














ಬೆಳ್ಳಾರೆಯಿಂದ ಅಯ್ಯನಕಟ್ಟೆ ಚೊಕ್ಕಾಡಿ ಮೂಲಕ ಪೈಚಾರಿಗೆ ಮೆಸ್ಕಾಂ ಇಲಾಖೆಯವರು ಭೂಗತ ಕೇಬಲ್ ಅಳವಡಿಸಲು ರಸ್ತೆ ಬದಿ ಚರಂಡಿ ನಿರ್ಮಿಸಿದ್ದು, ಇವರ ಬೇಜವಾಬ್ದಾರಿ ಕಾರ್ಯ ರಸ್ತೆ ಫಲಾನುಭವಿಗಳಿಗೆ ಕಂಟಕವಾಗಿ ಪರಿಣಮಿಸಿರುವುದು ಮಾತ್ರವಲ್ಲದೆ ಚೊಕ್ಕಾಡಿ – ಬೆಳ್ಳಾರೆ ಮಾರ್ಗದ ಬಸ್ ಸಂಚಾರ ಸ್ಥಗಿತಗೊಂಡ ಘಟನೆ ಮೇ. 21ರಂದು ನಡೆದಿದೆ.
ಅಯ್ಯನಕಟ್ಟೆಯಿಂದ ಕಳಂಜ, ಕೊಲ್ಲರ್ನೂಜಿಯಿಂದ ಚೊಕ್ಕಾಡಿ ತನಕ ರಸ್ತೆಬದಿ ಕೇಬಲ್ ಹಾಕಲು ಆಳವಾದ ಚರಂಡಿ ಅಗೆದು ರಸ್ತೆಯ ಮಧ್ಯ ಭಾಗದ ತನಕ ಮಣ್ಣು ಹರಡಲಾಗಿದೆ. ಸುಲುಗೋಡಿನಿಂದ ಚೊಕ್ಕಾಡಿ ತನಕ ರಸ್ತೆ ಅಗಲ ಕಿರಿದಾಗಿರುವುದರಿಂದ ಒಂದು ನಾಲ್ಕು ಚಕ್ರದ ವಾಹನ ಸಂಚರಿಸುವಾಗಲೇ ಒಂದು ಬದಿಯ ಚಕ್ರ ಡಾಮರು ರಸ್ತೆಯಿಂದ ಕೆಳಗೆ ಇಳಿಯುತ್ತದೆ. ಚರಂಡಿ ಅಗೆದು 4-5 ದಿನಗಳಾದರೂ ಕೇಬಲ್ ಹಾಕದೆ ಇರುವುದರಿಂದ ಮತ್ತು ಚರಂಡಿ ಮುಚ್ಚದೇ ಇರುವುದರಿಂದ ದಿನವಿಡೀ ಸುರಿಯುತ್ತಿರುವ ಮಳೆಗೆ ರಸ್ತೆ ಕೆಸರುಗದ್ದೆಯಾಗಿ ಪರಿಣಮಿಸಿದೆ. ಒಂದು ವೇಳೆ ರಸ್ತೆಯಿಂದ ಕೆಳಗೆ ಇಳಿಸಿದರೆ ಒಂದು ವಾರದ ಹಿಂದೆಯಷ್ಟೆ ಚರಂಡಿ ಮಾಡಿ ಪೈಪ್ ಅಳವಡಿಸಿ ಮಣ್ಣುಹಾಕಿದ ಜಾಗ ಇನ್ನೊಂದು ಬದಿ. ಇವರ ಅವೈಜ್ಞಾನಿಕ ಕಾಮಗಾರಿ ಮತ್ತು ಬೇಜವಾಬ್ದಾರಿತನದ ಫಲವನ್ನು ಸಾರ್ವಜನಿಕರು ಅನುಭವಿಸುವಂತಾಗಿದೆ. ಈ ಮಧ್ಯೆ ಬಸ್ ಸಂಚರಿಸಲು ಅನಾನುಕೂಲವಾಗಿದ್ದು, ಮೇ. 21ರಂದು ಬಸ್ ಸಂಚಾರ ಸ್ಥಗಿತಗೊಂಡು ಪ್ರಯಾಣಿಕರು ಪರದಾಡುವಂತಾಗಿದೆ. ನಡೆದುಕೊಂಡು ಹೋಗುವರದ್ದು ಮತ್ತು ದ್ವಿಚಕ್ರ ವಾಹನದಲ್ಲಿ ಸಂಚರಿಸುವವರಿಗೆ ದೇವರೇ ಗತಿ. ಅಲ್ಲಲ್ಲಿ ದ್ವಿಚಕ್ರ ವಾಹನ ಜಾರಿಬಿದ್ದ ಘಟನೆ ನಡೆಯುತ್ತಿದೆ. ಮೇ. 21ರಂದು ರಾತ್ರಿ ಬೆಳ್ಳಾರೆಯಿಂದ ಚೊಕ್ಕಾಡಿ ಮಾರ್ಗವಾಗಿ ಬಂದ ದ್ವಿಚಕ್ರ ವಾಹನ ಮಣ್ಣಿನಲ್ಲಿ ಜಾರಿ ರಸ್ತೆಗೆ ಅಪ್ಪಳಿಸಿ ವಾಹನದಲ್ಲಿದ್ದವರಿಗೆ ಗಾಯವಾಗಿದೆ. ಇಲಾಖೆಯ ಈ ನಡೆಯನ್ನು ಯಾರೂ ಪ್ರಶ್ನಿಸುವವರಿಲ್ಲ ಎಂಬ ಕಾರಣವೋ? ಅಲ್ಲಾ ಈ ಭಾಗದ ಸಾರ್ವಜನಿಕರ ತಾಳ್ಮೆಯನ್ನು ಪರೀಕ್ಷಿಸುವುದೋ ಅರ್ಥವಾಗುತ್ತಿಲ್ಲ. ಈ ಮಳೆಗೆ ಚರಂಡಿ ಅಗೆದು ತಮಗೆ ಸಂಬಂಧವೆ ಇಲ್ಲ ಎಂಬಂತೆ ಬಿಟ್ಟು ಹೋಗಿರುವ ಇಲಾಖೆಯ ನಡೆಗೆ ಏನೆನ್ನಬೇಕೋ? ಈ ರಸ್ತೆಯಲ್ಲಿ ಸಂಚರಿಸುವವರು ಹಿಡಿಶಾಪ ಹಾಕುತ್ತಿದ್ದಾರೆ. ಇನ್ನಾದರೂ ಸಂಬಂಧಪಟ್ಟ ಗುತ್ತಿಗೆದಾರರು, ಇಲಾಖೆಯ ಅಧಿಕಾರಿಗಳು ಎಚ್ಚೆತ್ತುಕೊಂಡು ಸಾರ್ವಜನಿಕರಿಗಾಗುತ್ತಿರುವ ಸಮಸ್ಯೆಯನ್ನು ಅರಿತು ಕಾರ್ಯೋನ್ಮುಖವಾಗಲಿ.
ವರದಿ: ಈಶ್ವರ ವಾರಣಾಶಿ










