ನಾಳೆಯಿಂದ (ಮಾ.25) ಎಸ್.ಎಸ್.ಎಲ್.ಸಿ. ಪರೀಕ್ಷೆ

0

ತಾಲೂಕಿನಿಂದ 1985 ವಿದ್ಯಾರ್ಥಿಗಳು:6 ಪರೀಕ್ಷಾ ಕೇಂದ್ರಗಳು

೨೦೨೪ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆ ಮಾ.೨೫ರಿಂದ ಆರಂಭಗೊಂಡು ಎ.೬ರವರೆಗೆ ನಡೆಯಲಿದೆ. ತಾಲೂಕಿನಲ್ಲಿ ೬ ಪರೀಕ್ಷಾ ಕೇಂದ್ರಗಳಿರಲಿದ್ದು, ಒಟ್ಟು ೧೯೮೫ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
ಮಾ.೨೫ರಂದು ಪ್ರಥಮ ಭಾಷೆ, ಮಾ.೨೭ರಂದು ಸಮಾಜ ವಿಜ್ಞಾನ ಮಾ.೩೦ರಂದು ವಿಜ್ಞಾನ, ಏ.೨ರಂದು ಗಣಿತ, ಏ.೪ರಂದು ತೃತೀಯ ಭಾಷೆ ಹಾಗೂ ಏ.೬ರಂದು ದ್ವಿತೀಯ ಭಾಷೆಯ ಪರೀಕ್ಷೆಗಳು ನಡೆಯಲಿದೆ. ಪರೀಕ್ಷೆಗಳು ಪ್ರತಿ ದಿನ ಬೆಳಗ್ಗೆ ೧೦.೧೫ಕ್ಕೆ ಆರಂಭಗೊಳ್ಳಲಿದ್ದು, ಎಲ್ಲಾ ವಿದ್ಯಾರ್ಥಿಗಳು ೧೦ ಗಂಟೆಯ ಒಳಗಾಗಿ ಪರೀಕ್ಷೆ ನಡೆಯುವ ಕೇಂದ್ರದ ಒಳಗಡೆ ಉಪಸ್ಥಿತರಿರಬೇಕು. ಪ್ರತಿ ದಿನ ಪ್ರತಿ ವಿಷಯಗಳಿಗೆ ಪ್ರಶ್ನೆ ಪತ್ರಿಕೆಗಳನ್ನು ಓದಲು ೧೫ ನಿಮಿಷಗಳ ಕಾಲಾವಕಾಶ ನೀಡಲಾಗುತ್ತದೆ. ಒಟ್ಟು ಪರೀಕ್ಷೆ ೩ ಗಂಟೆಯಲ್ಲಿ ಬರೆಯಬೇಕಾಗುತ್ತದೆ. ಸುಳ್ಯ ತಾಲೂಕು ನೋಡೆಲ್ ಅಧಿಕಾರಿಯಾಗಿ ಸುಳ್ಯ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಆಶಾ ನಾಯಕ್ ರನ್ನು ನೇಮಿಸಲಾಗಿದೆ.


ಸುಳ್ಯದಲ್ಲಿ 6 ಪರೀಕ್ಷಾ ಕೇಂದ್ರ-1985 ಮಕ್ಕಳು


ಈ ಬಾರಿ ಸುಳ್ಯ ತಾಲೂಕಿನಲ್ಲಿ ೬ ಪರೀಕ್ಷಾ ಕೇಂದ್ರಗಳಿವೆ. ೧.ಸರಕಾರಿ ಪದವಿ ಪೂರ್ವ ಕಾಲೇಜು ಸುಳ್ಯ – ಇಲ್ಲಿ ಮುಖ್ಯ ಅಧೀಕ್ಷಕರಾಗಿ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪಪ್ರಾಂಶುಪಾಲ ಪ್ರಕಾಶ್ ಮೂಡಿತ್ತಾಯ ಹಾಗೂ ಉಪ ಮುಖ್ಯ ಅಧೀಕ್ಷಕರಾಗಿ ಗಾಂಧಿನಗರ ಕೆ.ಎಸ್.ನ. ದೈಹಿಕ ಶಿಕ್ಷಣ ಶಿಕ್ಷಕಿ ಪದ್ಮಿನಿ ಕರ್ತವ್ಯ ನಿರ್ವಹಿಸಲಿದ್ದಾರೆ. ೨.ಸುಳ್ಯ ಗಾಂಧಿನಗರ ಕೆ.ಪಿ.ಎಸ್. ಇಲ್ಲಿ ಮುಖ್ಯ ಅಧೀಕ್ಷಕರಾಗಿ ಸಂಪಾಜೆ ಸರಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕಿ ಜಯಶ್ರೀ ಎನ್.ಕೆ., ೩.ಸುಳ್ಯ ಸೈಂಟ್ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆ-ಇಲ್ಲಿ ಮುಖ್ಯ ಅಧೀಕ್ಷಕರಾಗಿ ಅಜ್ಜಾವರ ಪ್ರೌಢಶಾಲಾ ಮುಖ್ಯ ಶಿಕ್ಷಕ ಗೋಪಿನಾಥ ಎಂ., ೪.ಅರಂತೋಡು ಎನ್ನೆಪಿಯುಸಿ -ಮುಖ್ಯ ಅಧೀಕ್ಷಕರಾಗಿ ಅರಂತೋಡು ಎನ್ನೆಪಿಯುಸಿಯ ಪ್ರಭಾಕರ ಮುಖ್ಯ ಶಿಕ್ಷಕ ಸೀತಾರಾಮ ಎಂ.ಕೆ., ೫.ಬೆಳ್ಳಾರೆ ಕೆ.ಪಿ.ಎಸ್. ಇಲ್ಲಿ ಮುಖ್ಯ ಅಧೀಕ್ಷಕರಾಗಿ ಬೆಳ್ಳಾರೆ ಕೆಪಿಎಸ್‌ನ ಉಪಪ್ರಾಂಶುಪಾಲೆ ಉಮಾ ಕುಮಾರಿ, ೬.ಶ್ರೀ ಸುಬ್ರಹ್ಮಣ್ಯೇಶ್ವರ ಪದವಿ ಪೂರ್ವ ಕಾಲೇಜು ಸುಬ್ರಹ್ಮಣ್ಯ ಇಲ್ಲಿ ಮುಖ್ಯ ಅಧೀಕ್ಷಕರಾಗಿ ಎಣ್ಮೂರು ಸರಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕ ಟೈಟಸ್ ವರ್ಗೀಸ್ ನೇಮಕಗೊಂಡಿದ್ದಾರೆ.
ತಾಲೂಕಿನ ಸರಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಒಟ್ಟು ೩೬ ಪ್ರೌಢಶಾಲೆಗಳಿಂದ ಒಟ್ಟು ೧೮೦೮ ವಿದ್ಯಾರ್ಥಿಗಳು ಹೊಸದಾಗಿ ಪರೀಕ್ಷೆ ಬರೆಯಲಿದ್ದಾರೆ. ಉಳಿದಂತೆ ಖಾಸಗಿಯಾಗಿ ಹಾಗೂ ಈ ಹಿಂದೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದು ಅನುತೀರ್ಣರಾದ ವಿದ್ಯಾರ್ಥಿಗಳು ಸೇರಿ ೧೭೭ ಮಂದಿ ಪರೀಕ್ಷೆ ಬರೆಯಲಿದ್ದು, ಒಟ್ಟು ೧೯೮೫ ಮಂದಿ ಪರೀಕ್ಷೆ ಬರೆಯಲಿದ್ದಾರೆ.


144 ಸೆಕ್ಷನ್ ಜಾರಿ


ಪರೀಕ್ಷೆಯನ್ನು ಸುಗಮವಾಗಿ ನಡೆಸುವ ನಿಟ್ಟಿನಲ್ಲಿ ಮುಂಜಾಗ್ರತ ಕ್ರಮವಾಗಿ ಪರೀಕ್ಷಾ ಕೇಂದ್ರದ ವ್ಯಾಪ್ತಿಯಲ್ಲಿ ೧೪೪ ಸೆಕ್ಷನ್ ಜಾರಿಗೊಳಿಸಲಾಗಿದೆ. ಪರೀಕ್ಷಾ ಕೇಂದ್ರದ ೨೦೦ ಮೀಟರ್ ವ್ಯಾಪ್ತಿಯಲ್ಲಿ ಜೆರಾಕ್ಸ್ ಹಾಗೂ ಪ್ರಿಂಟಿಂಗ್ ಕೇಂದ್ರಗಳನ್ನು ಬಂದ್ ಮಾಡುವಂತೆ ಸೂಚನೆ ನೀಡಲಾಗಿದೆ.
ಹಾಲ್ ಟಿಕೆಟ್ ತೋರಿಸಿದರೆ ಉಚಿತ ಪ್ರಯಾಣ

ಎಸ್.ಎಸ್.ಎಲ್.ಸಿ. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಬಸ್‌ನಲ್ಲಿ ಬರುವವರು ಪರೀಕ್ಷಾ ಸಮಯದಲ್ಲಿ ಟಿಕೆಟ್ ಖರೀದಿಸಬೇಕಾಗಿಲ್ಲ. ಪರೀಕ್ಷಾ ಹಾಲ್ ಟಿಕೆಟನ್ನು ತೋರಿಸಿದರೆ ಉಚಿತ ಪ್ರವೇಶ ನೀಡಲಾಗುತ್ತದೆ.
ವಿದ್ಯಾರ್ಥಿಗಳು ಹಾಲ್ ಟಿಕೆಟ್ ಕಡ್ಡಾಯವಾಗಿ ತರಬೇಕು. ಹಾಗೊಂದು ವೇಳೆ ತಾರದೇ ಇದ್ದರೆ ಭಯಪಡಬೇಕೆಂದಿಲ್ಲ. ಪರೀಕ್ಷಾ ಅಧೀಕ್ಷಕರನ್ನು ಭೇಟಿಯಾಗಿ, ಅವರಿಂದ ಅನುಮತಿ ಪಡೆದು ಪರೀಕ್ಷೆ ಬರೆಯಲು ಅನುವು ಮಾಡಿ ಕೊಡಲಾಗುತ್ತದೆ.


ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಎಲ್ಲ ಸಿದ್ಧತೆಗಳೂ ಮಾಡಿಕೊಂಡಿzವೆ. ೬ ಪರೀಕ್ಷಾ ಕೇಂದ್ರಗಳು ೧೯೮೫ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಾರೆ. ಮಕ್ಕಳು, ಪೋಷಕರು ಭಯಪಡುವುದು ಬೇಡ. ಯಾವುದೇ ಟೆನ್ಷನ್ ಮಾಡಿಕೊಳ್ಳದೆ ವಿದ್ಯಾರ್ಥಿಗಳು ಚೆನ್ನಾಗಿ ಪರೀಕ್ಷೆ ಬರೆದು ಎಲ್ಲರೂ ಉತ್ತಿರ್ಣರಾಗಬೇನ್ನುವುದೇ ನಮ್ಮ ಆಶಯ.
-ರಮೇಶ್ ಬಿ.ಇ. ಕ್ಷೇತ್ರ ಶಿಕ್ಷಣಾಧಿಕಾರಿಗಳು ಸುಳ್ಯ