ಕುಜುಂಬಾರು – ಇಜ್ಜಿನಡ್ಕ ಸೇತುವೆಗಾಗಿ ಮತದಾನ ಬಹಿಷ್ಕಾರದ ಬ್ಯಾನರ್ ಅಳವಡಿಕೆ

0

ತೆರವು ಮಾಡಲು ಬಂದ ಪಿಡಿಒ : ಸೇತುವೆ ಮಾಡಿ ಬ್ಯಾನರ್ ತೆಗೆಯುತ್ತೇವೆಂದ ಊರವರು

ಊರವರ ಮನವೊಲಿಸಿ ಬ್ಯಾನರ್ ತೆರವು ಮಾಡಿದ ಪಿಡಿಒ

ಐನೆಕಿದು ಗ್ರಾಮದ ಕುಜುಂಬಾರು – ಇಜ್ಜಿನಡ್ಕ ಪರಿಸರದ ಜನರ ಬೇಡಿಕೆಯಾದ ಕುಜುಂಬಾರಿನಲ್ಲಿ ಹರಿಯುವ ನದಿಗೆ ಸೇತುವೆ ಆಗಬೇಕೆಂಬ ಬೇಡಿಕೆ ಈಡೇರದಿದ್ದುದರಿಂದ ಇಂದು ಬೆಳಗ್ಗೆ ಕಲ್ಲಾಜೆ ಜಂಕ್ಷನ್‌ನಲ್ಲಿ ಊರವರು ಸೇರಿ ಮತದಾನ ಬಹಿಷ್ಕಾರದ ಬ್ಯಾನರ್ ಅಳವಡಿಸಿದ್ದರು. ಇದು ಸುದ್ದಿ ಮಾಧ್ಯಮದಲ್ಲಿಯೂ ಪ್ರಸಾರವಾಗಿತ್ತು. ಬ್ಯಾನರ್ ಅಳವಡಿಸಿದ ವಿಷಯ ತಿಳಿದ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಪಿಡಿಒ ರವರು ಮಧ್ಯಾಹ್ನದ ವೇಳೆಗೆ ಕಲ್ಲಾಜೆಗೆ ಬಂದು ಬ್ಯಾನರ್ ತೆರವಿಗೆ ಮುಂದಾದರೆಂದೂ, ಇದನ್ನು ತಿಳಿದ ಊರವರು ಸೇರಿ ಪಿಡಿಒರವರಿಗೆ ಬ್ಯಾನರ್ ತೆರವು ಮಾಡದಂತೆ ಕೇಳಿಕೊಂಡರೆನ್ನಲಾಗಿದೆ.
ನಾವು ಸುಮಾರು ೩೦ ವರ್ಷಗಳಿಂದ ಈ ಭಾಗದಲ್ಲಿ ಸೇತುವೆ ಆಗಬೇಕೆಂದು ಮನವಿ ಮಾಡುತ್ತಿzವೆ. ಆಗ ಅಧಿಕಾರಿಗಳಾಗಲೀ, ಜನಪ್ರತಿನಿಧಿಗಳಾಗಲೀ ನಮ್ಮ ಬೇಡಿಕೆಗೆ ಸ್ಪಂದನೆ ನೀಡುವುದಿಲ್ಲ. ಈಗ ಬ್ಯಾನರ್ ಅಳವಡಿಸಿದಾಗ ಯಾಕೆ ಬರುತ್ತೀರಿ ಎಂದು ಪ್ರಶ್ನಿಸಿದರಲ್ಲದೇ ಮೊದಲು ಸೇತುವೆ ಮಾಡಿ ಕೊಡಿ. ನಾವು ಹಾಕಿದ ಬ್ಯಾನರ್ ನಾವೇ ತೆಗೆಯುತ್ತೇವೆ ಎಂದು ಊರವರು ಹೇಳಿದರೆನ್ನಲಾಗಿದೆ.

ಕೆಲ ಹೊತ್ತು ಅವರೊಳಗೆ ಮಾತಿನ ವಿನಿಮಯವಾಗಿ ಪಿಡಿಒ ಆಕಾಶ್ ರವರು ಊರವರಲ್ಲಿ ಚುನಾವಣಾ ಆಯೋಗದ ನಿಯಮದಂತೆ ಇದು ತೆಗೆಯಲೇಬೇಕು. ನೀವು ಇಂದೇ ನನಗೆ ಮನವಿ ಕೊಡಿ. ನಿಮ್ಮ ಬೇಡಿಕೆಯನ್ನು ನಾನು ಸಂಬಂಧಿಸಿದವರಿಗೆ ರವಾನಿಸುತ್ತೇನೆಂಬ ಭರವಸೆ ನೀಡಿದರೆನ್ನಲಾಗಿದೆ. ಪಿಡಿಒರವರ ಕೇಳಿಕೆಯ ಮೇರೆಗೆ ಊರವರು ಬ್ಯಾನರ್ ತೆರವಿಗೆ ಒಪ್ಪಿದರೆಂದು ತಿಳಿದು ಬಂದಿದೆ.