ದಿ.ಕಾನಾವು ಗೋಪಾಲಕೃಷ್ಣ ಭಟ್ ಅವರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಸಭೆ

0

ದೇವಸ್ಥಾನ, ದೈವಸ್ಥಾನ, ಶಾಲೆ, ಅಂಚೆ ಕಚೇರಿಗೆ ಕಾನಾವು ಕುಟುಂಬದಿಂದ ಕೊಡುಗೆ ಹಸ್ತಾಂತರ

ಬದುಕಿನೊದ್ದಕ್ಕೂ ಸಮಾಜಕ್ಕೆ ಉತ್ತಮ ವ್ಯಕ್ತಿಯಾಗಿ ಸಾರ್ಥಕ ಬದುಕು ಸಾಗಿಸಿದ ವ್ಯಕ್ತಿ ಅಂದರೆ ಅದು ಕಾನಾವು ಗೋಪಾಲಕೃಷ್ಣ ಭಟ್. ಅವರ ಅಗಲಿಕೆ ನಂತರವು ಸಮಾಜ ಅವರನ್ನು ಮತ್ತೆ ಮತ್ತೆ ಸ್ಮರಿಸಿಕೊಳ್ಳುತ್ತಿದೆ ಎಂದಾದರೆ ಅದು ಅವರ ವ್ಯಕ್ತಿತ್ವಕ್ಕೆ ಸಂದ ಗೌರವ ಎಂದು ಕವಯತ್ರಿ ಅಶ್ವಿನಿ ಕೋಡಿಬೈಲು ಹೇಳಿದರು.

ಮುಕ್ಕೂರಿನ ವಿವಿಧ ಸಂಘ-ಸಂಸ್ಥೆಗಳ ಆಶ್ರಯದಲ್ಲಿ ಮುಕ್ಕೂರು ಶಾಲಾ ವಠಾರದಲ್ಲಿ ಸೋಮವಾರ ನಡೆದ ದಿ.ಕಾನಾವು ಗೋಪಾಲಕೃಷ್ಣ ಭಟ್ ಅವರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ನುಡಿನಮನ ಸಲ್ಲಿಸಿ ಅವರು ಮಾತನಾಡಿದರು. ಗೋಪಾಲಕೃಷ್ಣ ಭಟ್ ಅವರು ತನ್ನ ಪರೋಪಕಾರಿ ಗುಣಗಳನ್ನು ತನ್ನ ಮಕ್ಕಳಲ್ಲಿಯು ಬೆಳೆಸಿದರು. ತನ್ಮೂಲಕ ತನ್ನ ಮುಂದಿನ ಪೀಳಿಗೆಯು ಸಮಾಜದೊಂದಿಗೆ ಬೆರೆತು ನೋವು-ನಲಿವುಗಳಿಗೆ ಸ್ಪಂದಿಸುವಂತೆ ಮಾಡಿದ್ದು ಅವರ ದೂರದೃಷ್ಟಿತ್ವಕ್ಕೆ ಸಾಕ್ಷಿ ಎಂದರು.

ಕೃಷಿ ಒಂದು ತಪಸ್ಸು. ಆ ಕ್ಷೇತ್ರದಲ್ಲಿನ ಅವರ ಯಶಸ್ಸು ಅವರ ಪರಿಶ್ರಮದ ಪ್ರತೀಕ. ಇದಕ್ಕೆ ಪ್ರಕೃತಿ ಮಾತೆಯ ವರವು ಬೇಕು. ಅವರು ಕೃಷಿ ಬದುಕಿನಲ್ಲಿ ಧರ್ಮಮಾರ್ಗದಲ್ಲಿ ನಡೆದ ಕಾರಣ ಪ್ರಕೃತಿಯ ಕೃಪೆ ಕೂಡ ಅವರ ಪಾಲಿಗೆ ದೊರೆತು ಓರ್ವ ಪ್ರಗತಿಪರ ಕೃಷಿಕರಾಗಿಯು ಯಶಸ್ಸು ಕಾಣಲು ಸಾಧ್ಯವಾಯಿತು ಎಂದರು.

ಸಭಾಧ್ಯಕ್ಷತೆ ವಹಿಸಿದ್ದ ಪೆರುವಾಜೆ ಗ್ರಾ.ಪಂ. ಅಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು ಮಾತನಾಡಿ, ಕೃಷಿ, ಸಾಮಾಜಿಕ, ಧಾರ್ಮಿಕ, ಸಹಕಾರ, ರಾಜಕೀಯ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ತನ್ನದೇ ಆದ ಕೊಡುಗೆ ನೀಡಿರುವ ದಿ.ಕಾನಾವು ಗೋಪಾಲಕೃಷ್ಣ ಭಟ್ ಅವರನ್ನು ಸಮಾಜ ಸದಾ ಕಾಲ ಸ್ಮರಿಸುತ್ತದೆ. ತನ್ನ ಹೃದಯ ಶ್ರೀಮಂತಿಕೆಯಿಂದ ಸಮಾಜದ ಎಲ್ಲ ಸ್ತರದ ಜನರ ಪ್ರೀತಿ ಗಳಿಸಿದಂತಹ ಓರ್ವ ಅಪರೂಪ ವ್ಯಕ್ತಿಯಾಗಿದ್ದರು ಎಂದರು.

ಪೆರುವೋಡಿ ಶ್ರೀ ವಿಷ್ಣುಮೂರ್ತಿ ದೇವಾಲಯದ ಆಡಳಿತ ಮೊಕ್ತೇಸರ ಬಾಲಚಂದ್ರರಾವ್ ಕೊಂಡೆಪ್ಪಾಡಿ ಮಾತನಾಡಿ, ತನ್ನ ಜೀವನದೊದ್ದಕ್ಕೂ ಎಲ್ಲರನ್ನು ಗೌರವಿಸುತ್ತಾ ಬದುಕಿ ಬಾಳಿದ ಗೋಪಾಲಕೃಷ್ಣ ಭಟ್ ಅವರ ಅಗಲಿಕೆ ಊರಿಗೆ ದೊಡ್ಡ ನಷ್ಟ ಎಂದರು.

ಪುತ್ತೂರು ಐಎಂಐ ಘಟಕದ ಅಧ್ಯಕ್ಷ, ಕಾನಾವು ಕ್ಲಿನಿಕ್ ವೈದ್ಯ ಡಾ|ನರಸಿಂಹ ಶರ್ಮಾ ಅವರು ತನ್ನ ತಂದೆಯ ಸ್ಮರಣೆ ಮಾಡಿದ ಊರವರಿಗೆ ಕೃತಜ್ಞತೆ ಸಲ್ಲಿಸಿದರು.

ಊರವರಿಂದ ಗೋಪಾಲಕೃಷ್ಣ ಭಟ್ ಅವರ ವ್ಯಕ್ತಿತ್ವದ ಗುಣಗಾನ


ಊರವರ ಪರವಾಗಿ ಮುಕ್ಕೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕುಂಬ್ರ ದಯಾಕರ ಆಳ್ವ, ಪ್ರಗತಿಪರ ಕೃಷಿಕ ಸುಬ್ರಾಯ ಭಟ್ ನೀರ್ಕಜೆ, ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಉಮೇಶ್ ಕೆಎಂಬಿ, ಮುಕ್ಕೂರು ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುಧಾಕರ ರೈ ಕುಂಜಾಡಿ, ಮುಕ್ಕೂರು ಸ.ಹಿ.ಪ್ರಾ.ಶಾಲಾ ಎಸ್‍ಡಿಎಂಸಿ ಅಧ್ಯಕ್ಷ ಜಯಂತ ಗೌಡ ಕುಂಡಡ್ಕ, ಪುರೋಹಿತ ರಾಘವೇಂದ್ರ ಬೈಪಡಿತ್ತಾಯ ಕಿನ್ನಿಜಾಲು, ನ್ಯಾಯವಾದಿ ಗಣಪತಿ ಭಟ್ ನೀರ್ಕಜೆ, ನಿವೃತ್ತ ಕಂದಾಯ ನಿರೀಕ್ಷಕ ದಾಮೋದರ ಗೌಡ ಕಂಡಿಪ್ಪಾಡಿ, ಮುಕ್ಕೂರು ಹಾಲು ಉತ್ಪಾದಕರ ಸಹಕಾರ ಸಂಘದ ಉಪಾಧ್ಯಕ್ಷ ಗಣೇಶ್ ಶೆಟ್ಟಿ ಕುಂಜಾಡಿ, ಸುದೀಪ್ ಕೊಂಡೆಪ್ಪಾಡಿ ಮೊದಲಾದವರು ಕಾನಾವು ಗೋಪಾಲಕೃಷ್ಣ ಭಟ್ ಅವರೊಂದಿಗಿನ ಒಡನಾಟವನ್ನು ಸ್ಮರಿಸಿದರು.

ಮೃತರ ಸ್ಮರಣಾರ್ಥ ಕೊಡುಗೆ


ಈ ಸಂದರ್ಭದಲ್ಲಿ ಕಾನಾವು ಗೋಪಾಲಕೃಷ್ಣ ಭಟ್ ಅವರ ಸ್ಮರಣಾರ್ಥ ಪೆರುವೋಡಿ ಶ್ರೀ ವಿಷ್ಣುಮೂರ್ತಿ ದೇವಾಲಯ, ಕುಂಡಡ್ಕ ಶ್ರೀ ಆದಿಮೊರ್ಗೇಕಳ -ಕೊರಗಜ್ಜ ಕ್ಷೇತ್ರ, ಮುಕ್ಕೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ತಲಾ 15 ಸಾವಿರ ರೂ.ನಂತೆ ಒಟ್ಟು 45 ಸಾವಿರ ರೂ. ಮೊತ್ತವನ್ನು ಡಾ| ನರಸಿಂಹ ಶರ್ಮಾ ಕಾನಾವು ಅವರು ಸಮಿತಿಯ ಅಧ್ಯಕ್ಷರುಗಳಿಗೆ ಹಸ್ತಾಂತರಿಸಿದರು. ಇದೇ ಸಂದರ್ಭದಲ್ಲಿ ಮುಕ್ಕೂರು ಅಂಚೆ ಕಚೇರಿಗೆ ಫ್ಯಾನ್ ವ್ಯವಸ್ಥೆ ಒದಗಿಸುವುದಾಗಿ ಪ್ರಕಟಿಸಿದರು.