುವಜನ ಸಂಯುಕ್ತ ಮಂಡಳಿಯಲ್ಲಿ ನಡೆಯಿತು.

ಸಭೆಯುದ್ದಕ್ಕೂ ನಂದಕುಮಾರ್ ಅವರಿಗೆ ಅವಕಾಶ ನೀಡದಿರುವುದಕ್ಕೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದ ದೃಶ್ಯ ಕಂಡು ಬಂತು. ನಾವು ಕಾಂಗ್ರೆಸ್ಸಿಗರು, ನಮಗೆ ಸುಳ್ಯದಲ್ಲಿ ಕಾಂಗ್ರೆಸ್ ಗೆಲ್ಲಬೇಕು ಎನ್ನುವ ಉದ್ದೇಶ ಇದೆ, ಹಾಗಾಗಿ ಜನರೊಂದಿಗೆ ಬೆರೆಯುವ, ಕ್ಷೇತ್ರದಲ್ಲಿ ಅಪಾರ ಜನ ಬೆಂಬಲ ಹೊಂದಿರುವ ನಂದಕುಮಾರ್ ಅವರಿಗೆ ಟಿಕೆಟ್ ನೀಡಬೇಕೆನ್ನುವುದು ನಮ್ಮ ಆಗ್ರಹವಾಗಿತ್ತು. ಅದನ್ನು ಪರಿಗಣಿಸದೇ ಹೈಕಮಾಂಡ್ ತಪ್ಪು ನಿರ್ಧಾರ ಮಾಡಿದೆ ಎಂದು ಕಾರ್ಯಕರ್ತರು ಆಕ್ರೊಶಿತರಾಗಿ ಹೇಳಿಕೊಂಡಿದ್ದಾರೆ.

ಹೆಚ್.ಎಂ ನಂದಕುಮಾರ್ ಅವರು ಕಳೆದ ನಾಲ್ಕು ವರ್ಷಗಳಿಂದ ಸುಳ್ಯ ಕ್ಷೇತ್ರದಲ್ಲಿ ನಿರಂತರವಾಗಿ ಓಡಾಡಿಕೊಂಡು ಕಾರ್ಯಕರ್ತರೊಂದಿಗೆ ಬೆರೆಯುತ್ತಾ ಪಕ್ಷವನ್ನು ತಳಮಟ್ಟದಿಂದ ಪಕ್ಷ ಸಂಘಟಿಸುತ್ತಿದ್ದಾರೆ. ಕೋವಿಡ್ ಸಮಯದಲ್ಲಿ ಕ್ಷೇತ್ರದ ಬಹುತೇಕ ಕಡೆ ಆಹಾರ ಕಿಟ್‌ಗಳನ್ನು ವಿತರಿಸಿ ಮನೆ ಮಾತಾಗಿದ್ದಾರೆ. ಪ್ರಬಲ ಜಾತ್ಯಾತೀತ ಸಿದ್ದಾತಂದೊಂದಿಗೆ ಕ್ಷೇತ್ರದಲ್ಲಿ ಎಲ್ಲರನ್ನು ಒಗ್ಗೂಡಿಸಿಕೊಂಡು ಹೋಗುತ್ತಿದ್ದ ಇವರಿಗೆ ಎಲ್ಲಾ ಜಾತಿ ಧರ್ಮದವರ ಬೆಂಬಲ ಹೊಂದಿದ್ದಾರೆ. ಅಂತಹ ನಾಯಕನನ್ನು ಕಡೆಗಣಿಸಿರುವುದು ಕಾಂಗ್ರೆಸ್‌ಗೆ ದೊಡ್ಡ ನಷ್ಟ ಉಂಟು ಮಾಡಲಿದೆ ಎಂದು ಸಭೆಯಲ್ಲಿದ್ದವರು ಹೇಳಿಕೊಂಡಿದ್ದಾರೆ.

ನಂದಕುಮಾರ್ ಅವರಿಗೆ ಟಿಕೆಟ್ ಸಿಕ್ಕಿದರೆ ಸುಳ್ಯದಲ್ಲಿ ಈ ಬಾರಿ ಕಾಂಗ್ರೆಸ್ ನೂರಕ್ಕೆ ನೂರು ಗೆಲುವು ಸಾಧಿಸುವುದರಲ್ಲಿ ಅನುಮಾನವಿಲ್ಲ. ಸುಳ್ಯ ಕ್ಷೇತ್ರದಲ್ಲಿ ನಂದಕುಮಾರ್ ಪರ ಅಲೆ ಇದೆ. ಕಾರ್ಯಕರ್ತರು ನಂದಕುಮಾರ್ ಪರವಾಗಿದ್ದಾರೆ. ಹಾಗಿದ್ದರೂ ಅವರನ್ನು ಕಡೆಗಣಿಸಿರುವ ಪಕ್ಷದ ವರಿಷ್ಠರ ತೀರ್ಮಾನ ಒಪ್ಪಲು ಸಾಧ್ಯವಿಲ್ಲ ಎಂದು ಸಭೆಯಲ್ಲಿದ್ದ ಅಸಮಾಧಾನಿತರು ಹೇಳಿಕೊಂಡಿದ್ದಾರೆ. ಇಲ್ಲಿ ಈ ಬಾರಿ ಕಾಂಗ್ರೆಸ್ ಗೆಲ್ಲುವ ಸಾಧ್ಯತೆ ನಿಶ್ಚಲವಾಗಿದ್ದರೂ ಕಾಂಗ್ರೆಸ್ ಹೈಕಮಾಂಡ್ ಮತ್ತೊಮ್ಮೆ ಇಲ್ಲಿ ಸೋಲಲು ತಪ್ಪು ನಿರ್ಧಾರ ಮಾಡಿದೆಯೇ ಎಂದು ಕೆಲವರು ಪ್ರಶ್ನಿಸಿದರು.

ಸುಳ್ಯ ಬ್ಲಾಕ್ ಸಮಿತಿಯಾಗಲೀ, ಜಿಲ್ಲಾ ಕಾಂಗ್ರೆಸ್ ಸಮಿತಿಯಾಗಲೀ ಕಾರ್ಯಕರ್ತರಲ್ಲಿ ಯಾವುದೇ ಅಭಿಪ್ರಾಯ ಕೇಳದೇ ಏಕಾ ಏಕಿ ನಾಯಕರ ಮಾತಿನಂತೆ ಸುಳ್ಯದಲ್ಲಿ ಯಾವೊಬ್ಬ ಕಾರ್ಯಕರ್ತರಿಗೂ ಪರಿಚಯವಿಲ್ಲದ, ಮತದಾರರಿಗೂ ಒಳವಿಲ್ಲದ ಜಿ.ಕೃಷ್ಣಪ್ಪ ಅವರಿಗೆ ಟಿಕೆಟ್ ನೀಡಿ ಮೂವತ್ತು ವರ್ಷಗಳಿಂದ ಈ ಬಾರಿ ಗೆಲುವಿನಂಚಿನಲ್ಲಿದ್ದ ಸುಳ್ಯ ಕ್ಷೇತ್ರಕ್ಕೆ ನಿರಾಶೆ ಉಂಟು ಮಾಡಿದ್ದಾರೆ. ಹಾಗಾಗಿ ಕೂಡಲೇ ಬಿ ಫಾರಂನ್ನು ನಂದಕುಮಾರ್ ಅವರಿಗೆ ನೀಡುವ ಮೂಲಕ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವಿಗೆ ಅವಕಾಶ ನೀಡುವಂತೆ ಮಾಡಬೇಕು. ಇಲ್ಲದಿದ್ದರೆ ಸಾವಿರಾರು ಕಾರ್ಯಕರ್ತರು ತಟಸ್ಥರಾಗಿ ಇದ್ದುಕೊಂಡು ಪಕ್ಷದ ಯಾವುದೇ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ ಎಂದು ಕಾರ್ಯಕರ್ತರು ಅಭಿಪ್ರಾಯ ವ್ಯಕ್ತಪಡಿಸಿದರು.

ನಾವು ಸಭೆ ಸೇರಿರುವುದು ಪಕ್ಷದ ಗೆಲ್ಲುವ ಅಭ್ಯರ್ಥಿ ನಂದಕುಮಾರ್ ಅವರಿಗೆ ಟಿಕೆಟ್ ನೀಡಬೇಕೆನ್ನುವ ಉದ್ದೆಶಕ್ಕೆ ಹೊರತು ಪಕ್ಷ ವಿರೋಧಿಯಾಗಿ ಸಭೆ ನಡೆಸಿದ್ದಲ್ಲ. ನಮ್ಮ ಬೇಡಿಕೆಯನ್ನು ಮನ್ನಿಸದಿದ್ದರೆ ಅದರ ಪರಿಣಾಮ ಮುಂದಕ್ಕೆ ಎದುರಿಸಬೇಕಾದೀತು ಎಂದು ಕಾರ್ಯಕರ್ತರು ಎಚ್ಚರಿಕೆ ನೀಡಿದರು.

ಕಾಂಗ್ರೆಸ್ ಕಾರ್ಯಕರ್ತರಗಳಾದ ಸಚಿನ್ ರಾಜ್ ಶೆಟ್ಟಿ, ಗೋಕುಲ್ ದಾಸ್, ಭವಾನಿ ಶಂಕರ್ ಕಲ್ಮಡ್ಕ, ಅನಿಲ್ ರೈ ಬೆಳ್ಳಾರೆ, ಸತ್ಯ ಕುಮಾರ್ ಅಡಿಂಜ, ಜಗನ್ನಾಥ್ ಪೂಜಾರಿ, ದೇವಿಪ್ರಸಾದ್ ಕುತ್ಪಾಜೆ, ಬಿ ಲಕ್ಷ್ಮಣಗೌಡ ಬೊಳ್ಳಾಜೆ, ಲೋಕೇಶ್ ಹಾಕ್ರಿಕಟ್ಟೆ, ಮುತ್ತಪ್ಪ ಪೂಜಾರಿ, ಕಮಲಾಕ್ಷ ಕೊಲ್ಲಮೊಗ್ರ, ಜಂಶೀರ್ ಶಾಲೆ ಕರ್, ತೇಜ ಕುಮಾರ್ ಬಾಳುಗೋಡು, ಅಬ್ಬಾಸ್ ಎಬಿ, ಚೇತನ್ ಕಜಗದ್ದೆ, ಸುರೇಶ್ ಹಳೆ ಗೇಟು, ಬಶೀರ್ ಬೆಳ್ಳಾರೆ ಮೊದಲಾದವರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿ ನಂದಕುಮಾರ್ ರವರಿಗೆ ಕಾಂಗ್ರೆಸ್ ಪಕ್ಷದಿಂದ ಬಿ ಫಾರಂ ನೀಡುವಂತೆ ಆಗ್ರಹಿಸಿದರು.

ಸಂಜೆ ೪ ಗಂಟೆಗೆ ಇದೇ ರೀತಿಯ ಕಾರ್ಯಕರ್ತರ ಸಭೆಯನ್ನು ಕಡಬದಲ್ಲಿ ನಡೆಸಲಿದ್ದು ಕಾರ್ಯಕರ್ತರ ಒಮ್ಮತದ ಅಭಿಪ್ರಾಯವನ್ನು ಮನವಿ ಮೂಲಕ ಕಾರ್ಯಕರ್ತರ ಸಮೂಹವೇ ಬೆಂಗಳೂರಿಗೆ ನಾಳೆ ತೆರಳಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಮೊದಲಾದ ಮುಖಂಡರುಗಳನ್ನು ಭೇಟಿ ನೀಡಿ ಮನವಿ ನೀಡಲು ತೀರ್ಮಾನ ಕೈಗೊಳ್ಳುವುದಾಗಿ ಸಭೆಯಲ್ಲಿ ಚರ್ಚೆ ನಡೆಯಿತು.

ಸಚಿನ್ ರಾಜ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಭವಾನಿ ಶಂಕರ್ ಕಲ್ಮಡ್ಕ ಸ್ವಾಗತಿಸಿ, ಗೋಕುಲ್ ದಾಸ್ ಪ್ರಾಸ್ತಾವಿಕವಾಗಿ ಮಾತನಾಡಿದರು.