ಪಂಜ ಜಾತ್ರಾ ಮಹೋತ್ಸವದಲ್ಲಿ ತಾತ್ಕಾಲಿಕ ಸಂತೆ ವ್ಯಾಪಾರಿಗಳಿಂದ ಪಂಜ ಗ್ರಾಮ ಪಂಚಾಯತ್ ಕರ ವಸೂಲಿಗೆ ಸಂಬಂಧಿಸಿ ಪಂಜ ಗ್ರಾಮ ಪಂಚಾಯತ್ ವಿರುದ್ಧ ದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ನೀಡಿದ ಪೋಲೀಸ್ ದೂರಿನ ವರದಿಗೆ ಪಂಜ ಗ್ರಾಮ ಪಂಚಾಯತ್ ಆಡಳಿತ ಮಂಡಳಿ ಸ್ಪಷ್ಟನೆ ನೀಡಿದೆ.
04/02/2025ರ ಸಂಜೆ ಗಂ. 5.52ಕ್ಕೆ ಕಲ್ಮಡ್ಕ ಗ್ರಾ.ಪಂ.ಅಧ್ಯಕ್ಷ ಮಹೇಶ್ ಕುಮಾರ್ ಕರಿಕ್ಕಳರವರು ಪಂಜ ಗ್ರಾಮ ಪಂಚಾಯತ್ ನ ಪಿ.ಡಿ.ಒ.ರವರಿಗೆ ದೂರವಾಣಿ ಕರೆ ಮಾಡಿ ” ನೀವು ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವದ ಸಂತೆಯಲ್ಲಿ ಕರ ವಸೂಲಿ ಮಾಡಬಾರದಾಗಿ ಮತ್ತು ನಾವು ಕರ ವಸೂಲಿ ಮಾಡಲು ಬಿಡುವುದಿಲ್ಲ” ಎಂಬುದಾಗಿ ಹೇಳಿದ್ದು, ಈ ವಿಷಯವನ್ನು ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರು ಗ್ರಾಮ ಪಂಚಾಯತ್ ಆಡಳಿತ ಮಂಡಳಿಯ ಗಮನಕ್ಕೆ ತಂದಾಗ ಅಧ್ಯಕ್ಷರ ಆದೇಶದ ಅನ್ವಯ ದಿನಾಂಕ:05.02.2025 ರಂದು ಪೂರ್ವಾಹ್ನ ಗಂ.9.30ಕ್ಕೆ ತುರ್ತು ಸಭೆ ಕರೆದು ಸದ್ರಿ ವಿಷಯದ ಬಗ್ಗೆ ಚರ್ಚಿಸಿ ಆನೇಕ ವರ್ಷಗಳಿಂದ ಗ್ರಾಮ ಪಂಚಾಯತ್ ಜಾತ್ರಾ ಸಮಯದಲ್ಲಿ ಸ್ಥಳದಲ್ಲಿರುವ ಅಂಗಡಿಗಳಿಂದ ಸ್ವಚ್ಛತೆಗಾಗಿ ಶುಲ್ಕ ವಸೂಲಾತಿ ಮಾಡುತ್ತಿದ್ದು, ಇದೇ ಪ್ರಥಮ ಬಾರಿಗೆ ಮಹೇಶ್ ಕುಮಾರ್ ಕರಿಕ್ಕಳ ಇವರು ವಸೂಲಾತಿ ಮಾಡಲು ಬಿಡುವುದಿಲ್ಲವೆಂದು ತಿಳಿಸಿರುವುದರಿಂದ ಮೇಲಧಿಕಾರಿಗಳ ಸಲಹೆಯನ್ನು ಪಡೆದು ಹಾಗೂ ಪೊಲೀಸ್ ಅಧಿಕಾರಿಗಳ ಸಹಕಾರದೊಂದಿಗೆ ಹಾಗೂ ಪಂಜ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರ ಅನುಮತಿ ಪಡೆದು ವಸೂಲಾತಿ ಮಾಡುವುದೆಂದು ತೀರ್ಮಾನಿಸಲಾಯಿತು.















ಆದುದರಿಂದ ಸುಬ್ರಹ್ಮಣ್ಯ ಪೋಲೀಸ್ ಠಾಣಾಧಿಕಾರಿಯವರು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರ ಕೊಠಡಿಗೆ ನಮ್ಮನ್ನು ಕರೆಸಿ ಚರ್ಚಿಸಿದಾಗ ಸಮಿತಿ ಅಧ್ಯಕ್ಷರು ಗ್ರಾಮ ಪಂಚಾಯತಿ ವತಿಯಿಂದ ಶುಲ್ಕ ವಸೂಲಾತಿ ಮಾಡುವುದಕ್ಕೆ ದೇವಸ್ಥಾನದಿಂದ ಯಾರ ಅಭ್ಯಂತರವೂ ಇಲ್ಲ ಎಂದು ತಿಳಿಸಿದ ನಂತರ ಸುಬ್ರಹ್ಮಣ್ಯ ಪೋಲೀಸ್ ಠಾಣೆಯ ಸಿಬ್ಬಂದಿಗಳ ಸಹಕಾರದೊಂದಿಗೆ ಜಾತ್ರಾ ಮೈದಾನದಲ್ಲಿರುವ ಅಂಗಡಿಗಳಿಂದ ಶುಲ್ಕ ವಸೂಲಾತಿ ಮಾಡಲಾಗಿದೆ. ಆ ಸಂದರ್ಭದಲ್ಲಿ ಕೆಲವು ಅಂಗಡಿ ಮಾಲಕರು ಶುಲ್ಕ ಪಾವತಿಸಲು ನಿರಾಕರಿಸಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಿಗೆ ದೂರವಾಣಿ ಕರೆ ಮಾಡಿ ಅವರಲ್ಲಿ ವಿಚಾರಿಸಿಕೊಂಡು ಶುಲ್ಕವನ್ನು ಪಾವತಿಸಿರುತ್ತಾರೆ, ಮತ್ತೆ ಯಾವುದೇ ಗೊಂದಲಗಳು ಇರಲಿಲ್ಲ. ಆದರೆ ರಾತ್ರಿ ಸುಮಾರು 11.47ಕ್ಕೆ ಸುಬ್ರಹ್ಮಣ್ಯ ಪೋಲೀಸ್ ಠಾಣೆಯ ಎ.ಎಸ್.ಐ.ಯವರು ಗ್ರಾಮ ಪಂಚಾಯತ್ ಸಿಬ್ಬಂದಿ ಓರ್ವರಿಗೆ ದೂರವಾಣಿ ಕರೆಮಾಡಿ, ಪಂಚಾಯತು ಅಭಿವೃದ್ಧಿ ಅಧಿಕಾರಿ ಹಾಗೂ ಸಿಬ್ಬಂದಿಗಳು ದೇವಸ್ಥಾನದ ಸ್ಥಳದಲ್ಲಿ ತಮ್ಮ ಗಮನಕ್ಕೆ ಬಾರದೇ ಕರ ವಸೂಲಿ ಮಾಡಿರುತ್ತಾರೆಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ದೂರು ನೀಡಿರುತ್ತಾರೆಂದು ತಿಳಿಸಿರುತ್ತಾರೆ. ಪಂಜ ಗ್ರಾಮ ಪಂಚಾಯತು ಅಧ್ಯಕ್ಷರು ಓರ್ವ ಪರಿಶಿಷ್ಟ ಪಂಗಡ ಸಮುದಾಯಕ್ಕೆ ಸೇರಿದ ಮಹಿಳೆಯಾಗಿರುವುದರಿಂದ, ಕಲ್ಲಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಹೇಶ್ ಕುಮಾರ್ ಕರಿಕ್ಕಳ ಇವರು ಪಂಜ ಗ್ರಾಮ ಪಂಚಾಯತ್ ಅಧ್ಯಕ್ಷರನ್ನು ಸಾರ್ವಜನಿಕವಾಗಿ ಮಾನಹಾನಿ ಮಾಡಿ ದೌರ್ಜನ್ಯ ಎಸಗುವ ಉದ್ದೇಶದಿಂದ ಈ ಗೊಂದಲವನ್ನು ಸೃಷ್ಟಿ ಮಾಡಿರುತ್ತಾರೆ. ಇದನ್ನು ಪಂಜ ಪಂಚಾಯತ್ ಆಡಳಿತ ಮಂಡಳಿಯು ತೀವ್ರವಾಗಿ ಖಂಡಿಸುತ್ತದೆ ಎಂದು ಗ್ರಾಮ ಪಂಚಾಯತ್ ಅಧ್ಯಕ್ಷರು ಲಿಖಿತ ಸ್ಪಷ್ಟನೆಯಲ್ಲಿ ತಿಳಿಸಿದ್ದಾರೆ.










