ಕಾನತ್ತಿಲ ಉಳ್ಳಾಕುಳ ದೈವಗಳ ವರ್ಷಾವಧಿ ನೇಮೋತ್ಸವ

0


ಕುರುಂಜಿ, ಕುದ್ಪಾಜೆ, ಕಾನತ್ತಿಲ ಮತ್ತು ಕೇರ್ಪಳ ಕುಟುಂಬಗಳ ನೇತೃತ್ವದಲ್ಲಿ ಕುರುಂಜಿ ಕುಟುಂಬಿಕರ ಮೊಕ್ತೇಸರಿಕೆಯಲ್ಲಿ ನಡೆಯುವ ಶ್ರೀ ಕಾನತ್ತಿಲ ಉಳ್ಳಾಕ್ಲು ಮತ್ತು ಪರಿವಾರ ದೈವಗಳ ವರ್ಷಾವಧಿ ನೇಮೋತ್ಸವವು ಮೇ. ೧೩ ಮತ್ತು ೧೪ರಂದು ಪೂರ್ವ ಸಂಪ್ರದಾಯದಂತೆ ನಡೆಯಿತು.


ನೇಮಕ್ಕೆ ಗೊನೆಮುಹೂರ್ತ ಎ. ೨೫ರಂದು ನಡೆದಿತ್ತು. ಮೇ. ೧ರಂದು ಮುಂಡಿಗೆ ಪೂಜೆ ಹಾಗೂ ಮೇ.೨ರಂದು ಮುಂಡ್ಯದ ವಾಲಸರಿ ನಡೆದಿತ್ತು.
ಮೇ. ೧೩ರಂದು ಮಂಗಳವಾರ ಸಂಜೆ ಕುರುಂಜಿ ಮಾಳಿಗೆಯಿಂದ ಕಾನತ್ತಿಲ ಚಾವಡಿಗೆ ಭಂಡಾರ ತರುವುದು ಹಾಗೂ ಅಂದು ರಾತ್ರಿ ಸಂಕ್ರಮಣ ಪೂಜೆ ನಡೆದು, ಮೇ. ೧೪ರಂದು ಮುಂಜಾನೆ ೫ ಗಂಟೆಗೆ ಉಳ್ಳಾಕುಳ ನೇಮ ನಡೆಯಿತು. ಕಾನತ್ತಿಲ ಚಾವಡಿಯಿಂದ ಕಾನತ್ತಿಲ ಮಾಡದವರೆಗೆ ಉಳ್ಳಾಕುಲು ಬರುವ ದಾರಿ ಮಧ್ಯೆ ತೋಟದಲ್ಲಿ ಅಡ್ಡಣಪೆಟ್ಟು ನಡೆಯಿತು. ಬಳಿಕ ಕಾನತ್ತಿಲ ಮಾಡಕ್ಕೆ ಬಂದು ಭಕ್ತರಿಗೆ ದೈವದ ಪ್ರಸಾದ ವಿತರಣೆ ನಡೆಯಿತು. ಆ ಬಳಿಕ ಪುರುಷರಾಯ ಭೂತ ಹಾಗೂ ಇತರ ದೈವಗಳ ನೇಮ, ಹರಿಕೆ, ಕಾಣಿಕೆ ಸ್ವೀಕಾರ, ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.


ಆಡಳಿತ ಮೊಕ್ತೇಸರ ಕೆ.ವಿ.ಹೇಮನಾಥ ಮತ್ತು ತರರು ನೂರಾರಾರು ಭಕ್ತಾಭಿಮಾನಿಗಳು ದೈವೀಕಾರ್ಯದಲ್ಲಿ ಭಾಗಿಯಾದರು. ಮಾಡಕ್ಕೆ ಬರುವ ರಸ್ತೆಗೆ ಕಾಂಕ್ರೀಟ್ ಹಾಕಲಾಗಿದ್ದು, ಅದರ ಕ್ಯೂರಿಂಗ್‌ಗಾಗಿ ವಾಹನ ಸಾಗಲು ಅವಕಾಶವಿಲ್ಲದಿದ್ದುದರಿಂದ ಅನೇಕ ಭಕ್ತರು ಹೋಗಿ ಬರುವುದಕ್ಕೆ ಕಷ್ಟ ಪಡುತ್ತಿದ್ದುದು ಕಂಡಬಂತು.