ಮಡಿಕೇರಿ ಕಾಂಗ್ರೆಸ್ ಪದಾಧಿಕಾರಿಗಳ ಬದಲಾವಣೆ ವಿಚಾರ ಅಂತಿಮಗೊಂಡಿಲ್ಲ : ವಕ್ತಾರ ಸೂರಜ್ ಹೊಸೂರು

0

ಕೆಪಿಸಿಸಿ ಅಧ್ಯಕ್ಷರ ಆದೇಶದ ಮೇರೆಗೆ ಹಾಗು ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಸೂಚನೆಯಂತೆ, ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಹಾಗು ಬ್ಲಾಕ್ ವ್ಯಾಪ್ತಿಯ 18 ವಲಯಗಳ ಅಧ್ಯಕ್ಷರುಗಳ ಪುನರಚನೆ/ಮುಂದುವರಿಕೆ ಬಗ್ಗೆ ಚರ್ಚಿಸಲು ಹಾಗು ಪಕ್ಷವನ್ನು ಮತ್ತಷ್ಟು ಬಲ ಗೊಳಿಸುವ ನಿಟ್ಟಿನಲ್ಲಿ, ದಿನಾಂಕ 28-04-2025 ರಿಂದ 01-05-2025 ರ ವರೆಗೆ ವಿವಿಧ ವಲಯಗಳಿಗೆ, ಮಾನ್ಯ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ನೇಮಿಸಿದ, ಟಿ.ಪಿ. ರಮೇಶ್ ರವರ ನೇತೃತ್ವದ ಸಮಿತಿ ಭೇಟಿ ನೀಡಿ, ವಲಯ ಪ್ರಮುಖರಿಂದ ಮಾಹಿತಿ ಪಡೆದುಕೊಳ್ಳಲಾಗಿದೆ. ಈ ವರದಿಯನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಿಗೆ ಸಲ್ಲಿಸಲಿದ್ದು, ಜಿಲ್ಲಾಧ್ಯಕ್ಷರು ಮತ್ತು ಜಿಲ್ಲಾ ಸಮಿತಿಯ ಅನುಮೋದನೆ ಪಡೆದು ಅಂತಿಮ ನಿರ್ಣಯ ಘೋಷಣೆ ಮಾಡಲಿದ್ದಾರೆ. ಈಗ ಯಾವುದೇ ವಲಯ ಸಮಿತಿಗಳ ಪದಾಧಿಕಾರಿಗಳ ಬದಲಾವಣೆಯಾಗಿಲ್ಲ ” ಎಂದು ಮಡಿಕೇರಿ ತಾಲೂಕು ಕಾಂಗ್ರೆಸ್ ವಕ್ತಾರ ಸೂರಜ್ ಹೊಸೂರು ಸುದ್ದಿಗೆ ತಿಳಿಸಿದ್ದಾರೆ.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಧರ್ಮಜ ಉತ್ತಪ್ಪ, ನಾಪೋಕ್ಲು ಬ್ಲಾಕ್ ಅಧ್ಯಕ್ಷರಾದ ಇಸ್ಮಾಯಿಲ್, ಕೆಪಿಸಿಸಿ ಸದಸ್ಯರಾದ ರಾಮನಾಥ್ ಬೇಕಲ್, ಅಕ್ರಮ-ಸಕ್ರಮ ಸಮಿತಿ ಅಧ್ಯಕ್ಷ ನೆರವಂಡ ಉಮೇಶ್, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಮಂದ್ರೀರ ಮೋಹನ್ ದಾಸ್, ಡಿಸಿಸಿ ಉಪಾಧ್ಯಕ್ಷರಾದ ಅಬ್ದುಲ್ ರೆಹಮಾನ್, ಡಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೊಲ್ಯದ ಗಿರೀಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳು ಮತ್ತಿತರರು ಪ್ರಮುಖರು ಅಭಿಪ್ರಾಯ ಸಂಗ್ರಹದ ವೇಳೆ ಉಪಸ್ಥಿತರಿದ್ದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಧರ್ಮಜ ಉತ್ತಪ್ಪ ರವರು ಮಾತನಾಡಿ*, ವಲಯ ಮಟ್ಟದಲ್ಲಿ ಯಾವುದೇ ತೀರ್ಮಾನ ಕೈಗೊಳ್ಳುವ ಅಧಿಕಾರ ಕೇವಲ ವಲಯಾಧ್ಯಕ್ಷರ ನೇತೃತ್ವದ ವಲಯ ಸಮಿತಿಗೆ ಮಾತ್ರ ಇರುತ್ತದೆ ಹಾಗು ಇನ್ನು ಮುಂದೆ ವಲಯ ಸಮಿತಿಯ ಅಂಕಿತ ಇಲ್ಲದೆ ಯಾವುದೇ ಕಾಮಗಾರಿ ಕೈಗೊಳ್ಳುವುದಿಲ್ಲ ಎಂದು ಹೇಳಿದರು. ಪ್ರತಿ ತಿಂಗಳು ವಲಯ ಮಟ್ಟದ ಸಭೆಯನ್ನು ಕಡ್ಡಾಯವಾಗಿ ಮಾಡಿ ಬ್ಲಾಕ್ ಸಮಿತಿಗೆ ವರದಿ ನೀಡಬೇಕು ಎಂದು ಆದೇಶ ಮಾಡಿದರು. ವಲಯ ಸಭೆಗಳಿಗೆ ಆ ವ್ಯಾಪ್ತಿಯ ಎಲ್ಲಾ ಡಿಸಿಸಿ ಪದಾಧಿಕಾರಿಗಳು, ಪ್ರಮುಖರು ಮತ್ತು ಹಿರಿಯರನ್ನು ಆಹ್ವಾನಿಸುವಂತೆ ಸೂಚಿಸಿದರು. ಎಲ್ಲರೂ ಒಗ್ಗಟ್ಟಾಗಿ ಪಕ್ಷದ ಕಟ್ಟೋಣ ಎಂದು ಕರೆ ನೀಡಿದರು.

ಸಮಿತಿಯ ಅಧ್ಯಕ್ಷರಾದ ಟಿ.ಪಿ. ರಮೇಶ್ ಮಾತನಾಡಿ, ಸರಕಾರ ಹಾಗೂ ಶಾಸಕರು ಮಾಡುವ ಕೆಲಸವನ್ನು ಪ್ರತಿ ವಲಯದಲ್ಲಿ ಪ್ರಚಾರ ಪಡಿಸುವಂತಹ ಕೆಲಸ ವಲಯ ಸಮಿತಿ ಮಾಡಬೇಕು ಎಂದು ಹೇಳಿದರು. ಕಾರ್ಯಕರ್ತರಿಗೆ ವಲಯ ಸಮಿತಿಯ ಮಹತ್ವವನ್ನು ವಿವರಿಸಿದರು. ಇದೇ ಸಂದರ್ಭದಲ್ಲಿ ಪಕ್ಷದ ಪ್ರಮುಖರು ಸಹ ಮಾತನಾಡಿದರು.
ಜಿಲ್ಲಾ ಸಮಿತಿಯ ಅಧಿಕೃತ ಆದೇಶ ಬರುವ ತನಕ, ಈ ಹಿಂದಿನ ವಲಯ ಸಮಿತಿಯೇ ಮುಂದುವರಿಯುವುದು ಎಂದು ಜಿಲ್ಲಾಧ್ಯಕ್ಷರು ಸಭೆಯಲ್ಲಿ ತಿಳಿಸಿದರು ಎಂದು ಸೂರಜ್ ಹೇಳಿದ್ದಾರೆ.