ಬೆಳ್ಳಾರೆ ಬಂಗ್ಲೆಗುಡ್ಡೆಯಲ್ಲಿ ಅಮರಸುಳ್ಯದ ಕ್ರಾಂತಿಯ ನೆನಪು

0

1837 ರಲ್ಲಿ ನಡೆದ ಅಮರಸುಳ್ಯ ಕ್ರಾಂತಿಯ ನೆನಪಿಗಾಗಿ ಕೆಪಿಎಸ್ ಬೆಳ್ಳಾರೆ ಇದೆ ಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳು ಎ.05 ರಂದು ಬೆಳ್ಳಾರೆಯ ಬಂಗ್ಲೆಗುಡ್ಡೆಗೆ ಭೇಟಿ ನೀಡಿದರು. ಈ ಸಂದರ್ಭಲ್ಲಿ ಸ್ಥಳೀಯ ಇತಿಹಾಸಕಾರರಾದ ಗೋಪಾಲ ಪೆರಾಜೆಯವರು 1837 ರಲ್ಲಿ ನಡೆದ ಅಮರ ಸುಳ್ಯ ಹೋರಾಟ ಮಹತ್ವವನ್ನು ವಿದ್ಯಾರ್ಥಿಗಳೊಂದಿಗೆ ಸಂವಾದ ಮೂಲಕ ಪರಿಚಯಿಸಿದರು. ಬೆಳ್ಳಾರೆಯಲ್ಲಿ ಅಮರ ಸುಳ್ಯ ಕ್ರಾಂತಿ ಏಕೆ ನಡೆಯಿತು? ಕಾರಣ ಹಾಗೂ ಹೋರಾಟದ ಪರಿಸ್ಥಿತಿಯನ್ನು ವಿವರಿಸಿದರು.

ಹಾಲೇರಿ ಮನೆತನದ ಚಿಕ್ಕವೀರರಾಜೇಂದ್ರನನ ಪ್ರಾಂತ್ಯಕ್ಕೆ ಸೇರಿದ ಬೆಳ್ಳಾರೆಯ ಪ್ರಮುಖ ಕೇಂದ್ರವಾಗಿತ್ತು. 1834 ರಲ್ಲಿ ಬ್ರಿಟಿಷರು ಚಿಕ್ಕವೀರರಾಜೇಂದ್ರನನ್ನು ಬದಿಗೊತ್ತಿ ನೇರ ಆಳ್ವಿಕೆಯನ್ನು ಈಸ್ಟ್ ಇಂಡಿಯಾ ಕಂಪನಿ ಪಡೆಯಿತು. ನಂತರ ಕಂದಾಯ ವ್ಯವಸ್ಥೆಯಲ್ಲಿ ಬದಲಾವಣೆಗೊಂಡಾಗ ಸ್ಥಳೀಯ ರೈತರು ಅಕ್ರೋಶವನ್ನು ವ್ಯಕ್ತಪಡಿಸಿದರು. ಇದರಿಂದ ದವಸ ಧಾನ್ಯದ ರೂಪದ ಬದಲಾಗಿ ನಗದು ರೂಪದ ಕಂದಾಯವನ್ನು ಈಸ್ಟ್ ಇಂಡಿಯಾ ಕಂಪನಿಯು ರೈತರಿಂದ ಸಂಗ್ರಹಿಸಿತು. ಬೆಳ್ಳಾರೆ ಸಮೀಪದ ಬಂಗ್ಲೆ ಗುಡ್ಡೆಯಲ್ಲಿ ಖಜಾನೆ ಸ್ಥಾಪಿಸಿ ಕಂದಾಯ ಸಂಗ್ರಹಿಸಲಾಯಿತು. ಈ ವಿಷಯವನ್ನು ತಿಳಿದ ಸ್ಥಳೀಯ ಹೋರಾಟಗಾರರಾದ ಕೆದಂಬಾಡಿ ರಾಮಯ್ಯ ಗೌಡ, ಅಪರಂಪರಾ ಸ್ವಾಮಿ, ಕಲ್ಯಾಣ ಸ್ವಾಮಿ ಯಾನೆ ಪುಟ್ಟಬಸಪ್ಪ, ಹುಲಿ ಕಡಿದ ನಂಜಯ್ಯ ಇವರುಗಳ ನಾಯಕತ್ವದಲ್ಲಿ, ಪುಟ್ಟಬಸಪ್ಪನನ್ನು ಹಾಲೇರಿ ವಂಶದ ನಾಯಕನೆಂದು ಪ್ರಚಾರ ಮಾಡಿದರು. ಹಾಗೂ ಉಬರಡ್ಕ ಸಮೀಪದ ಪುಮಾಲೆ ಬೆಟ್ಟದಲ್ಲಿ ಗುಪ್ತವಾಗಿ ಇರಿಸಿದರು. ನಂತರ ಈ ಸ್ಥಳಿಯ ಹೋರಾಟಗಾರರು ಬೆಳ್ಳಾರೆಯ ಬಂಗ್ಲೆ ಗುಡ್ಡೆಯ ಕಡೆ ಬಂದು ಅದನ್ನು ವಶಪಡಿಸಿಕೊಂಡರು. ಇಲ್ಲಿಂದಲೇ ಸ್ಥಳೀಯ ಹೋರಾಟಗಾರರು ಮೂರು ತಂಡಗಳಾಗಿ ಭಾಗಗಳಾಗಿ ಮಂಗಳೂರು, ಪುತ್ತೂರು, ಸುಬ್ರಮಣ್ಯ, ಮಂಜೇಶ್ವರ ಕಾಸರಗೋಡು ಹೀಗೆ ಬೇರೆ ಬೇರೆ ಕಡೆ ನಡೆದರು. ಮಂಗಳೂರು ಕಡೆ ಹೊರಟ ಕೆದಂಬಾಡಿ ರಾಮಣ್ಣಗೌಡರು ನೇತೃತ್ವದ ಹೋರಾಟಗಾರರು ಬ್ರಿಟಿಷರಿಂದ ಮಂಗಳೂರನ್ನು ವಶಪಡಿಸಿಕೊಂಡರು ಹಾಗೂ 13 ದಿನಗಳ ಕಾಲ ಸ್ವತಂತ್ರವಾಗಿ ಮಂಗಳೂರಿನ ಸ್ಥಳೀಯ ಹೋರಾಟಗಾರರು ಆಳ್ವಿಕೆ ನಡೆಸಿದರು. ಹೀಗೆ ಅಮರ ಸುಳ್ಯ ಹೋರಾಟದಿಂದ ಪ್ರಾರಂಭಗೊಂಡು ಮಂಗಳೂರಿನಲ್ಲಿ ತನಕ ತಲುಪಿ 13 ದಿನಗಳ ಕಾಲ ಸ್ವತಂತ್ರ ಆಳ್ವಿಕೆಯ ಘಟನೆಗಳನ್ನು ಗೋಪಾಲ ಪೆರಾಜೆರವರು ವಿದ್ಯಾರ್ಥಿಗಳಿಗೆ ಬಿಡಿಸಿ ಹೇಳಿದರು.

ಈ ಸಂದರ್ಭದಲ್ಲಿ ಎಸ್ ಡಿ ಎಂ ಸಿ ಕಾರ್ಯಾಧ್ಯಕ್ಷರಾದ ಶ್ರೀನಾಥ ಬಾಳಿಲ ಉಪಸ್ಥಿತರಿದ್ದರು. ಕೆಪಿಎಸ್ ಪ್ರಾಥಮಿಕ ವಿಭಾಗದ ಸಹ ಶಿಕ್ಷಕರಾದ ದಿನೇಶ ಗೌಡ ಕೆ ಪ್ರಾಸ್ತಾವಿಕವಾಗಿ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿದರು. ಕೆಪಿಎಸ್ ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯರಾದ ಮಾಯಿಲ್ಲಪ್ಪ ಜಿ ವಂದನಾರ್ಪಣೆಗೈದರು. ಸಹ ಶಿಕ್ಷಕ ರಾಜನಾಯಕ ಕಾರ್ಯಕ್ರಮ ನಿರ್ವಹಿಸಿದರು. ಸುಮಾರು ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.