ಎಡಮಂಗಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಡಿ. 29ರಂದು ಚುನಾವಣೆ

0

ಎಡಮಂಗಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರ ಆಯ್ಕೆಗೆ ಚುನಾವಣಾ ದಿನಾಂಕ ಘೋಷಣೆಯಾಗಿದ್ದು ಡಿಸೆಂಬರ್ 29ರಂದು ಚುನಾವಣೆ ನಡೆಯಲಿದೆ. ನಾಳೆಯಿಂದಲೇ ನಾಮಪತ್ರ ಸಲ್ಲಿಕೆ ಆರಂಭಗೊಳ್ಳಲಿದೆ.

ಈ ಹಿಂದಿನ ಆಡಳಿತ ಮಂಡಳಿಯ ಐದು ವರ್ಷಗಳ ಅವಧಿ ಮುಕ್ತಾಯಗೊಂಡಿದ್ದು ಮುಂದಿನ ಐದು ವರ್ಷಗಳ ಅವಧಿಗೆ ನೂತನ ಆಡಳಿತ ಮಂಡಳಿಯ ನಿರ್ದೇಶಕರ ಆಯ್ಕೆಗೆ ಚುನಾವಣೆ ನಡೆಯಲಿದೆ.

ಒಟ್ಟು 12 ಸ್ಥಾನಗಳಲ್ಲಿ ಸಾಮಾನ್ಯ ಸ್ಥಾನಗಳು 5, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಮೀಸಲು ಸ್ಥಾನಕ್ಕೆ ತಲಾ 1,ಹಿಂದುಳಿದ ವರ್ಗ ಪ್ರವರ್ಗ ಎ ಮತ್ತು ಬಿ ಸ್ಥಾನಗಳಿಗೆ ತಲಾ1, ಮಹಿಳಾ ಮೀಸಲು ಸ್ಥಾನಕ್ಕೆ 2, ಸಾಲಗಾರರಲ್ಲದ ಕ್ಷೇತ್ರದ 1 ಸ್ಥಾನಕ್ಕೆ ಚುನಾವಣೆ ನಡೆಯಲಿದೆ.
ನಾಳೆಯಿಂದ ನಾಮಪತ್ರ ಸಲ್ಲಿಕೆ ಆರಂಭಗೊಳ್ಳಲಿದ್ದು, ನಾಮ ಪತ್ರ ಸಲ್ಲಿಕೆಗೆ ಡಿ. 21 ಕೊನೆಯ ದಿನವಾಗಿರುತ್ತದೆ. ಡಿ.22ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು ,ಡಿಸೆಂಬರ್ 23 ರಂದು ನಾಮಪತ್ರ ಹಿಂಪಡೆಯಲು ಕೊನೆ ದಿನವಾಗಿರುತ್ತದೆ.

ಅಂದೇ ಸಿಂಧುತ್ವ ಹೊಂದಿರುವ ಅಭ್ಯರ್ಥಿಗಳ ಪಟ್ಟಿಯ ಪ್ರಕಟಣೆ, ಅಭ್ಯರ್ಥಿಗಳಿಗೆ ಚಿಹ್ನೆಗಳ ಹಂಚಿಕೆ ಮತ್ತು ಸಿಂಧುತ್ವ ಹೊಂದಿರುವ ಉಮೇದುದಾರರ ಪಟ್ಟಿ ಚಿಹ್ನೆಯೊಂದಿಗೆ ಪ್ರಕಟಣೆಗೊಳ್ಳಲಿದೆ. ಡಿ. 29ರಂದು ಸಂಘದ ಪ್ರಧಾನ ಕಚೇರಿ ಆವರಣದಲ್ಲಿ ಚುನಾವಣೆ ನಡೆದು ಸಂಜೆ ಮತ ಎಣಿಕೆ ನಡೆಯಲಿದೆ. ಸಹಕಾರ ಅಭಿವೃದ್ಧಿ ಅಧಿಕಾರಿ ಶಿವಲಿಂಗಯ್ಯ ಎಂ ಚುನಾವಣಾ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ.