ಪೊಲೀಸ್ ಕಾನ್‌ಸ್ಟೇಬಲ್ ಅಡ್ಕಾರಿನ ಅಭಿಷೇಕ್ ಎ.ಆರ್.ರಿಗೆ ಮುಖ್ಯಮಂತ್ರಿ ಚಿನ್ನದ ಪದಕ

0


ಮಂಗಳೂರು ಸಿಟಿ ಕ್ರೈಂ ಬ್ರಾಂಚ್‌ನಲ್ಲಿ ಪೊಲೀಸ್ ಕಾನ್‌ಸ್ಟೇಬಲ್ ಆಗಿರುವ ಸುಳ್ಯ ಜಾಲ್ಸೂರು ಗ್ರಾಮದ ಅಡ್ಕಾರಿನ ಅಭಿಷೇಕ್ ಎ.ಆರ್.ರವರಿಗೆ ಮುಖ್ಯಮಂತ್ರಿ ಚಿನ್ನದ ಪದಕ ಘೋಷಣೆಯಾಗಿದೆ.

೨೦೧೮ರಲ್ಲಿ ಪೊಲೀಸ್ ಇಲಾಖೆಗೆ ಸೇರಿದ್ದ ಇವರು ಸೈಬರ್ ಅಪರಾಧ ಪೊಲೀಸ್ ಠಾಣೆ (ಸೆನ್)ಯಲ್ಲಿ ಸೇವೆ ಆರಂಭಿಸಿದರು. ಕಳೆದ ವರ್ಷದಿಂದ ಮಂಗಳೂರಿನ ಸಿಟಿ ಕ್ರೈಂ ಬ್ರಾಂಚ್‌ನಲ್ಲಿ ಕಾನ್‌ಸ್ಟೇಬಲ್ ಆಗಿದ್ದಾರೆ. ಕರ್ನಾಟಕ ಪೊಲೀಸ್ ವಾಲಿಬಾಲ್ ಟೀಂನಲ್ಲಿ ಕ್ರೀಡಾ ಪ್ರತಿಭೆ ಮೆರೆದಿದ್ದರು.

ಕಳೆದೊಂದು ವರ್ಷದಿಂದ ಕ್ರೈಂ ಬ್ರಾಂಚ್‌ನಲ್ಲಿ ಇರುವ ಅಭಿಷೇಕ್ ಅವರು ಇತ್ತೀಚೆಗೆ ನಡೆದ ಕೋಟಕಾರು ಸಹಕಾರಿ ಬ್ಯಾಂಕ್ ದರೋಡೆ ಪ್ರಕರಣ, 75 ಕೋಟಿ ಮೊತ್ತದ ಮಾದಕ ದ್ರವ್ಯಗಳ ಸಾಗಾಟ ಪ್ರಕರಣ, ಕಳ್ಳನೋಟು ಸಾಗಾಟ, ಮತ್ತಿತರ ಹಲವು ಪ್ರಮುಖ ಅಪರಾಧ ಪ್ರಕರಣಗಳನ್ನು ಪತ್ತೆಹಚ್ಚುವ ತಂಡದಲ್ಲಿ ಸಕ್ರಿಯರಾಗಿದ್ದರು.

ಈ ಹಿನ್ನೆಲೆಯಲ್ಲಿ ಇಲಾಖಾಧಿಕಾರಿಗಳ ಶಿಫಾರಸ್ಸಿನ ಮೇರೆಗೆ ಮುಖ್ಯಮಂತ್ರಿಗಳ ಚಿನ್ನದ ಪದಕ ಘೋಷಣೆಯಾಗಿದೆ. ಎ. ೨ರಂದು ಪದಕ ಪ್ರದಾನ ಸಮಾರಂಭ ಬೆಂಗಳೂರಿನಲ್ಲಿ ನಡೆಯುವುದು. ಅಭಿಷೇಕ್‌ರವರು ಅಡ್ಕಾರಿನ ರಾಮಕೃಷ್ಣ ಪಾಟಾಳಿ ಹಾಗೂ ಜಯಲಕ್ಷ್ಮಿಯವರ ಪುತ್ರ.