ಸುಣ್ಣಮೂಲೆಯಲ್ಲಿ ಹಿಟ್ & ರನ್

0

ಪಾದಾಚಾರಿಗಳಿಗೆ ಕಾರು ಢಿಕ್ಕಿ ಹೊಡೆದು ಚಾಲಕ ನಿಲ್ಲಿಸದೆ ಪರಾರಿ

ಇಬ್ಬರಿಗೆ ಗಂಭೀರ ಗಾಯ – ಓರ್ವನ ಸ್ಥಿತಿ ಚಿಂತಾಜನಕ ಮಂಗಳೂರು ಆಸ್ಪತ್ರೆಗೆ ರವಾನೆ

ಪಾದಾಚಾರಿ ವ್ಯಕ್ತಿಗಳಿಬ್ಬರಿಗೆ ಕಾರೊಂದು ಢಿಕ್ಕಿ ಹೊಡೆದು ಚಾಲಕ ನಿಲ್ಲಿಸದೇ ಪರಾರಿಯಾಗಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡು, ಓರ್ವನ ಸ್ಥಿತಿ ಚಿಂತಾಜನಕವಾಗಿದ್ದು, ಅವರನ್ನು ಇದೀಗ ಮಂಗಳೂರಿನ ಆಸ್ಪತ್ರೆಗೆ ರವಾನಿಸಿದ ಘಟನೆ ಕನಕಮಜಲು ಗ್ರಾಮದ ಸುಣ್ಣಮೂಲೆಯಲ್ಲಿ ಸಂಭವಿಸಿದೆ.

ಕನಕಮಜಲು ಶ್ರೀ ಆತ್ಮಾರಾಮ ಭಜನಾ ಮಂದಿರದ ಏಕಾಹ ಭಜನೆ ನಡೆಯುತ್ತಿದ್ದು, ಕೋಡಿಯ ಜನಾರ್ದನ ಶೆಟ್ಟಿ ಹಾಗೂ ಅವರ ಮಾವ ರಾಮ ಶೆಟ್ಟಿ ಅವರು ಏಕಾಹ ಭಜನೆಗೆ ಮುಖ್ಯರಸ್ತೆ ಬದಿಯಲ್ಲಿ ನಡೆದುಕೊಂಡು ಬರುತ್ತಿದ್ದ ವೇಳೆ ಪುತ್ತೂರಿನಿಂದ ಸುಳ್ಯ ಕಡೆಗೆ ತೆರಳುತ್ತಿದ್ದ ಕಾರೊಂದು ರಭಸವಾಗಿ ಬಂದು ಇವರಿಬ್ಬರಿಗೆ ಢಿಕ್ಕಿ ಹೊಡೆಯಿತೆನ್ಮಲಾಗಿದೆ. ಈ ವೇಳೆ ರಾಮ ಶೆಟ್ಟಿ ಅವರು ರಸ್ತೆ ಬದಿ ಬಿದ್ದಿರುವುದನ್ನು ಗಮನಿಸಿದ ಸ್ಥಳೀಯರು ಅವರನ್ನು ಅಂಬ್ಯುಲೆನ್ಸ್ ಮೂಲಕ ಸುಳ್ಯದ ಕೆವಿಜಿ ಆಸ್ಪತ್ರೆಗೆ ಕರೆತಂದು ದಾಖಲಿಸಿದ್ದರು. ಆದರೆ ಕಾರು ಜನಾರ್ದನ ಅವರಿಗೂ ಢಿಕ್ಕಿ ಹೊಡೆದಿದ್ದು, ಅವರು ರಸ್ತೆಯಿಂದ ಸ್ಪಲ್ಪ ದೂರ ಎಸೆಯಲ್ಪಟ್ಟು ಗಂಭೀರವಾಗಿ ಗಾಯಗೊಂಡು ಪ್ರಜ್ಞಾಹೀನರಾಗಿ ಬಿದ್ದಿದ್ದರೆನ್ನಲಾಗಿದೆ. ಇದು ಯಾರಿಗೂ ತಿಳಿದಿರಲಿಲ್ಲ‌. ಬಳಿಕ ಸ್ಥಳೀಯರು ಗಮನಿಸಿದಾಗ ಅವರು ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಗಮನಿಸಿ, ಸ್ಥಳೀಯರಾದ ಜಯಪ್ರಸಾದ್ ಕಾರಿಂಜ ಅವರ ಕಾರಿನಲ್ಲಿ ಸುಳ್ಯದ ಕೆವಿಜಿ ಆಸ್ಪತ್ರೆಗೆ ಕರೆ ತಂದು ಪ್ರಥಮ ಚಿಕಿತ್ಸೆ ಕೊಡಿಸಲಾಗಿದೆ. ಆದರೆ ಅವರ ತಲೆಗೆ ಗಂಭೀರವಾಗಿ ಗಾಯಗೊಂಡಿರುವ ಕಾರಣ ಅವರನ್ನು ಇದೀಗ ಮಂಗಳೂರಿನ ಆಸ್ಪತ್ರೆಗೆ ಅಂಬ್ಯುಲೆನ್ಸ್ ಮೂಲಕ ರವಾನಿಸಲಾಗಿದೆ ಎಂದು ತಿಳಿದುಬಂದಿದೆ.
ಕಾರು ಚಾಲಕ ಇಬ್ಬರಿಗೆ ಢಿಕ್ಕಿ ಹೊಡೆದು ನಿಲ್ಲಿಸದೇ, ಪರಾರಿಯಾಗಿರುವುದಾಗಿ ತಿಳಿದುಬಂದಿದೆ.