ಇನ್ನೂ ತಾಯಿ ಮಡಿಲು ಸೇರಿಲ್ಲ ಮರಿಯಾನೆ

0

ಆನೆಗಳ ಗುಂಪಿಗೆ ಸೇರಿಸಲು ಅರಣ್ಯ ಇಲಾಖೆ ಪ್ರಯತ್ನ

ನಿನ್ನೆ ಅಜ್ಜಾವರ ಗ್ರಾಮದ ತುದಿಯಡ್ಕದಲ್ಲಿ ‌ಕೆರೆಗೆ‌ ಬಿದ್ದು ಮೇಲೆತ್ತಲಾಗಿರುವ ಮೂರು ಆನೆಗಳು‌ ಕಾಡು ಸೇರಿದ್ದರೆ‌ ಮರಿಯಾನೆ ಇನ್ನೂ ತಾಯಿ‌ ಮಡಿಲು ಸೇರಿಲ್ಲ. ಇಂದು ದಿನವಿಡೀ ಅರಣ್ಯ ಇಲಾಖೆಯವರು ಪ್ರಯತ್ನ ನಡೆಸಿದರೂ ಫಲಪ್ರದವಾಗಿಲ್ಲ.

ಎ.12 ರಂದು ರಾತ್ರಿ‌ ತುದಿಯಡ್ಕದ ತೋಟಕ್ಕೆ ಬಂದಿದ್ದ ಕಾಡಾನೆಗಳ ಹಿಂಡಿನಲ್ಲಿದ್ದ ಎರಡು‌ ಮರಿಯಾನೆಗಳ ಸಹಿತ ನಾಲ್ಕು ಆನೆಗಳು ತೋಟದ ಕೆರೆಗೆ ಬಿದ್ದಿದ್ದವು.‌ ನಿನ್ನೆ ಬೆಳಗ್ಗೆ ವಿಷಯ ಗೊತ್ತಾಗಿ ಆ ಆನೆಗಳನ್ನು ಮೇಲೆತ್ತುವ ಕೆಲಸ ಆಯಿತು.‌ ಕೆರೆಯಿಂದ ಮೊದಲು ಮೇಲೆ ಬಂದ ಮೂರು ಆನೆಗಳು ಕಾಡು ಸೇರಿದರೆ ಮರಿಯಾನೆಯೊಂದು ಕಾಡು ಸೇರಿಲ್ಲ. ನಿನ್ನೆ ಆನೆಗಳ ಹಿಂಡು ಮರಿಯಾನೆಯನ್ನು ತನ್ನ ಜತೆ ಸೇರಿಸಿಕೊಳ್ಳದಿರುವ ಪರಿಣಾಮ ರಾತ್ರಿ ಕಾಡಂಚಿನಲ್ಲಿ ಕೂಗಾಡುತ್ತಾ ದಿನ ಕಳೆದಿತ್ತು.

ಇಂದು ಬೆಳಗ್ಗೆ ಅರಣ್ಯ ಇಲಾಖೆಯವರು ಮರಿಯಾನೆಯನ್ನು ಹಿಡಿದು ಆನೆಗಳ ಹಿಂಡಿನ ಜತೆ ಸೇರಿಸಲು ಮುಂದಾದರು. ಆನೆಗಳ ಗುಂಪು‌ ತುದಿಯಡ್ಕ ಭಾಗದಿಂದ ಬೆಳ್ಳಪ್ಪಾರೆ ಎಂಬಲ್ಲಿ ಇರುವ ಮಾಹಿತಿ ಪಡೆದ ಇಲಾಖೆಯವರು ಆನೆಮರಿಯನ್ನು ಪಿಕಪ್ ವಾಹನಕ್ಕೆ ಹತ್ತಿಸಿ ಬೆಳ್ಳಪ್ಪಾರೆ ಕಾಡಿಗೆ ಕೊಂಡೊಯ್ದರು.‌ ಆದರೆ ಇಲಾಖೆಯವರಿಗೆ ಬೆಳ್ಳಪ್ಪಾರೆ ಯಲ್ಲಿ ಆನೆಗಳ ಹಿಂಡು ಪತ್ತೆಯಾಗಿಲ್ಲ. ಸಂಜೆಯವರೆಗೆ ಇಲಾಖೆಯವರು ಪ್ರಯತ್ನ ಪಟ್ಟರಾದರೂ ಫಲಪ್ರವಾಗಿಲ್ಲ.

“ಮರಿಯಾನೆಯನ್ನು ಆನೆಗಳ ಗುಂಪಿಗೆ ಸೇರಿಸಲು ಪ್ರಯತ್ನ ಆಗುತ್ತಿದೆ. ಇಂದು ಮರಿಯಾನೆಯನ್ನು ಸೇರಿಸುವ ಕೆಲಸ ಆಗದಿದ್ದರೆ ನಾಳೆ ಮತ್ತೆ ಪ್ರಯತ್ನ ಮುಂದುವರಿಸುತ್ತೇವೆ” ಎಂದು ಸುಳ್ಯ ರೇಂಜರ್ ಮಂಜುನಾಥ ರು ತಿಳಿಸಿದ್ದಾರೆ.