ಭಕ್ತ ಜನ ಸಾಗರದ ನಡುವೆ ನಡೆಯಿತು ಪಂಜ ಪಂಚಲಿಂಗೇಶ್ವರ ಬ್ರಹ್ಮ ರಥೋತ್ಸವ

0

ಅಪೂರ್ವ ಚೆಂಡೆ ವಾದನಕ್ಕೆ ಮನ ಸೋತ ಭಕ್ತರು; ಕುಣಿತ ಭಜನೆಯಲ್ಲಿ ಹೆಜ್ಜೆ ಹಾಕಿದ ನೂರಾರು ಭಜಕರು

ಪಂಜ ಸೀಮೆ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಳದ ಜಾತ್ರೋತ್ಸವವು ಬ್ರಹ್ಮ ಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ಜರುಗುತ್ತಿದ್ದು ನಿನ್ನೆ ರಾತ್ರಿ ಶ್ರೀದೇವರ ಬ್ರಹ್ಮ ರಥೋತ್ಸವ ಜರುಗಿತು.

ಇದೇ ವೇಳೆ ಶ್ರೀ ಕಾಜು ಕುಜುಂಬ ದೈವದ ನರ್ತನ ಸೇವೆ, ಮಹಾಪೂಜೆ ಶ್ರೀ ಭೂತಬಲಿ , ಶಯನೋತ್ಸವ, ಕವಾಟ ಬಂಧನ ಜರುಗಿತು. ಪೂರ್ವ ಸಂಪ್ರದಾಯದಂತೆ ವಿವಿಧ ವೈದಿಕ ‌, ಧಾರ್ಮಿಕ ಕಾರ್ಯಕ್ರಮಗಳು ನಡೆದು ರಥೋತ್ಸವ ಜರುಗಿತು.

ಪೂರ್ವ ಸಂಪ್ರದಾಯದಂತೆ ಐವತ್ತೊಕ್ಲು ಪಟೇಲ್ ಮನೆಯವರನ್ನು ಹಾಗೂ ಪುತ್ಯ ,ಕುದ್ವ ಮನೆಯ ಪೈಯೋಳಿ ಮಕ್ಕಳನ್ನು ರಥೋತ್ಸವಕ್ಕೆ ಸ್ವಾಗತಿಸಲಾಯಿತು.
ಇದೇ ವೇಳೆ ಸಿಡಿಮದ್ದು ಪ್ರದರ್ಶನ ನಡೆಯಿತು.

ರಥೋತ್ಸವಕ್ಕೆ ಭಕ್ತ ಸಾಗರವೇ ಹರಿದು ಬಂತು. ದೇವಳದ ಮೈದಾನದಲ್ಲಿ ಅನೇಕ ಭಜನಾ ತಂಡಗಳ 600 ಕ್ಕೂ ಮಿಕ್ಕಿ ಭಜಕರಿಂದ ಕುಣಿತ ಭಜನೆ, ಕಲ್ಲಡ್ಕ ಶಿಲ್ಪಾ ಗೊಂಬೆ ಬಳಗದಿಂದ ಕೀಲು ಕುದುರೆ, ಕರಗನೃತ್ಯ,ಗೊಂಬೆಯಾಟ ಹಾಗೂ ಬೇತಾಳಗಳು, ಚೆಂಡೆ ತಂಡ ವಿಶೇಷ ಆಕರ್ಷಣೆಯಾಗಿತ್ತು‌.

ಈ ಬಾರಿಯ ವಿಶೇಷ ಆಕರ್ಷಣೆಯಾದ ಹದಿನೈದು ಹೆಚ್ಚಿನ ಚೆಂಡೆ ವಾದಕರ ಕೊಂಬು ವಾದ್ಯ ಸಹಿತ ಅಪೂರ್ವ ಚೆಂಡೆ ವಾದನಕ್ಕೆ ಭಕ್ತ ಜನರು ಮನ ಸೋತರು.

ಉತ್ಸವ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್ ಅವರು ಜಾತ್ರೋತ್ಸವದ ನೇತೃತ್ವ ವಹಿಸಿದ್ದು, ದೇಗುಲದ ಆಡಳಿತಾಧಿಕಾರಿ, ತಹಶೀಲ್ದಾರ್ ಜಿ. ಮಂಜುನಾಥ್, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಶ್ರೀಮತಿ ಮಲ್ಲಿಕಾ ಪಕ್ಕಳ, ದೇವಳದ ವ್ಯವಸ್ಥಾಪನಾ ಸಮಿತಿ ನಿಕಟಪೂರ್ವಾಧ್ಯಕ್ಷ ಪದ್ಮನಾಭ ರೈ ಅಗೋಳಿಬೈಲುಗುತ್ತು, ಉಪತಹಶೀಲ್ದಾರ್ ಚಂದ್ರಕಾಂತ್ ಎಮ್ ಆರ್, ಪಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ವಿಜಯಲಕ್ಷ್ಮೀ, ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಗಣೇಶ್ ಪೈ, ಪುತ್ತಿಲ ಪರಿವಾರದ ಅರುಣ್ ಕುಮಾರ್ ಪುತ್ತಿಲ, ಉತ್ಸವ ಸಮಿತಿ ಸದಸ್ಯರಾದ ಮಹೇಶ್ ಕುಮಾರ್ ಕರಿಕ್ಕಳ, ರಜಿತ್ ಭಟ್ ಪಂಜಬೀಡು, ಸಂತೋಷ್ ರೈ ಪಲ್ಲತ್ತಡ್ಕ, ಬಾಲಕೃಷ್ಣ ಗೌಡ ಕುದ್ವ, ಕುಶಾಲಪ್ಪ ಗೌಡ ದೊಡ್ಡಮನೆ, ತಿಮ್ಮಪ್ಪ ಗೌಡ ಪುತ್ಯ, ಕೇಶವ ಗೌಡ ಕುದ್ವ, ಮಾಯಿಲಪ್ಪ ಗೌಡ ಎಣ್ಮೂರು, ಸತ್ಯನಾರಾಯಣ ಭಟ್ ಕಾಯಂಬಾಡಿ, ಧರ್ಮಪಾಲ ಗೌಡ ಮರಕಡ,ಚಿನ್ನಪ್ಪ ಸಂಕಡ್ಕ, ಧರ್ಮಣ್ಣ ನಾಯ್ಕ ಗರಡಿ, ಅಶ್ವಿನ್ ಬಾಬ್ಲುಬೆಟ್ಟು, ಮಹಾಲಿಂಗ ಸಂಪ, ಅಶ್ವಥ್ ಬಾಬ್ಲುಬೆಟ್ಟು, ಶರತ್ ಕುದ್ವ, ಕುಮಾರ ಕಕ್ಯಾನ,ನವೀನ ಕಲ್ಕ, ಜಗದೀಶ್ ಮಠ, ಲೋಕನಾಥ್ ರೈ ಪಟ್ಟೆ, ಪವನ್ ಪಲ್ಲತ್ತಡ್ಕ, ಶ್ರೀಮತಿ ಪವಿತ್ರ ಕುದ್ವ ಮಲ್ಲೆಟಿ ,ಸಂಚಾಲಕರು, ಸದಸ್ಯರು, ಸೀಮೆಯ ಭಕ್ತಾದಿಗಳು ಪಾಲ್ಗೊಂಡಿದ್ದರು.

ಸುದ್ದಿ ಚಾನೆಲ್ ಬ್ರಹ್ಮ ರಥೋತ್ಸವದ ನೇರ ಪ್ರಸಾರ ಮಾಡಿದ್ದು ಜಗತ್ತಿನಾದ್ಯಂತ ಸಾವಿರಾರು ಮಂದಿ ವೀಕ್ಷಿಸಿದ್ದಾರೆ. ದೇವಳದ ಹೊರಗೆ ಬೃಹತ್ ಎ.ಇ.ಡಿ.ಪರದೆಯ ಮೂಲಕವೂ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು.

ಫೆ.7.ರಂದು ಮುಂಜಾನೆ ಕವಾಟೋದ್ಘಾಟನೆ ದೇವರಿಗೆ ಅಭಿಷೇಕ ,ಬಲಿ ಹೊರಟು ಅವಭೃತ ಸ್ನಾನ ,ಧ್ವಜಾವರೋಹಣ , ಮಧ್ಯಾಹ್ನ ಮಹಾಪೂಜೆ ಜರುಗಲಿದೆ.ಸಂಜೆ ದೇಗುಲದಿಂದ ಶ್ರೀ ಕಾಚುಕುಜುಂಬ, ಉಳ್ಳಾಕುಲು ದೈವಗಳ ಭಂಡಾರ ವನ್ನು ಮೆರವಣಿಗೆ ಮೂಲಕ ಮೂಲಸ್ಥಾನ ಗರಡಿ ಬೈಲಿಗೆ ಹೋಗಿ ಧ್ವಜಾರೋಹಣ , ಶ್ರೀ ಕಾಚುಕುಜುಂಬ ದೈವದ ನೇಮ. ಫೆ.8 ರಂದು ಮುಂಜಾನೆ ಗರಡಿ ಬೈಲಿನ ಮೂಲ ನಾಗನ ಕಟ್ಟೆಯಲ್ಲಿ ತಂಬಿಲ ಹಾಗೂ ಶ್ರೀ ಉಳ್ಳಾಕುಲು ದೈವದ ನೇಮ ,ಪ್ರಸಾದ ವಿತರಣೆ , ಧ್ವಜಾವರೋಹಣ, ಶ್ರೀ ದೇವಳದಲ್ಲಿ ಸಂಪ್ರೋಕ್ಷಣೆ ,ಮಹಾಪೂಜೆ ವೈದಿಕ ಮಂತ್ರಾಕ್ಷತೆ ಪ್ರಸಾದ ವಿತರಣೆ ಜರುಗಲಿದೆ. ರಾತ್ರಿ ಶಿರಾಡಿ ದೈವದ ಬಂಡಾರ ಬರುವುದು.ಫೆ.9.ರಂದು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಪೂಜೆ ಹಾಗೂ ಶಿರಾಡಿ ದೈವದ ನೇಮ ಜರುಗಲಿದೆ.