ಪಂಜ: ಶ್ರೀಮತಿ ಚಂದ್ರಾವತಿ ಪುತ್ಯ ರವರಿಗೆ ಶ್ರದ್ಧಾಂಜಲಿ, ನುಡಿನಮನ

0

ಆದರ್ಶ ಗುಣಗಳ, ಪ್ರೀತಿಯ ಮಾತೃ ಶಕ್ತಿ : ಜಾಕೆ

ಊರಿಗೇ ತಾಯಿಯಂತಿದ್ದ ವ್ಯಕ್ತಿತ್ವ : ನಾಯರ್ ಕೆರೆ

ಕೂತ್ಕುಂಜ ಗ್ರಾಮದ ಪುತ್ಯ – ತೋಟ ಶ್ರೀಮತಿ ಚಂದ್ರಾವತಿ ರವರು ಇತ್ತೀಚೆಗೆ ನಿಧನರಾಗಿದ್ದು ಅವರ ವೈಕುಂಠ ಸಮಾರಾಧನೆ , ಶ್ರದ್ಧಾಂಜಲಿ ಸಭೆ ಮತ್ತು ನುಡಿನಮನ ಕಾರ್ಯಕ್ರಮವು ಮಾ.4 ರಂದು ಪುತ್ಯ – ತೋಟ ಮನೆಯಲ್ಲಿ ನಡೆಯಿತು.

ನುಡಿನಮನ ಸಲ್ಲಿಸಿದ ಸುಳ್ಯ ಸುದ್ದಿ ಚಾನೆಲ್ ಮುಖ್ಯಸ್ಥ ದುರ್ಗಾ ಕುಮಾರ್ ನಾಯರ್ ಕೆರೆ ಯವರು ” ಚಂದ್ರಾವತಿಯವರದು ಸಾತ್ವಿಕ ಶಕ್ತಿ, ಸಾರ್ಥಕ ಬಾಳ್ವೆ. ತನ್ನ ಪ್ರೀತಿ, ಮಮತೆ, ವಾತ್ಸಲ್ಯ ಗುಣಗಳ ಮೂಲಕ ಅವರು ಊರಿಗೇ ತಾಯಿಯಂತಿದ್ದ ಮಾತೃ ಸ್ವರೂಪಿ’ ಎಂದರು. ಚಂದ್ರಾವತಿಯವರ ಆತಿಥ್ಯದ ಸವಿ ಉಣ್ಣದವರು ಈ ಭಾಗದಲ್ಲಿ ಕಡಿಮೆ. ಉನ್ನತ ಅಧಿಕಾರಿಗಳಿಂದ ಮೊದಲ್ಗೊಂಡು ಜನ ಸಾಮಾನ್ಯರವರೆಗೂ ಆತಿಥ್ಯ ನೀಡುತ್ತಿದ್ದ ಅವರ ಗುಣ ವಿಶೇಷತೆ ವರ್ತಮಾನದ ಸಮಾಜಕ್ಕೆ ಮಾದರಿ ಎಂದು ಅವರು ಹೇಳಿದರು.

ಹಿರಿಯ ಸಹಕಾರಿ ಧುರೀಣ ಜಾಕೆ ಮಾಧವ ಗೌಡ ರವರು ನುಡಿ ನಮನ ಸಲ್ಲಿಸಿ ‘ ಚಂದ್ರಾವತಿಯವರು ಉತ್ತಮ ಗೃಹಿಣಿಯಾಗಿ ಎಲ್ಲರ ಪ್ರೀತಿ ಗಳಿಸಿದ್ದಾರೆ. ಈ ಮನೆಯೇ ಧರ್ಮ ಛತ್ರ ಇದ್ದಂತೆ. ಇದುವೇ ನಿಜವಾದ ಸ್ವರ್ಗದಂತಿತ್ತು. ಇವರು ನಮಗೆಲ್ಲರಿಗೂ ಆದರ್ಶ ತಾಯಿ. ಅವರ ಗುಣಗಳಿಂದ ಅವರು ಶಾಶ್ವತವಾಗಿ ನೆನಪಲ್ಲಿ ಉಳಿಯುತ್ತಾರೆ” ಎಂದು ಹೇಳಿದರು. ಪರಮೇಶ್ವರ ಬಿಳಿಮಲೆ ಕಾರ್ಯಕ್ರಮ ನಿರೂಪಿಸಿದರು.

ಮೃತರ ಪತಿ ಧಾರ್ಮಿಕ ಮುಖಂಡ, ದೈವ ಮಧ್ಯಸ್ಥರಾದ ತಿಮ್ಮಪ್ಪ ಗೌಡ ಪುತ್ಯ , ಪುತ್ರ, ಎಸ್ ಸಿ ಡಿ ಸಿ ಸಿ ಬ್ಯಾಂಕ್ ಸುಬ್ರಹ್ಮಣ್ಯ ಶಾಖೆಯ ಉದ್ಯೋಗಿ, ಪಂಜ ಶ್ರೀ ಶಾರದಾಂಬಾ ಭಜನಾ ಮಂಡಳಿ ನಿಕಟಪೂರ್ವಾಧ್ಯಕ್ಷ ಬಾಲಕೃಷ್ಣ ಪುತ್ಯ, ಪುತ್ರಿಯರಾದ ಶ್ರೀಮತಿ ರತ್ನಾವತಿ ಕೊಡಿಯಾಲ, ಶ್ರೀಮತಿ ವೇದಾವತಿ ಚಿದ್ಗಲ್ಲು, ಶ್ರೀಮತಿ ದಮಯಂತಿ ಶೇಣಿ, ಸೊಸೆ ಶಿಕ್ಷಕಿ ಶ್ರೀಮತಿ ಸುಗಂಧಿ ಬಾಲಕೃಷ್ಣ , ಅಳಿಯಂದಿರು, ಮೊಮ್ಮಕ್ಕಳು ಕುಟುಂಬಸ್ಥರು ಬಂಧುಮಿತ್ರರನ್ನು ಉಪಸ್ಥಿತರಿದ್ದು ಮೃತರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು.