ದ.31ರಂದು ಸುಳ್ಯದಲ್ಲಿ ಬಂಟರ ಸಮಾವೇಶ

0

ವಿದ್ಯಾರ್ಥಿ ವೇತನ ವಿತರಣೆ – ಪ್ರತಿಭಾ ಪುರಸ್ಕಾರ, ಯುವ ಪುರಸ್ಕಾರ ಮತ್ತು ಸಾಧಕರಿಗೆ ಸನ್ಮಾನ

ಸುಳ್ಯ ತಾಲೂಕು ಬಂಟರ ಯಾನೆ ನಾಡವರ ಸಂಘದ ಆಶ್ರಯದಲ್ಲಿ ಪ್ರತಿ ವರ್ಷದಂತೆ ಬಂಟರ ಸಮಾವೇಶವನ್ನು ದ.31 ರಂದು ನಡೆಸಲಾಗುತ್ತಿದ್ದು, ಈ ಸಮಾವೇಶದಲ್ಲಿ ವಿದ್ಯಾರ್ಥಿ ವೇತನ ವಿತರಣೆ – ಪ್ರತಿಭಾ ಪುರಸ್ಕಾರ, ಯುವ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ನೆರವೇರಿಸಲಾಗುವುದು ಎಂದು ತಾಲೂಕು ಬಂಟರ ಸಂಘದ ಅಧ್ಯಕ್ಷ ಎನ್.ಜಯಪ್ರಕಾಶ್ ರೈ ಹೇಳಿದರು.

ಇಂದು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಅವರು ಸಮಾವೇಶದ ವಿವರ ನೀಡಿದರು.

ಬಂಟರ ಸಮಾವೇಶವನ್ನು ಜಾಗತಿಕ ಬಂಟರ ಸಂಘದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಉದ್ಘಾಟಿಸುವರು. ಸಂಸದ ನಳಿನ್ ಕುಮಾರ್ ಕಟೀಲ್ ಸಭಾಧ್ಯಕ್ಷತೆ ವಹಿಸುವರು. ಶ್ರೀಕ್ಷೇತ್ರ ಒಡಿಯೂರಿನ ಸ್ವಾಮೀಜಿಯವರಾದ ಗುರುದೇವಾನಂದ ಸ್ವಾಮೀಜಿಯವರು ಆಶೀರ್ವಚನಗೈಯ್ಯುವರು.


ಕುವೆಂಪು ಯುನಿವರ್ಸಿಟಿ ಯಿಂದ ಡಾಕ್ಟರೇಟ್ ಪದವಿ ಪುರಸ್ಕೃತರಾಗಿರುವ ಡಾ.ಎ.ಸದಾನಂದ ಶೆಟ್ಟಿಯವರನ್ನು ಕಾರ್ಯಕ್ರಮದಲ್ಲಿ ಅಭಿನಂದಿಸಲಾಗುವುದು. ಮಾಜಿ ಸಚಿವ ಬಿ.ರಮಾನಾಥ ರೈಯವರು ಅಭಿನಂದನಾ ಭಾಷಣ ಮಾಡಲಿರುವರು. ಇದೇ ಸಂದರ್ಭ ನೂತನ ಶಾಸಕರುಗಳಾದ ಸುಳ್ಯದ ಕು.ಭಾಗೀರಥಿ ಮುರುಳ್ಯ ಹಾಗೂ ಪುತ್ತೂರಿನ ಅಶೋಕ್ ಕುಮಾರ್ ರೈಯವರನ್ನು ಸನ್ಮಾನಿಸಲಾಗುವುದು. ಪುತ್ತೂರಿನ ಮಾಜಿ ಶಾಸಕಿ ಶ್ರೀಮತಿ ಶಕುಂತಳಾ ಶೆಟ್ಟಿ ಯವರು ಸನ್ಮಾನ ನೆರವೇರಿಸುವರು ಎಂದು ಜಯಪ್ರಕಾಶ್ ರೈ ವಿವರಿಸಿದರು.

ಸಮಾವೇಶದಲ್ಲಿ ಮುಖ್ಯ ಅಭ್ಯಾಗತರಾಗಿ ಸವಣೂರು ವಿದ್ಯಾರಶ್ಮಿ ಸಮೂಹ ವಿದ್ಯಾ ಸಂಸ್ಥೆಗಳ ಅಧ್ಯಕ್ಷರಾದ ಕೆ.ಸೀತಾರಾಮ ರೈ ಸವಣೂರು, ಶ್ರೀ ನಾಗಬ್ರಹ್ಮ ಕೋಟಿ ಚೆನ್ನಯ ಆದಿ ಬೈದೆರುಗಳ ಗರಡಿ ಎಣ್ಮೂರು ಇದರ ಆಡಳ್ತೆದಾರರಾದ ಕಟ್ಟಬೀಡು ರಾಮಕೃಷ್ಣ ಶೆಟ್ಟಿ, ಬೆಂಗಳೂರು ಬಂಟರ ಸಂಘದ ಅಧ್ಯಕ್ಷ ‌ಮುರಳೀಧರ ಹೆಗ್ಡೆ, ಬೆಂಗಳೂರಿನ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷ ಗುರುಪ್ರಸಾದ್ ರೈ ಮೊರಂಗಲ್ಲು, ಹಾಗೂ ಸುಳ್ಯದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರವೀಣ್ ಶೆಟ್ಟಿ ಭಾಗವಹಿಸಲಿದ್ದಾರೆ.

ಧೀರಜ್ ರೈ ಸಂಪಾಜೆ (ಯಕ್ಷಗಾನ), ಡಾ| ಪ್ರಖ್ಯಾತ್ ಶೆಟ್ಟಿ ಅಳಿಕೆ (ಯಕ್ಷಗಾನ), ದೇವಿಪ್ರಸಾದ್ ರೈ ಗೆಜ್ಜೆ ಕೇನ್ಯ (ಕ್ರೀಡೆ), ಸನತ್ ಕುಮಾರ್ ಆಳ್ವ ಸೋಣಂಗೇರಿ (ಉದ್ಯಮ), ಡಾ. ಸಂದೇಶ್ ರೈ ( ಶಿಕ್ಷಣ) ಇವರಿಗೆ ಯುವ ಪುರಸ್ಕಾರ ನೀಡಲಾಗುವುದಲ್ಲದೆ, ವಿವಿಧ ಕ್ಷೇತ್ರದ ಸಾಧಕರಾದ ಕುಂಟುಪುಣಿಗುತ್ತು ಪ್ರಮೋದ್ ಶೆಟ್ಟಿ(ಕಂಬಳ), ವಿಶ್ವನಾಥ ರೈ ಅರ್ಗುಡಿ (ಧಾರ್ಮಿಕ ಕ್ಷೇತ್ರ), ರಾಮಕೃಷ್ಣ ರೈ ಮಾಲೆಂಗ್ರಿ (ಸಹಕಾರ), ರಘುನಾಥ ರೈ ಅಂಕತಡ್ಕ (ಯಕ್ಷಗಾನ), ರಾಮದಾಸ ರೈ ಮೊರಂಗಲ್ಲು (ಕೃಷಿ), ಉದಯಕುಮಾರ್ ರೈ ಬಾಳಿಲ (ಶಿಕ್ಷಣ), ಪ್ರದೀಪ್ ಕುಮಾರ್ ರೈ ಐಕಳಬಾವ (ಪತ್ರಿಕೋದ್ಯಮ), ಸುವರ್ಣ ರೈ ಕೊಂಕೊಣಿಮೂಲೆ ಕೊಡಿಯಾಲ (ಸಮಾಜ ಸೇವೆ), ಗೀತಾ ಉದಯ ಕುಮಾರ್ ರೈ ಕುಕ್ಕುತಡಿ (ಹೈನುಗಾರಿಕೆ)ಯವರನ್ನು ಸನ್ಮಾನಿಸಲಾಗುವುದು ಎಂದು ಜಯಪ್ರಕಾಶ್ ರೈ ಹೇಳಿದರು.

ಮಹಾಸಭೆ

ಮಧ್ಯಾಹ್ನ ಭೋಜನದ ವಿರಾಮದ ಬಳಿಕ 1.30 ರಿಂದ ಸಂಘದ ಮಹಾಸಭೆ ನಡೆಯುವುದು.

ಯಕ್ಷ ಗಾನ ನಾಟ್ಯ ಹಾಸ್ಯ ವೈಭವ

ಅಪರಾಹ್ನ 2 ರಿಂದ 4 ರವರೆಗೆ ಯಕ್ಷ -ಗಾನ- ನಾಟ್ಯ ಹಾಸ್ಯ ವೈಭವ ಕಾರ್ಯಕ್ರಮ ನಡೆಯುವುದು. ಅಂದು ವರ್ಷದ ಕೊನೆಯ ದಿನವಾಗಿರುವುದರಿಂದ ಹಲವರಿಗೆ ಹೊಸವರ್ಷಾಚರಣೆಯಲ್ಲಿ ಭಾಗವಹಿಸಲಿರುವುದರಿಂದ ಬಂಟರ ಸಮಾವೇಶದ ಕಾರ್ಯಕ್ರಮಗಳನ್ನು ಸಂಜೆಯೊಳಗೆ ಮುಕ್ತಾಯಗೊಳಿಸಲಾಗುವುದು ಎಂದು ಜಯಪ್ರಕಾಶ್ ರೈ ಹೇಳಿದರು.

ಸುಳ್ಯ ತಾಲೂಕಿನಲ್ಲಿ ಬಂಟರ ಸಂಖ್ಯೆ ಕಡಿಮೆ ಇದ್ದರೂ ನಮ್ಮ ಬಂಟರ ಭವನ ಜನಪ್ರಿಯ ಸಭಾಂಗಣವಾಗಿದೆ. ವರ್ಷಕ್ಕೆ 80 ರಷ್ಟು ಕಾರ್ಯಕ್ರಮ ನಡೆಯುತ್ತದೆ. ನಮ್ಮದು ಜಾತಿ ಸಂಘಟನೆಯಾದರೂ ಜಾತಿವಾದ ಇಲ್ಲ. ಎಲ್ಲ ಸಮಾಜದವರನ್ನೂ ಜತೆಗೆ ಕರೆದೊಯ್ಯುವ ಸಮಾಜ ನಮ್ಮದು. ಡಾ.ಕುರುಂಜಿ ವೆಂಕಟ್ರಮಣ ಗೌಡರ ಭಾವಚಿತ್ರವನ್ನೂ ನಾವು ಬಂಟರ ಭವನದಲ್ಲಿ ಅಳವಡಿಸಿದ್ದೇವೆ ಎಂದು ಜಯಪ್ರಕಾಶ್ ರೈ ಹೇಳಿದರು.

ಜಯಪ್ರಕಾಶ್ ರೈಯವರು ಅಧ್ಯಕ್ಷರಾದ ಬಳಿಕ ಬಂಟರ ಹಾಸ್ಟೆಲ್ ಆಯಿತು. ಅತ್ಯುತ್ತಮ ಬಂಟರ ಭವನ ಆಗಿದೆ. ಪ್ರತೀ ವರ್ಷ ಸಮಾವೇಶ ನಡೆಯುತ್ತದೆ ಎಂದು ಜೆ.ಕೆ.ರೈ ಹೇಳಿದರು.

ಬಂಟರ ಸಂಘದ ಸುಳ್ಯ‌ನಗರ ಸಮಿತಿ ಅಧ್ಯಕ್ಷ ದಯಾಕರ ಆಳ್ವ, ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ಇಂದಿರಾ ರಾಜಶೇಖರ ರೈ, ನಾಗೇಶ್ ಶೆಟ್ಟಿ, ಅರಂತೋಡು ವಲಯಾಧ್ಯಕ್ಷ ಜೆ.ಕೆ. ರೈ, ಕಾರ್ಯದರ್ಶಿ ಹರೀಶ್ ರೈ ಉಬರಡ್ಕ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.