80 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಹಾಗೂ ವಿಕಲಚೇತನರಿಗೆ ಮನೆಯಿಂದಲೇ ಮತದಾನ

0

ಎ. 29 ರಿಂದ ಮತದಾನ ಪ್ರಕ್ರಿಯೆ ; ಚುನಾವಣಾ ಸಿಬ್ಬಂದಿಗಳ ತಂಡ ಮನೆಗೆ ಭೇಟಿಭಾರತೀಯ ಚುನಾವಣಾ ಆಯೋಗವು ಕರ್ನಾಟಕದಲ್ಲಿ ಪ್ರಥಮ ಬಾರಿಗೆ 80 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಹಾಗೂ ಶೇ. ೪೦ಕ್ಕಿಂತ ಹೆಚ್ಚು ಅಂಗವೈಕಲ್ಯತೆ ಉಳ್ಳವರಿಗೆ ಮನೆಯಿಂದಲೇ ಅಂಚೆ ಮತ ಪತ್ರದ ಮೂಲಕ ಮತ ಚಲಾಯಿಸುವ ವ್ಯವಸ್ಥೆ ಜಾರಿಗೆ ತಂದಿದ್ದು, ಎ. 29 ರಿಂದಲೇ ಈ ಮತದಾನ ಪ್ರಕ್ರಿಯೆ ಆರಂಭಗೊಳ್ಳಲಿದೆ.
ಇದಕ್ಕೆ ಈಗಾಗಲೇ ತಾಲೂಕು ಆಡಳಿತ ಚುನಾವಣಾ ವಿಭಾಗವು ಪೂರ್ಣ ಸಿದ್ಧತೆ ಮಾಡಿಕೊಂಡಿದೆ. ಎ. 29 ರಿಂದ ಮೇ. 2ರ ಅಂದಾಜಿನವರೆಗೆ ಈ ಮತದಾನ ಪ್ರಕ್ರಿಯೆ ನಡೆಯಲಿದೆ. ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಈ ವಿಭಾಗಕ್ಕೆ ಒಳಪಡುವ 1781 ಮತದಾರರಿದ್ದು, ಇದಕ್ಕಾಗಿ 32 ತಂಡಗಳನ್ನು ಮಾಡಲಾಗಿದ್ದು, ಒಟ್ಟು 160 ಸಿಬ್ಬಂದಿಗಳು ಇರಲಿದ್ದಾರೆ.
ಪ್ರತಿ ಸೆಕ್ಟರ್‌ಗೆ ಸೆಕ್ಟರ್ ಆಫೀಸರ್ ಜೊತೆಗೆ ಇಬ್ಬರು ಪೋಲಿಂಗ್ ಅಧಿಕಾರಿಗಳು, ಒಬ್ಬರು ಮೈಕ್ರೋ ಒಬ್ಸರ್ವರ್, ಒಬ್ಬರು ಪೊಲೀಸ್ ಅಧಿಕಾರಿ, ಒಬ್ಬರು ವೀಡಿಯೋಗ್ರಾಫರ್ ಇರುತ್ತಾರೆ.
ಈ ಮತದಾನ ಪ್ರಕ್ರಿಯೆ ಇವಿಯಂ ಬಳಸದೆ ಹಿಂದಿನ ಮಾದರಿಯಲ್ಲಿ ಮತ ಪತ್ರವನ್ನೇ ಬಳಸಲಾಗುತ್ತದೆ. ಮನೆಗೆ ತೆರಳಿದ ತಂಡವು ಇತರ ಪೋಲಿಂಗ್ ಬೂತ್‌ಗಳಂತೆ ಅಲ್ಲಿ ತಾತ್ಕಾಲಿಕ ಪೋಲಿಂಗ್ ಬೂತ್ ಮಾದರಿಯಲ್ಲಿ ಅರ್ಹ ಮತದಾರರಿಂದ ಮತ ಚಲಾಯಿಸಲು ಅವಕಾಶ ಮಾಡಬೇಕಾಗುತ್ತದೆ. ಕುರುಡುತನದ ಅಥವಾ ಅಶಕ್ತತೆಯಿಂದ ತಾನೇ ಸ್ವತಃ ಮತ ಚಲಾಯಿಸಲು ಸಾಧ್ಯವಿಲ್ಲದಿದ್ದರೆ ಅಂತಹ ಮತದಾರರಿಗೆ ಮತ ಚಲಾಯಿಸುವುದಕ್ಕೆ ಯಾರಾದರೂ ವಯಸ್ಕ ಮತದಾರನ ನೆರವು ಪಡೆಯುವುದಕ್ಕೆ ಅನುಮತಿ ಇದೆ.