ಮದುವೆ ಹಾಲ್‌ನಿಂದ ಮಗುವಿನ ಸರ ಕಳವು

0

ಸುಳ್ಯ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ದೇವಸ್ಥಾನದ ಮದುವೆ ಹಾಲ್‌ನಲ್ಲಿ ನೀರು ಕುಡಿಯಲು ತೆರಳಿದ್ದ ೫ ವರ್ಷ ಪ್ರಾಯದ ಮಗುವನ್ನು ಪಕ್ಕಕ್ಕೆ ಕರೆದೊಯ್ದು ಆತನ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕಳವುಕೈದ ಪ್ರಕರಣಕ್ಕೆ ಸಂಬಂಧಿಸಿ ಸುಳ್ಯ ಪೋಲೀಸ್ ಠಾಣೆಯಲ್ಲಿ ಮಗುವಿನ ತಂದೆ ದೂರು ನೀಡಿದ್ದಾರೆ.


ಐವರ್ನಾಡು ಗ್ರಾಮದ ಮಡ್ತಿಲ ಮನೆ ಶಿವಪ್ರಸಾದ್ ಎಂ.ಆರ್. ಎಂಬವರು ದೂರು ನೀಡಿದ್ದು, ಎ.೩೦ರಂದು ನಮ್ಮ ಸಂಬಂಧಿಕರ ಮದುವೆ ಸುಳ್ಯ ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ನಡೆದಿದ್ದು ಆ ಸಮಾರಂಭಕ್ಕೆ ನಾನು ಪತ್ನಿ ಹಾಗೂ ೫ ವರ್ಷ ಪ್ರಾಯದ ಮಗ ಪೂರ್ವಿಕ್ ತೆರಳಿದ್ದೆವು. ಮದುವೆ ಹಾಲ್‌ನಲ್ಲಿ ನನ್ನ ಮಗ ನಿರು ಕುಡಿಯಲೆಂದು ಅಲ್ಲಿದ್ದ ಫಿಲ್ಟರ್ ಬಳಿ ಹೋದಾಗ ನೀರಿನ ಲೋಟ ಮೇಲ್ಬಾಗದಲ್ಲಿದ್ದುದರಿಂದ ಆತನಿಗೆ ಸಿಗಲಿಲ್ಲ. ಆಗ ಅಲ್ಲಿದ್ದ ವ್ಯಕ್ತಿಯೊಬ್ಬರು ನಾನು ನೀರು ಕೊಡಿಸುತ್ತೇನೆಂದು ಅಲ್ಲಿಂದ ಹೊರಗೆ ಶೌಚಾಲಯದ ಬಳಿ ಕರೆದುಕೊಂಡು ಹೋಗಿ ನನ್ನ ಮಗನ ಕುತ್ತಿಗೆಯಲ್ಲಿದ್ದ ೨ ಪವನ್ ತೂಕದ ಚಿನ್ನದ ಸರವನ್ನು ಹಾಗೂ ಅದಕ್ಕೆ ಅಳವಡಿಸಿದ್ದ ಪದಕವನ್ನು ಕಿತ್ತುಕೊಂಡು ಹೋಗಿದ್ದಾರೆ. ಈ ಕೃತ್ಯದಿಂದ ಹೆದರಿದ ನನ್ನ ಮಗ ಓಡಿ ಬಂದು ನಮ್ಮಲ್ಲಿ ವಿಷಯ ತಿಳಿಸಿದ್ದಾನೆ. ತಕ್ಷಣ ನಾವೆಲ್ಲರೂ ಆರೋಪಿಗಾಗಿ ಹುಡುಕಾಡಿದರೂ ಆತ ಎಲ್ಲಿಯೂ ಪತ್ತೆಯಾಗಲಿಲ್ಲ. ಮಗನ ಕುತ್ತಿಗೆಯಿಂದ ಸರವನ್ನು ಎಳೆಯುವ ಸಂದರ್ಭ ಕುತ್ತಿಗೆಯ ಮೇಲ್ಬಾಗಕ್ಕೆ ಮತ್ತು ಬಲಗಣ್ಣಿನ ಬಳಿಯಲ್ಲಿ, ಎಡಕಿವಿಯ ಮೇಲ್ಬಾಗದಲ್ಲಿ ಸಣ್ಣ ಗಾಯಗಳಾಗಿವೆ.


ಈ ಸಭಾಭವನದಲ್ಲಿ ಸುರಕ್ಷಿತೆಗೆ ಬೇಕಾದ ರಕ್ಷಣಾತ್ಮಕ ವ್ಯವಸ್ಥೆಗಳು, ಸಿಸಿ ಕ್ಯಾಮರಾಗಳು ಇಲ್ಲದೇ ಇರುವುದನ್ನು ದುರುಪಯೋಗಪಡಿಸಿಕೊಂಡು ಆರೋಪಿಯು ಈ ಕೃತ್ಯ ಎಸಗಿದ್ದು, ಆತನನ್ನು ಪತ್ತೆ ಹಚ್ಚಿ ನಮಗೆ ನ್ಯಾಯ ಕೊಡುವಂತೆ ಮೇ.೧ರಂದು ಸುಳ್ಯ ಪೋಲೀಸರಿಗೆ ಅವರು ನೀಡಿದ ದೂರಿನಲ್ಲಿ ವಿನಂತಿಸಿಕೊಂಡಿದ್ದಾರೆ.