ಬೆಳ್ಳಾರೆ ಒತ್ತೆಕೋಲ : ಧಾರ್ಮಿಕ ಸಭಾ ಕಾರ್ಯಕ್ರಮ

0

ಬೆಳ್ಳಾರೆಯ ಅಜಪಿಲ‌ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದಲ್ಲಿ ಶ್ರೀ ಮಹಾವಿಷ್ಣುಮೂರ್ತಿ ದೈವದ ಒತ್ತೆಕೋಲವು ಇಂದು ಮತ್ತು ನಾಳೆ ನಡೆಯಲಿದೆ.
ಇಂದು ಸಂಜೆ ಭಂಡಾರ ತೆಗೆದು ಬಳಿಕ ಮೇಲೇರಿಗೆ ಅಗ್ನಿಸ್ಪರ್ಶ ಮಾಡಲಾಯಿತು. ಬಳಿಕ ಅಜಪಿಲ ಶ್ರೀ ಮಹಾವಿಷ್ಣುಮೂರ್ತಿ ಸೇವಾ‌ ಸಮಿತಿ ಬೆಳ್ಳಾರೆ ಇದರ ಅಧ್ಯಕ್ಷ ಶೇಷಪ್ಪ ಕುಲಾಲ್ ಬಸ್ತಿಗುಡ್ಡೆಯವರ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭಾ‌ ಕಾರ್ಯಕ್ರಮ ನಡೆಯಿತು.

ಡಿವೈನ್ ಪಾರ್ಕ್ ಸಾಲಿಗ್ರಾಮ ಇದರ ಪದಾಧಿಕಾರಿ ಬಿ.ಎಸ್. ಯಶವಂತ ಧಾರ್ಮಿಕ ಉಪನ್ಯಾಸ ನೀಡಿದರು. ಬೆಳ್ಳಾರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಶ್ರೀರಾಮ ಪಾಟಾಜೆ, ಕೊಳಂಬಳ ಶ್ರೀ ರಕ್ತೇಶ್ವರಿ ದೈವಸ್ಥಾನದ ಅಧ್ಯಕ್ಷ ವಿಶ್ವನಾಥ ಪೂಜಾರಿ, ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಬೆಳ್ಳಾರೆ ಇದರ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುರೇಶ್ ಕುಮಾರ್ ಶೆಟ್ಟಿ ಪನ್ನೆಗುತ್ತು ಅತಿಥಿಗಳಾಗಿ ಭಾಗವಹಿಸಿದ್ದರು. ಸಮಿತಿಯ ಗೌರವಾಧ್ಯಕ್ಷ ಆನಂದ ರೈ ಪುಡ್ಕಜೆ ಮತ್ತು ಬೆಳ್ಳಾರೆ ಸ್ನೇಹಿತರ ಕಲಾ ಸಂಘದ ಅಧ್ಯಕ್ಷ ವಸಂತ ಉಲ್ಲಾಸ್ ಪಡ್ಪು, ಸಮಿತಿಯ ನಿಕಟಪೂರ್ವಾಧ್ಯಕ್ಷ ಆನಂದ ಗೌಡ ಪಡ್ಪು, ಕಾರ್ಯದರ್ಶಿ ಸಂಜಯ್ ನೆಟ್ಟಾರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕು. ಶ್ರೇಯಾ ಕುರುಂಬುಡೇಲು ಪ್ರಾರ್ಥಿಸಿದರು. ಸಮಿತಿ ಸದಸ್ಯ ಚೇತನ್ ಸ್ವಾಗತಿಸಿದರು. ಪ್ರದೀಪ್ ಕುಮಾರ್ ರೈ ಪನ್ನೆ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಶ್ರೀ ಮಹಾವಿಷ್ಣುಮೂರ್ತಿ ದೈವದ ಕುಳಿಚಟ್ಟು ನಡೆಯಲಿದೆ. ಬಳಿಕ ಜಿಲ್ಲೆಯ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಯಕ್ಷಗಾನ ಬಯಲಾಟ ಜಾಂಬವತಿ ಕಲ್ಯಾಣ ನಡೆಯಲಿದೆ. ಏ. 8 ರಂದು ಪ್ರಾತಃಕಾಲ 5.00 ಗಂಟೆಗೆ ಶ್ರೀ ವಿಷ್ಣುಮೂರ್ತಿ ದೈವದ ಅಗ್ನಿ ಪ್ರವೇಶ, ಶ್ರೀ ಮಹಾಲಿಂಗೇಶ್ವರ ದೇವರ ಭೇಟಿ ನಂತರ ಮಾರಿಕಳ ನಡೆದು ಪ್ರಸಾದ ವಿತರಣೆ ನಡೆಯಲಿದೆ. ಬಳಿಕ ಮುಳ್ಳು ಗುಳಿಗ ದೈವದ ಕೋಲ ನಡೆಯಲಿದೆ.