














ಎಣ್ಮೂರು ಗ್ರಾಮದ ನಮ್ಮ ಗ್ರಾಮ – ನಮ್ಮ ಹೆಮ್ಮೆ ಸಮಿತಿ ಆಶ್ರಯದಲ್ಲಿ ಇತಿಹಾಸ ಪ್ರಸಿದ್ಧ ಸ್ಥಳವಾದ ಕಾರಣಿಕ ಪುರುಷರಾದ ಕೋಟಿ ಚೆನ್ನಯರ ಆದಿಬೈದ್ಯೆರುಗಳ ಗರಡಿಯಲ್ಲಿ ಸ್ವಚ್ಛತಾ ಕಾರ್ಯಕ್ರಮ ಎ.27 ರಂದು ನಡೆಯಿತು. ಬೈದ್ಯೆರುಗಳ ನೇಮೋತ್ಸವದ ಸಂದರ್ಭ ಸಾವಿರಾರು ಮಂದಿ ಭಕ್ತಾದಿಗಳು ಸೇರುವುದರಿಂದ ಅಲ್ಲಿ ಸಂಗ್ರಹವಾಗುವ ಕಸ ಪ್ಲಾಸ್ಟಿಕ್ ಮತ್ತಿತರ ತ್ಯಾಜ್ಯಗಳನ್ನು ಹೆಕ್ಕಿ ತೆಗೆದು ಗರಡಿಯ ಪರಿಸರವನ್ನು ಸ್ವಚ್ಛಗೊಳಿಸಲಾಯಿತು.

ಎಣ್ಮೂರು ಗ್ರಾಮದ ನಮ್ಮ ಗ್ರಾಮ – ನಮ್ಮ ಹೆಮ್ಮೆ ಅಭಿಯಾನ ಸಮಿತಿ ರಚನೆಗಾಗಿ ಎ.26 ರಂದು ಎಣ್ಮೂರು ಶಾಲೆಯ ವಠಾರದಲ್ಲಿ ಗ್ರಾಮಸ್ಥರ ಸಭೆ ಕರೆಯಲಾಗಿತ್ತು. ಸುದ್ದಿ ಸಂಪಾದಕ ಹರೀಶ್ ಬಂಟ್ವಾಳ್ ರವರು ಗ್ರಾಮವನ್ನು ಹೆಮ್ಮೆಯನ್ನಾಗಿಸುವ ವಿಷಯದ ಬಗ್ಗೆ ಮಾತನಾಡುವಾಗ ಗ್ರಾಮದ ಸ್ವಚ್ಛತೆಯ ಬಗ್ಗೆ ಹೇಳಿದ್ದರು. ಆ ಬಳಿಕ ಮಾತನಾಡಿದ ಕೆ.ಎನ್.ರಘುನಾಥ ರೈ ಕಟ್ಟಬೀಡುರವರು ಆದಿಬೈದ್ಯೆರುಗಳ ಗರಡಿಯ ಸುತ್ತ ಇರುವ ಕಸಕಡ್ಡಿಗಳನ್ನು ಸ್ವಚ್ಛಗೊಳಿಸುವ ಅಗತ್ಯದ ಬಗ್ಗೆ ಹೇಳಿದರು. ಇದಕ್ಕೆ ಸ್ಪಂದಿಸಿದ ರಮೇಶ್ ಕೋಟೆಯವರು ” ಇವತ್ತಿನ ಸಮಿತಿಯ ವತಿಯಿಂದಲೇ ಗರಡಿಯ ಪರಿಸರದಲ್ಲಿ ನಾಳೆಯೇ ಸ್ವಚ್ಛತಾ ಶ್ರಮದಾನ ಮಾಡೋಣ ” ಎಂದರು. ಸೇರಿದ ಎಲ್ಲರೂ ಅದನ್ನು ಒಪ್ಪಿದರು. ಮರುದಿನ ಅಂದರೆ ಎ.27 ಆದಿತ್ಯವಾರದಂದು ಸ್ವಚ್ಛತಾ ಶ್ರಮಸೇವೆ ನಡೆದು ಗರಡಿಯ ಪರಿಸರದಲ್ಲಿದ್ದ ಎಲ್ಲ ಕಸಕಡ್ಡಿಗಳನ್ನು ತೆಗೆದು ಸ್ವಚ್ಛಗೊಳಿಸಲಾಯಿತು.
ಈ ಸಂದರ್ಭದಲ್ಲಿ ಎನ್.ಜಿ.ಲೋಕನಾಥ ರೈ , ಕಟ್ಟಬೀಡು ರಘುನಾಥ ರೈ ಕೆ.ಎನ್. , ರಮೇಶ್ ಕೋಟೆ, ಮಾಯಿಲಪ್ಪ ಗೌಡ, ರಾಜೇಶ್ ರೈ ಗುತ್ತು, ಶ್ರೀಮತಿ ಶೀಲಾವತಿ ಗುತ್ತು, ಉಮೇಶ್ ಅಲೆಂಗಾರ ಇನ್ನಿತರರು ಉಪಸ್ಥಿತರಿದ್ದರು.
(ವರದಿ: ಎ.ಎಸ್.ಸಾಲ್ಯಾನ್)*










