ಅನ್ನಭಾಗ್ಯದ ಅಕ್ಕಿ ಕಿತ್ತುಕೊಂಡ, ಕೆಲಸದ ಸಮಯವನ್ನು ಏರಿಸಿದ, ಗ್ಯಾಸ್, ಪೆಟ್ರೋಲ್, ಡಿಸೇಲ್ ಬೆಲೆ ಏರಿಸಿದವರ ವಿರುದ್ಧ ಮತ ಚಲಾಯಿಸೋಣ

0

ನೈಜ ಸಮಸ್ಯೆಯನ್ನು ಅರಿತು ಜನರು ಮತದಾನ ಮಾಡಲಿ : ಸಿಐಟಿಯು ಮುಖಂಡರ ಮನವಿ

ರಾಜ್ಯದ ಚುನಾವಣೆಗಳು ಜನರ ನೈಜ ಸಮಸ್ಯೆಗಳ ಮೇಲೆ ಆಗಬೇಕೇ ಹೊರತು ಪಾರ್ಲಿಮೆಂಟಿನ ನಾಯಕತ್ವದಲ್ಲಿ ನಡೆಯುತ್ತಿದೆಯೆಂದರೆ ರಾಜ್ಯಗಳ ವಿಧಾನಸಭೆಗಳಾಗಲೀ, ಅಲ್ಲಿನ ನಾಯಕತ್ವಗಳಿಗಾಗಲೀ ಬೆಲೆಯಿಲ್ಲದ ಪರಿಸ್ಥಿತಿ ನಿರ್ಮಾಣವಾಗಬಹುದು. ಆದ್ದರಿಂದ ಸಿಐಟಿಯು ಮತದಾನಕ್ಕೆ ಮೊದಲು ಜನರ ನೈಜ ಸಮಸ್ಯೆಯನ್ನು ಮುಂದಿಡುತ್ತೇವೆ. ಆ ನಿಟ್ಟಿನಲ್ಲಿ ಸಮಸ್ಯೆ ಅರಿತುಕೊಂಡು ಬಡವರು, ಕಾರ್ಮಿಕರು, ಮದ್ಯಮ ವರ್ಗದವರು ಮತದಾನ ಮಾಡುತ್ತಾರೆಂಬ ವಿಶ್ವಾಸ ಇದೆ ಎಂದು ಸಿಐಟಿಯು ಅಧ್ಯಕ್ಷ ಕೆ.ಪಿ. ಜಾನಿ ಹೇಳಿದ್ದಾರೆ.


ಮೇ.೫ರಂದು ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಕಾರ್ಮಿಕರು ೮ಗಂಟೆ ದುಡಿಯುವ ನಿಯಮವಿತ್ತು. ಈಗ ಅದನ್ನು ೧೨ ಗಂಟೆಗೆ ಏರಿಸಿ ಕಾರ್ಮಿಕರಿಗೆ ತೊಂದರೆ ನೀಡಿದವರ ವಿರುದ್ಧ ನಾವು ಮತ ಚಲಾಯಿಸಬೇಕು. ೨೦೧೪ರಲ್ಲಿ ೪೧೦ ರೂ ಇದ್ದ ಗ್ಯಾಸ್ ಬೆಲೆ ಈಗ ೧೨೦೦ ಆಗಿದ್ದ ಬೆಲೆ ಏರಿಸಿದವರ ವಿರುದ್ಧ ನಮ್ಮ ಮತವಾಗಲಿದೆ. ಡಿಸೇಲ್ ೫೦ ರಿಂದ ೮೮ ರೂ ಗೆ ಏರಿಸಲಾಗಿದೆ, ಪೆಟ್ರೋಲ್ ೬೬ ರಿಂದ ೧೦೨ ಕ್ಕೆ ಏರಿಸಲಾಗಿದೆ. ಅನ್ನಭಾಗ್ಯದ ಅಕ್ಕಿಯನ್ನು ಕಡಿತ ಮಾಡಲಾಗಿದೆ. ಕಾರ್ಮಿಕರು ಮತ್ತು ಜನರು ಉಪಯೋಗಿಸುವ ಆಹಾರ ಸಾಮಾಗ್ರಿಗಳ ಬೆಲೆ ಗಗನಕ್ಕೇರಿದೆ. ಅಲ್ಲದೆ ಜಿಎಸ್ಟಿ ಹಾಕಲಾಗಿದೆ. ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಕಾರ್ಮಿಕರ ಭದ್ರತೆಗಾಗಿ ಸಂಗ್ರಹಿಸಲ್ಪಟ್ಟ ಹಣ ಅತೀ ಅಗತ್ಯವಾದ ವಿಚಾರಗಳಿಗೆ ಅರ್ಜಿ ಹಾಕಿ ಕಾಯುತ್ತಿದ್ದರೂ ಬಿಡುಗಡೆ ಮಾಡದೇ ರಾಜಕೀಯ ಉzಶಕ್ಕಾಗಿ ಅನಗತ್ಯ ವಿಚಾರಗಳಿಗೆ ದುರುಪಯೋಗ ಪಡಿಸಲಾಗಿದೆ. ಕಾರ್ಮಿಕರ ಕಾನೂನುಗಳನ್ನು ಮಾಲಿಕರ ಪರ ತಿದ್ದುಪಡಿ ಮಾಡಲಾಗಿದೆ. ದೊಡ್ಡ ದೊಡ್ಡ ರೋಗಗಳ ಔಷಧ ಬೆಲೆಯನ್ನು ಗಗನಕ್ಕೇ ಏರಿಸಲಾಗಿದೆ. ಇನ್ಶೂರೆನ್ಸ್ ದರವನ್ನು ಅಮಾನವೀಯವಾಗಿ ಏರಿಸಲಾಗಿದೆ. ರೈತರ ಸಾಲ ಮನ್ನಾ ಮಾಡಿ ಎಂದು ಅನೇಕ ಬಾರಿ ಅಲವತ್ತುಕೊಂಡರೂ ಪ್ರತಿಭಟನೆಗಳು ಮಾಡಿದರೂ ಕೇಳದೆ ರೈತರು ಸೋಮಾರಿಗಳಾಗುತ್ತಾರೆ ಎಂದು ಅವಹೇಳಿಸಿ ಖಾಸಗಿ ಕಂಪೆನಿಗಳ ಮಾಲೀಕರ ಸುಮಾರು ೧೦ ಲಕ್ಷ ಕೋಟಿಗೂ ಅಧಿಕ ಸಾಲಾ ಮನ್ನಾ ಮಾಡಿ ತಾವು ಯಾರ ಪರವೆಂದು ತೋರಿಸಿದವರ ವಿರುದ್ಧ ನಮ್ಮ ಮತವಾಗಬೇಕು. ಲಾಭದಲ್ಲಿದ್ದ ಕರ್ನಾಕದ ಹೆಮ್ಮೆಯ ಬ್ಯಾಂಕ್‌ಗಳನ್ನು ಸಾಲದಲ್ಲಿ ಮುಳುಗಿದ್ದ ಸಂಸ್ಥೆಯನ್ನು ಖಾಸಾಗಿ ವ್ಯಕ್ತಿಗಳಿಗೆ ಮಾರಾಟ ಮಾಡಿದವರ ವಿರುದ್ಧ ನಮ್ಮ ಮತವಾಗಬೇಕು. ೨೦೧೪ ಗ್ರಾಮೀಣ ಭಾಗದ ಜನರಿಗೆ ಸಹಾಯಕವಾಗಿದ್ದ ಬಿ.ಎಸ್.ಎನ್.ಎಲ್. ಸಂಸ್ಥೆಯನ್ನು ಪ್ರಸ್ತುತ ಮುಚ್ಚುವ ಹಂತಕ್ಕೆ ತಂದವರ ವಿರುದ್ಧ ನಮ್ಮ ಮತವಾಗಬೇಕು ಹೀಗೆ ಒಂದಲ್ಲ ಒಂದು ರೀತಿಯಲ್ಲಿ ಕಾರ್ಮಿಕರು, ಬಡವರಿಗೆ ತೊಂದರೆಯನ್ನುಂಟು ಮಾಡಿರುವವರ ವಿರುದ್ಧ ಮತ ಚಲಾಯಿಸಬೇಕು ಎಂದು ಅವರು ವಿವರ ನೀಡಿದರು.


ಪತ್ರಿಕಾಗೋಷ್ಠೀಯಲ್ಲಿ ಮುಖಂಡರುಗಳಾದ ಶ್ರೀಧರ ಎ.ಕೆ. ಕಡಪಾಲ, ನಾರಾಯಣ ಮೇಸ್ತ್ರೀ, ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ವಿಶ್ವನಾಥ ನೆಲ್ಲಿಬಂಗಾರಡ್ಕ, ಗೌರವಾಧ್ಯಕ್ಷ ನಾಗರಾಜ ಮೇಸ್ತ್ರೀ, ಬಿ.ಆರ್. ಪ್ರಸಾದ್ ಇದ್ದರು.