ಸುಳ್ಯದ ನಿಹಾಲ್ ಕಮಾಲ್ ಖೇಲೋ ಇಂಡಿಯಾ ಕ್ರೀಡಾಕೂಟ 2025ಕ್ಕೆಆಯ್ಕೆ

0

ಭದ್ರ ಭವಿಷ್ಯವಿರುವ ಯುವ ಅಥ್ಲೀಟ್ ನಿಹಾಲ್ ಕಮಾಲ್ ಅವರನ್ನು 2025ರ ಮೇ 4 ರಿಂದ 15 ರವರೆಗೆ ಬಿಹಾರದಲ್ಲಿ ನಡೆಯಲಿರುವ ಖೇಲೋ ಇಂಡಿಯಾ ಯುವ ಕ್ರೀಡಾಕೂಟಕ್ಕೆ (KIYG)ಅಧಿಕೃತವಾಗಿ ಆಯ್ಕೆ ಮಾಡಲಾಗಿದೆ. ದೇಶದ ದ್ವಿತೀಯ ಅತಿ ದೊಡ್ಡ ಬಹು ಕ್ರೀಡಾಕೂಟವಾಗಿ ಖ್ಯಾತಿ ಇರುವ ಈ ಕ್ರೀಡಾಕೂಟ ಭಾರತದ ಪ್ರತಿಭಾ ಶಾಲಿ ಕ್ರೀಡಾ ಪಟುಗಳಿಗೆ ತಮ್ಮ ಪ್ರತಿಭೆಯನ್ನು ತೋರಿಸಲು ಪ್ರಮುಖ ವೇದಿಕೆಯಾಗಿದೆ. ಕ್ರೀಡಾಕೂಟವನ್ನು ಪಾಟ್ನಾದ ಪಾಟಲಿಪುತ್ರ ಕ್ರೀಡಾ ಸಂಕೀರ್ಣದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ, ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಹಲವಾರು ಕೇಂದ್ರ ಹಾಗೂ ರಾಜ್ಯದ ಸಚಿವರ ಉಪಸ್ಥಿತಿಯಲ್ಲಿ ಭವ್ಯವಾಗಿ ಉದ್ಘಾಟಿಸಲಾಯಿತು .
ದೆಹಲಿ ನ್ಯಾಷನಲ್ ಸ್ಪೋರ್ಟ್ಸ್ ಫೆಡರೇಶನ್ ವತಿಯಿಂದ ನಿಹಾಲ್ ಅವರನ್ನು ಭಾರತದಿಂದ ಆಯ್ಕೆಗೊಂಡ ಉತ್ತಮ 16 ಅಥ್ಲೀಟ್ಸ್ ಗಳಲ್ಲಿ ಒಬ್ಬರಾಗಿ 100 ಮೀಟರ್ ಓಟದ ಸ್ಪರ್ಧೆಗೆ ಆಯ್ಕೆ ಮಾಡಲಾಗಿದೆ.
ನಿಹಾಲ್ ಕಮಲ್ ಅವರು ದೆಹಲಿ ಪಬ್ಲಿಕ್ ಸ್ಕೂಲ್ ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇತ್ತೀಚೆಗೆ ನಡೆದ 27ನೇ CBSE ಕ್ಲಸ್ಟರ್ ಅಥ್ಲೆಟಿಕ್ಸ್ ಮೀಟ್ ನಲ್ಲಿ ನಿಹಾಲ್ ಅತ್ಯುತ್ತಮ ಪ್ರದರ್ಶನವನ್ನು ನೀಡಿದ್ದರು. ಅವರು U 17 ಬಾಲಕರ 100 ಮೀಟರ್ ಓಟದಲ್ಲಿ 21 ವರ್ಷದ ಹಳೆಯ ದಾಖಲೆ ಮುರಿದು ಈಗ 100 ಮೀಟರ್ ಮತ್ತು 200 ಮೀಟರ್ ಓಟಗಳಲ್ಲಿ ಸ್ವರ್ಣ ಹಾಗೂ 4100 ಮೀಟರ್ ರಿಲೇಯಲ್ಲಿ ಕಂಚಿನ ಪದಕ ಗೆಲ್ಲುವಂತೆ ಮುನ್ನಡೆಸಿದರು. ಇವರು ಶಾಲಾ ಮಟ್ಟದ ಸ್ಪರ್ಧೆ ಗಳಲ್ಲದೆ ಕುವೈಟ್ ಅಥ್ಲೆಟಿಕ್ಸ್ ಫೆಡರೇಶನ್ ನಡೆಸಿದ ವಿವಿಧ ಕ್ರೀಡಾಕೂಟಗಳಲ್ಲಿ ಆಲ್ ಸಾಹೇಲ್ ಕ್ಲಬ್ ನ ಪ್ರತಿನಿಧಿಯಾಗಿ ತಮ್ಮ ಪ್ರತಿಭೆಯನ್ನು ತೋರಿಸಿದ್ದಾರೆ. ಕುವೈಟ್ ಯುವ ಚಾಂಪಿಯನ್ ಶಿಪ್ ನಲ್ಲಿ 100 ಮೀಟರ್ ಓಟದಲ್ಲಿ ಎರಡು ಸ್ವರ್ಣ ಮತ್ತು ಒಂದು 300 ಮೀಟರ್ ಓಟದಲ್ಲಿ ಬೆಳ್ಳಿ ,400 ಮೀಟರ್ ಕಂಚಿನ ಪದಕ ಹಾಗೂ ಕುವೈಟ್ ಫೆಡರೇಶನ್ ಕಪ್ ನ 19 ವಿಭಾಗದಲ್ಲಿ 4100 ಮೀಟರ್ ರಿಲೆಯಲ್ಲಿ ಸ್ವರ್ಣ ಮತ್ತು 2025ರ ಯುವ ಚಾಂಪಿಯನ್ಶಿಪ್ ನಲ್ಲಿ 200 ಮೀಟರ್ ಓಟದಲ್ಲಿ ಬೆಳ್ಳಿ ಪದಕ ಗಳಿಸಿದ್ದಾರೆ. ನಿಹಾಲ್ ಅವರು ಭಾರತೀಯ ಅಥ್ಲೆಟಿಕ್ಸ್ ಫೆಡರೇಶನ್ ಮತ್ತು ಕುವೈಟ್ ಅಥ್ಲೆಟಿಕ್ಸ್ ಫೆಡರೇಶನ್ ಎರಡರಲ್ಲೂ ನೋಂದಾಯಿತ ಸದಸ್ಯರಾಗಿದ್ದಾರೆ. ಇವರು ಬಿಹಾರದ ಪಾಟ್ನಾದಲ್ಲಿ ನಡೆದ ರಾಷ್ಟ್ರೀಯ ಮಟ್ಟದ U 18 ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ನಾಲ್ಕನೇ ಸ್ಥಾನ, ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ದ್ವಿತೀಯ ಸ್ಥಾನ ಹಾಗೂ 2024ರ ವಾರಣಾಸಿಯಲ್ಲಿ ನಡೆದ CBSEರಾಷ್ಟ್ರೀಯ U 17 100 ಮೀಟರ್ ಓಟದಲ್ಲಿ ಐದನೇ ಸ್ಥಾನ ಪಡೆದಿದ್ದರು.
ನಿಹಾಲ್ ಕಮಾಲ್ ಮೂಲತಃ ಸುಳ್ಯದ ಅಜ್ಜಾವರ ಗ್ರಾಮದ ನಿವಾಸಿಯಾಗಿರುವ, ಪ್ರಸ್ತುತ ಕುವೈಟ್ ನಲ್ಲಿ ವೃತ್ತಿಯಲ್ಲಿ ಇಂಜಿನಿಯರ್ ಮತ್ತು ಉದ್ಯಮಿಯಾಗಿರುವ ಮಹಮ್ಮದ್ ಕಮಾಲ್ ಮತ್ತು ಕುವೈತ್ ಸರಕಾರಿ ಸಾಮ್ಯದ ತೈಲ ಕಂಪನಿಯಲ್ಲಿ ಇಂಜಿನಿಯರ್ ಆಗಿರುವ ರಹೀನ ಕಮಾಲ್ ಅವರ ಪುತ್ರ.