ಈ ಬಾರಿ ಅಂಗಾರರಿಗೇ ಬಿಜೆಪಿ ಟಿಕೆಟ್ ನೀಡಲಿ: ದಲಿತ ಮುಖಂಡರ ಒತ್ತಾಯ

0

ವಿಧಾನ ಸಭಾ ಚುನಾವಣೆಗೆ ಈ ಬಾರಿ ಸುಳ್ಯ ವಿಧಾನ ಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸಚಿವ ಎಸ್.ಅಂಗಾರರಿಗೇ ಟಿಕೆಟ್ ನೀಡಬೇಕು. ಅವರ ಪರವಾಗಿ ದಲಿತ ಸಮಾಜ ಇದೆ ಎಂದು ದಲಿತ ಮುಖಂಡರಾದ ಅಕ್ರಮ -ಸಕ್ರಮ ಸಮಿತಿಯ ಮಾಜಿ ಸದಸ್ಯ ಬಾಳಪ್ಪ ಮಣಿಮಜಲು, ಬಿಜೆಪಿ ಎಸ್ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ವಿಜಯ ಆಲಡ್ಕ, ಮೊಗೇರ ಸಮಾಜದ ಕೋಶಾಧಿಕಾರಿ ವಸಂತ ಚತ್ರಪ್ಪಾಡಿ ಹೇಳಿದ್ದಾರೆ.
ಎ.೧೦ರಂದು ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಅಂಗಾರರು ಭ್ರಷ್ಟಾಚಾರ ರಹಿತ, ಪ್ರಾಮಾಣಿಕ ಸೇವೆಯನ್ನು ಸಮಾಜಕ್ಕೆ ನೀಡಿದ್ದಾರೆ. ಸರಕಾರದಿಂದ ಅನುದಾನ ತರಿಸಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಪಕ್ಷ ಜಾತಿ, ಧರ್ಮ ನೋಡದೇ ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಈ ಬಾರಿ ಅವರಿಗೇ ಬಿಜೆಪಿ ಟಿಕೆಟ್ ನೀಡಬೇಕು. ಪರಿಶಿಷ್ಟ ಜಾತಿಯ ಮತದಾರರ ಒತ್ತಾಯ ಇದು ಎಂದು ಅವರು ಹೇಳಿದರು.
ಆದರೆ ಅಂಗಾರರ ಬಗ್ಗೆ ಮತದಾರರಿಗೆ ಅಸಮಾಧಾನ ಎಂದು ಬಿಂಬಿಸಲಾಗುತ್ತಿದ್ದು, ಕ್ಷೇತ್ರದಲ್ಲಿ ಯಾವುದೇ ಅಸಮಾಧಾನ ಇಲ್ಲ. ಆದರೆ ಕೆಲವು ನಾಯಕರು ಬದಲಾವಣೆ ಆಗಬೇಕೆಂದಷ್ಟೆ ಹೇಳುತ್ತಿರುವುದು ನಮ್ಮ ಗಮನಕ್ಕೆ ಬಂದಿದ್ದು ಕಾರ್ಯಕರ್ತರ ಮಾತಿಗೆ ಇಲ್ಲಿ ಬೆಲೆ ಸಿಗುತ್ತದೆ ಎಂಬ ವಿಶ್ವಾಸ ನಮಗಿದೆ ಎಂದು ಅವರು ಹೇಳಿದರು.
“ಇಂದು ಪ್ರಕಟವಾಗುವ ಬಿಜೆಪಿ ಪಟ್ಟಿಯಲ್ಲಿ ಅಂಗಾರರಿಗೇ ಅವಕಾಶ ಸಿಗಬೇಕು. ಒಂದು ವೇಳೆ ಬೇರೆಯವರ ಹೆಸರು ಇದ್ದರೆ ಅದನ್ನು ಮರುಪರಿಶೀಲನೆಗೆ ನಾವು ರಾಜ್ಯಾಧ್ಯಕ್ಷರಲ್ಲಿ ಒತ್ತಾಯಿಸುತ್ತೇವೆ ಎಂದ ಅವರು, ಇಲ್ಲಿ ಯಾರೂ ಆಕಾಂಕ್ಷಿಗಳೇ ಇಲ್ಲ. ಇದ್ದಿದ್ದರೆ ಅವರು ಬಹಿರಂಗವಾಗಿ ಹೇಳಬಹುದಿತ್ತು. ಕೊನೆ ಕ್ಷಣದಲ್ಲಿ ನನಗೂ ಅವಕಾಶ ಬೇಕೆಂದು ಕೆಲವರು ಕೇಳಿದರೆ ಅದು ಆಗುವಂತದ್ದಲ್ಲ. ಹೊಸಬರನ್ನು ನಿಲ್ಲಿಸಿದರೆ ಪಕ್ಷಕ್ಕೆ ಹಿನ್ನಡೆಯಾಗಬಹುದು. ಆದ್ದರಿಂದ ಈ ಬಾರಿ ಅಂಗಾರರೇ ಸೂಕ್ತ ಎಂಬುದು ನಮ್ಮ ಮನವಿ ಎಂದರು.
ಸುಳ್ಯದಲ್ಲಿ ಅಂಬೇಡ್ಕರ್ ಭವನ ಆಗಬೇಕಿತ್ತು. ಅದರಲ್ಲಿ ಹಿನ್ನಡೆಯಾಗಿದೆ. ಆದರೆ ಅದು ತಾಂತ್ರಿಕ ಕಾರಣದಿಂದ ಹೀಗಾಗಿದೆ ಎಂದು ನಮಗನಿಸುತ್ತದೆ. ಉಳಿದಂತೆ ಎಲ್ಲ ಕಡೆ ಅಭಿವೃದ್ಧಿ ಕೆಲಸಗಳು ಆಗಿದೆ ಎಂದು ಅವರು ವಿವರ ನೀಡಿದರು.