ಸುಳ್ಯ ಪಕ್ಷೇತರ ಅಭ್ಯರ್ಥಿ ಗುರುವಪ್ಪ ಕಲ್ಲುಗುಡ್ಡೆ ನಾಮಪತ್ರ ಸಲ್ಲಿಕೆ

0

ಸುಳ್ಯ ವಿಧಾನಸಭಾ ಕ್ಷೇತ್ರ ಪಕ್ಷೇತರ ಅಭ್ಯರ್ಥಿಯಾಗಿ ಏ.20 ರಂದು ಗುರುವಪ್ಪ ಕಲ್ಲುಗುಡ್ಡೆ ನಾಮಪತ್ರ ಸಲ್ಲಿಸಿದರು. ಸುಳ್ಯ ಮಿನಿ ವಿಧಾನಸೌಧದ ಚುನಾವಣಾ ಕಚೇರಿಯಲ್ಲಿನ ಚುನಾವಣಾಧಿಕಾರಿ ಕಚೇರಿಯಲ್ಲಿ ಕ್ಷೇತ್ರದ ಚುನಾವಣಾಧಿಕಾರಿ ಅರುಣ್‌ಕುಮಾರ್ ಅವರಿಗೆ ನಾಮಪತ್ರ ಸಲ್ಲಿಸಿದರು. ಸಹಾಯಕ ಚುನಾವಣಾಧಿಕಾರಿಗಳಾದ ಜಿ.ಮಂಜುನಾಥ್, ರಮೇಶ್ ಬಾಬು ಸಹಕರಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ಕೆ ಪಿ ಆನಂದ ಬೆಳ್ಳಾರೆ, ದಲಿತ ಮುಖಂಡ ವಿಶ್ವನಾಥ್, ಯಶವಂತ ಕಡಬ, ಗೋಪಾಲ, ಸೀನಾ ಬಯಂಬ, ಹರೀಶ್ ಪರಪ್ಪು ಮೊದಲಾದವರು ಉಪಸ್ಥಿತರಿದ್ದರು.
ನಾಮಪತ್ರ ಸಲ್ಲಿಕೆಯ ಬಳಿಕ ಮಾತನಾಡಿದ ದಲಿತ ಮುಖಂಡ ಆನಂದ ಬೆಳ್ಳಾರೆ ‘ನಾವು ದಲಿತ ಸಂಘ ಸಮನ್ವಯ ಸಮಿತಿ ವತಿಯಿಂದ ಎಲ್ಲರೂ ಒಟ್ಟಾಗಿ ನಮ್ಮ ಅಭ್ಯರ್ಥಿಯನ್ನು ಚುನಾವಣೆಗೆ ನಿಲ್ಲಿಸಿದ್ದು ಅವರ ಗೆಲುವಿಗಾಗಿ ಎಲ್ಲರೂ ಒಟ್ಟಾಗಿ ದುಡಿಯುವುದಾಗಿ ಹೇಳಿದರು.
ರಾಷ್ಟ್ರೀಯ ಪಕ್ಷಗಳು ಚುನಾವಣೆಯ ಸಂದರ್ಭದಲ್ಲಿ ಮೀಸಲು ಕ್ಷೇತ್ರವಾದ ನಮ್ಮ ಸುಳ್ಯದಲ್ಲಿ ದಲಿತ ಸಮುದಾಯದವರಿಗೆ ಕೇವಲ ಭರವಸೆಯನ್ನು ಮಾತ್ರ ನೀಡುವುದಲ್ಲದೆ ಅವರ ಅಭಿವೃದ್ಧಿಗಾಗಿ ಯಾವುದೇ ಕಾರ್ಯಗಳನ್ನು ಮಾಡುತ್ತಿಲ್ಲ. ನಮ್ಮ ಬಹಳ ವರ್ಷದ ಬೇಡಿಕೆಯಾದ ಸುಳ್ಯದ ಅಂಬೇಡ್ಕರ್ ಭವನ ನಿರ್ಮಾಣ,ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪುತ್ತಳಿಯನ್ನು ಸುಳ್ಯ ತಾಲೂಕು ಕಚೇರಿ ಮುಂಭಾಗ ಅನಾವರಣಗೊಳಿಸುವ ಬಗ್ಗೆ ಮುಂತಾದ ಬೇಡಿಕೆಗಳನ್ನು ನಾವು ಆಗ್ರಹಿಸಿದ್ದೇವೆ. ಆದರೂ ಕೂಡ ಕಳೆದ 30 ವರ್ಷ ಆಡಳಿತ ಮಾಡಿದ ಶಾಸಕ ಅಂಗಾರರು ನಮ್ಮ ಸಮುದಾಯಕ್ಕೆ ಬೇಕಾದ ಯಾವುದೇ ಉತ್ತಮ ಕಾರ್ಯವನ್ನು ಮಾಡಿಕೊಡಲಿಲ್ಲ. ಕೇವಲ ದಲಿತರ ಹೆಸರನ್ನು ಬಳಸಿ ಮೇಲ್ಜಾತಿಯವರು ಅದರ ಪ್ರಯೋಜನವನ್ನು ಪಡೆದುಕೊಳ್ಳುತ್ತಿದ್ದಾರೆ. ಇವೆಲ್ಲದರಿಂದ ಬೇಸತ್ತು ನಾವು ಈ ಬಾರಿ ನಮ್ಮ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದ್ದೇವೆ ಎಂದು ಹೇಳಿದರು.
ಅಭ್ಯರ್ಥಿ ಗುರುವಪ್ಪ ಕಲ್ಲುಗುಡ್ಡೆ ಮಾತನಾಡಿ ನಾನು ಕಾಂಗ್ರೆಸ್ ಪಕ್ಷದಲ್ಲಿ ಕಳೆದ 30 ವರ್ಷಗಳಿಂದ ನಿಷ್ಟಾವಂತ ಕಾರ್ಯಕರ್ತನಾಗಿ ದುಡಿಯುತ್ತಿದ್ದೇನೆ. ಚುನಾವಣೆಗಳು ಬಂದಾಗ ಸುಳ್ಳು ಕ್ಷೇತ್ರಕ್ಕೆ ಹೊರಭಾಗದಿಂದ ಅಭ್ಯರ್ಥಿಗಳನ್ನು ತಂದು ನಿಲ್ಲಿಸುವುದು, ಪಕ್ಷಕ್ಕಾಗಿ ಸುಳ್ಯದಲ್ಲಿ ದುಡಿದವರನ್ನು ಕಡೆಗಣಿಸುವುದು ಇವೆಲ್ಲವನ್ನು ನೋಡಿ ನಾವು ಸ್ವತಂತ್ರರಾಗಿ ಇದೀಗ ಕಣಕ್ಕೆ ಇಳಿಯಲು ತೀರ್ಮಾನಿಸಿ ಇಂದು ನಾಮಪತ್ರವನ್ನು ಸಲ್ಲಿಸಿದ್ದೇವೆ ಎಂದು ಹೇಳಿದರು.