ಚುನಾವಣೆಗೆ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಸಿದ್ಧತೆ

0

ಕ್ಷೇತ್ರದಲ್ಲಿ 231 ಮತಗಟ್ಟೆಗಳು, ಎರಡು ಲಕ್ಷಕ್ಕೂ ಅಧಿಕ ಮತದಾರರು

ನಿರ್ಭೀತಿಯಿಂದ ಮತದಾನ ಮಾಡಲು ಚುನಾವಣಾಧಿಕಾರಿ ಮನವಿ

ಮೇ. 10 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಸುಳ್ಯ ವಿಧಾನಸಭಾ ಕ್ಷೇತ್ರ ಪೂರ್ಣವಾಗಿ ಸಿದ್ಧವಾಗಿದೆ ಎಂದು ಕ್ಷೇತ್ರದ ಚುನಾವಣಾಧಿಕಾರಿಯಾಗಿರುವ ಜಿಲ್ಲಾ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕ ಅರುಣ್‌ಕುಮಾರ್ ಸಾಂಗವಿ ತಿಳಿಸಿದ್ದಾರೆ.

ಸುಳ್ಯ ತಾಲೂಕು ಕಚೇರಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಚುನಾವಣೆಗೆ ನೀತಿ ಸಂಹಿತೆ ನಿನ್ನೆಯಿಂದಲೇ ಜಾರಿಗೆ ಬಂದಿದೆ. ನೀತಿ ಸಂಹಿತೆಯ ಉಲ್ಲಂಘನೆಯ ಪ್ರಕರಣಗಳು ಕಂಡುಬಂದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ನೀತಿ ಸಂಹಿತೆಯ ಪ್ರಕರಣ ಕಂಡು ಬಂದರೆ ಆಪ್ ಮೂಲಕವೂ ದೂರು ಸಲ್ಲಿಸಬಹುದು ಎಂದು ಹೇಳಿದರು.

ಸುಳ್ಯ ಮತ್ತು ಕಡಬ ತಾಲೂಕುಗಳು ಸುಳ್ಯ ವಿಧಾನಸಭಾ ಕ್ಷೇತ್ರಕ್ಕೆ ಒಳಪಟ್ಟಿದ್ದು, ಸುಳ್ಯ ತಾಲೂಕಿನಲ್ಲಿ 119 ಮತ್ತು ಕಡಬದಲ್ಲಿ 112 ಮತಗಟ್ಟೆಗಳಿದ್ದು, ಒಟ್ಟು 231 ಮತಗಟ್ಟೆಗಳಿವೆ. ಗ್ರಾಮೀಣ ಪ್ರದೇಶದಲ್ಲಿ 208 ಮತ್ತು ನಗರ ಪ್ರದೇಶದಲ್ಲಿ 23 ಮತಗಟ್ಟೆಗಳಿವೆ. 2, 01, 976 ಮತದಾರರಿದ್ದು, ಮತದಾರರ ಪಟ್ಟಿಗೆ ಸೇರ್ಪಡೆಗೊಳ್ಳಲು ಎ. 11 ರವರೆಗೆ ಅವಕಾಶ ಇದೆ ಎಂದು ಅವರು ಹೇಳಿದರು.

ರಾಜಕೀಯ ಕಾರ್ಯಕ್ರಮಗಳಿಗೆ ಅನುಮತಿ ಪಡೆಯುವುದು ಕಡ್ಡಾಯ. ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಬಹುದು. ಆದರೆ ಅಲ್ಲಿ ರಾಜಕೀಯ ವ್ಯಕ್ತಿಗಳ ಚಟುವಟಿಕೆ ಇರಬಾರದು. ಖಾಸಗಿ ಕಾರ್ಯಕ್ರಮಗಳಲ್ಲೂ ರಾಜಕೀಯ ವ್ಯಕ್ತಿಗಳ ಚಟುವಟಿಕೆ ಇರಬಾರದು. ಅನುಮತಿಗೆ ಸಂಬಂಧಪಟ್ಟ ಹಾಗೆ ತಾಲೂಕು ಕಚೇರಿಯಲ್ಲಿ ಏಕಗವಾಕ್ಷಿ ಪದ್ಧತಿ ಇರುತ್ತದೆ ಎಂದು ಚುನಾವಣಾಧಿಕಾರಿ ಮಾಹಿತಿ ನೀಡಿದರು.

ಚುನಾವಣಾ ಅಕ್ರಮ ತಡೆಗಟ್ಟುವ ನಿಟ್ಟಿನಲ್ಲಿ ಅಲ್ಲಲ್ಲಿ ಪೊಲೀಸ್ ಚೆಕ್‌ಪೋಸ್ಟ್‌ಗಳನ್ನು ತೆರೆಯಲಾಗಿದೆ. ಆಲೆಟ್ಟಿ, ಮಂಡೆಕೋಲು, ಜಾಲ್ಸೂರುಗಳಲ್ಲಿ ಅಂತರಾಜ್ಯ ಗಡಿ ಚೆಕ್‌ಪೋಸ್ಟ್ ಹಾಗೂ ಸಂಪಾಜೆ ಮತ್ತು ಗುಂಡ್ಯದ ಎರಡು ಕಡೆ ಅಂತರ್‌ಜಿಲ್ಲಾ ಚೆಕ್‌ಪೋಸ್ಟ್‌ಗಳನ್ನು ತೆರೆಯಲಾಗಿದೆ. ಚುನಾವಣಾ ಸಿಬ್ಬಂದಿಗಳಿಗೆ ಈಗಾಗಲೇ ಒಂದು ಹಂತದ ತರಬೇತಿ ನೀಡಲಾಗಿದೆ ಎಂದು ಅವರು ಹೇಳಿದರು.

80 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರಿಗೆ, ವಿಕಲಚೇತನರಿಗೆ, ಕೋವಿಡ್ ಬಾಧಿತರಿಗೆ ಮನೆಯಿಂದಲೇ ಮತ ನೀಡುವ ಪ್ರಕ್ರಿಯೆ ಈ ಬಾರಿ ಜಾರಿಯಲ್ಲಿದೆ ಎಂದು ಹೇಳಿದ ಅವರು, ಚುನಾವಣಾ ಬಹಿಷ್ಕಾರದ ಬ್ಯಾನರ್ ಕುರಿತು ಮಾಹಿತಿ ಬಂದರೆ ಅದನ್ನು ತೆರವುಗೊಳಿಸಲಾಗುವುದು. ಅವರನ್ನು ಮನವೊಲಿಸಿ ಮತದಾನ ಮಾಡುವಂತೆ ಪ್ರೇರೇಪಿಸಲಾಗುವುದು ಎಂದು ಹೇಳಿದರು.

ಚುನಾವಣಾ ಅಧಿಸೂಚನೆ ಪ್ರಕಟಗೊಳ್ಳುವ ಎ. 13 ರಿಂದಲೇ ನಾಮಪತ್ರ ಸಲ್ಲಿಕೆ ಆರಂಭಗೊಳ್ಳಲಿದೆ. ರಜಾದಿನ ಹೊರತುಪಡಿಸಿ ಪೂ. 11 ರಿಂದ 3 ಗಂಟೆಯ ಒಳಗೆ ನಾಮಪತ್ರ ಸಲ್ಲಿಸಬಹುದು ಎಂದವರು ಹೇಳಿದರು.

ಚುನಾವಣೆಗೆ ಸಂಬಂಧಪಟ್ಟ ಹಾಗೆ ಸುಳ್ಯ ತಾಲೂಕು ಕಚೇರಿಯಲ್ಲಿ ಕಂಟ್ರೋಲ್ ರೂಂ ತೆರೆಯಲಾಗಿದೆ. ಅಗತ್ಯವುಳ್ಳವರು 08257-231231 ಸಂಪರ್ಕಿಸಬಹುದು ಅಥವಾ ಚುನಾವಣಾಧಿಕಾರಿಗಳನ್ನೂ (9916326521) ಸಂಪರ್ಕಿಸಬಹುದು ಎಂದು ಹೇಳಿದ ಅವರು, ನಿರ್ಭೀತ ಚುನಾವಣೆಗೆ ಎಲ್ಲರೂ ಸಹಕಾರ ನೀಡಬೇಕೆಂದು ಕೋರಿದರು.

ಸಹಾಯಕ ಚುನಾವಣಾಧಿಕಾರಿಗಳಾದ ಸುಳ್ಯ ತಹಶೀಲ್ದಾರ್ ಜಿ. ಮಂಜುನಾಥ್, ಕಡಬ ತಹಶೀಲ್ದಾರ್ ರಮೇಶ್ ಬಾಬು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.