ಬೆಳ್ಳಾರೆಯ ಪೆರುವಾಜೆ ಕಾಲೇಜಿನ ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗದ ಪ್ರಥಮ ವರ್ಷದ ವಿದ್ಯಾರ್ಥಿಗಳ “ಬುಡಕಟ್ಟು ಅಧ್ಯಯನ ಶಿಬಿರ- 2025”

0

ಬೆಳ್ಳಾರೆಯ ಪೆರುವಾಜೆ ಡಾ. ಕೆ. ಶಿವರಾಮ ಕಾರಂತ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸ್ನಾತಕೋತ್ತರ ಸಮಾಜ ಕಾರ್ಯ(MSW) ವಿಭಾಗದ ವತಿಯಿಂದ ಪ್ರಥಮ ವರ್ಷದ ವಿದ್ಯಾರ್ಥಿಗಳಿಗಾಗಿ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಹಂಗಳ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಬರುವ ಮೇಲುಕಾಮನಹಳ್ಳಿ, ಮಗುವಿನಹಳ್ಳಿ ಮತ್ತು ಮಂಗಳ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಬರುವ ಗುಡ್ಡಕೇರಿ, ಆಡಿನಕಣಿವೆ, ಕಾಣಿಯನಪುರ ಕಾಲೋನಿಯಲ್ಲಿ ಮೇ 14 ರಿಂದ ಮೇ 18 ರವರೆಗೆ ಐದು ದಿನಗಳ “ಬುಡಕಟ್ಟು ಅಧ್ಯಯನ ಶಿಬಿರ-2025”ವನ್ನು ಆಯೋಜಿಸಲಾಗಿತ್ತು. ಅರಣ್ಯ ಸಂಪತ್ತಿನ ಮೇಲೆ ಅವಲಂಬಿತವಾಗಿ ಜೀವನ ಸಾಗಿಸುತ್ತಿರುವ ಜೇನುಕುರುಬ, ಕಾಡುಕುರುಬ/ಬೆಟ್ಟಕುರುಬ ಮತ್ತು ಸೋಲಿಗ ಸಮುದಾಯದವರ ಸಾಮಾಜಿಕ, ಆರ್ಥಿಕ, ಹಾಗೂ ಶೈಕ್ಷಣಿಕ ಜೀವನದ ಕುರಿತು ಅಧ್ಯಯನ ಈ ಶಿಬಿರದ ಮುಖ್ಯ ಉದ್ದೇಶವಾಗಿತ್ತು. ಶಿಬಿರಾರ್ಥಿಗಳು ಈ ಸಮುದಾಯಗಳ ಜನರ ಜೀವನ ಶೈಲಿ, ಆಹಾರ ಪದ್ಧತಿ, ಆರೋಗ್ಯದ ಮಟ್ಟ, ಕುಲಕಸುಬು, ಸಂಸ್ಕೃತಿ, ಆಚಾರ ವಿಚಾರ ಮತ್ತು ಅವರುಗಳು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಂಡರು.


ಪ್ರತಿಯೊಂದು ದಿನವನ್ನು ನಿಗದಿತ ವಿಷಯಗಳ ಮೇಲೆ ಕೇಂದ್ರೀಕರಿಸಲಾಗಿದ್ದು ಪ್ರತಿಯೊಂದು ದಿನದ ಕಾರ್ಯಕ್ರಮಗಳು ವಿಶೇಷವಾಗಿ ಈ ಕೆಳಗಿನಂತೆ ನಡೆಯಿತು. ಮೊದಲ ದಿನ ಹಂಗಳ ಗ್ರಾಮ ಪಂಚಾಯತ್ ಭೇಟಿ, ಸಮುದಾಯ ಆಧಾರಿತ ಸಂಸ್ಥೆಗಳ ಭೇಟಿ ಮತ್ತು ಮೇಲುಕಮಾನಹಳ್ಳಿ, ಮಗುವಿನಹಳ್ಳಿಯ ಕಾಡುಕುರುಬ ಹಾಗೂ ಸೋಲಿಗ ಸಮುದಾಯದ ಜನರೊಂದಿಗೆ ಸಂವಾದ ನಡೆಸಲಾಯಿತು. ಎರಡನೇ ದಿನ ಗುಡ್ಡಕೇರಿ (ಬೆಟ್ಟಕುರುಬ/ಕಾಡುಕುರುಬ), ಆಡಿನಕಣಿವೆ (ಜೇನುಕುರುಬ), ಕಾಣಿಯನಪುರ ಕಾಲೋನಿಗೆ(ಸೋಲಿಗ) ಭೇಟಿ ನೀಡಿಲಾಯಿತು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಬುಡಕಟ್ಟು ಸಮುದಾಯದ ಜಾನಪದ ನೃತ್ಯ ಮತ್ತು ಹಾಡುಗಳನ್ನು ಕಲಿಸಿ ಕೊಡುವ ಮೂಲಕ ಅವರ ಸಾಂಸ್ಕೃತಿಕ ವೈವಿಧ್ಯತೆಯನ್ನು ಪರಿಚಯ ಮಾಡಿ ಕೊಡುವ ಪ್ರಯತ್ನ ನಡೆಸಲಾಯಿತು. ಮೂರನೇ ದಿನ ಸಾಮಾಜಿಕ ಪಿಡುಗುಗಳಲ್ಲಿ ಒಂದಾದ ಮದ್ಯ ವ್ಯಸನದ ಬಗ್ಗೆ ಮೇಲುಕಮಾನಹಳ್ಳಿಯ ಜೇನುಕುರುಬ ಸಮುದಾಯದವರಿಗೆ ಅರಿವು ಮೂಡಿಸುವ ಕಾರ್ಯ ನಡೆಯಿತು. ನಂತರ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಪರಿಸರ ಸಂರಕ್ಷಣೆಯ ಕುರಿತು ಜಾಗೃತಿ ಜಾಥಾ ಏರ್ಪಡಿಸಲಾಯಿತು. ಜೊತೆಗೆ ಹಾಗದಳ್ಳ ಗ್ರಾಮದ ಸೋಲಿಗ ಮತ್ತು ಜೇನುಕುರುಬರ ಸಮುದಾಯ ಭೇಟಿ ನಡೆಸಲಾಯಿತು. ನಾಲ್ಕನೇ ದಿನ ಹಂಗಳ ಗ್ರಾಮದಲ್ಲಿ ಬೀದಿನಾಟಕ ಮತ್ತು ಊರಿನ ಮಕ್ಕಳಿಗೆ ಮನರಂಜನಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಯಿತು ಮತ್ತು ಶಿಬಿರಾರ್ಥಿಗಳಿಂದ ಮೊರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆಯಲ್ಲಿ ಶ್ರಮದಾನ ಕಾರ್ಯಕ್ರಮ ನಡೆಯಿತು. ಐದನೇ ದಿನ ಗ್ರಾಮೀಣ ಸಹಭಾಗಿತ್ವ ಕಾರ್ಯಕ್ರಮ (PRA), ಋತುಮಾನ ಬೆಳೆ ಸಮೀಕ್ಷೆ, ಮಂಗಳ ಗ್ರಾಮದಲ್ಲಿ ಬೀದಿನಾಟಕವನ್ನು ಆಯೋಜಿಸಲಾಗಿತ್ತು.


ಪೆರುವಾಜೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಬಾಲಸುಬ್ರಮಣ್ಯ ಪಿ. ಯಸ್. ಇವರ ಮಾರ್ಗದರ್ಶನದಲ್ಲಿ ನಡೆದ ಈ ಐದು ದಿನಗಳ ಅಧ್ಯಯನ ಶಿಬಿರದಲ್ಲಿ ವಿದ್ಯಾರ್ಥಿಗಳು ಬುಡಕಟ್ಟು ಜನರ ಜೀವನದ ಕುರಿತು ಪ್ರತ್ಯಕ್ಷ ಅನುಭವವನ್ನು ಪಡೆದುಕೊಂಡರು. ಹಂಗಳ ಮತ್ತು ಮಂಗಳ ಗ್ರಾಮ ಪಂಚಾಯತುಗಳ ಸಿಬ್ಬಂದಿ ಹಾಗೂ ಸರ್ವ ಸದಸ್ಯರು, ಚಾಮರಾಜನಗರ ಜಿಲ್ಲಾ ಬುಡಕಟ್ಟು ಕಲ್ಯಾಣ ಇಲಾಖಾ ಅಧಿಕಾರಿ ಮತ್ತು ಸಿಬ್ಬಂದಿ ವರ್ಗ, ಮೇಲುಕಾಮನಹಳ್ಳಿಯ ಮೊರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆಯ ಪ್ರಾಂಶುಪಾಲರು ಮತ್ತು ಸಿಬ್ಬಂದಿಗಳು ಈ ಶಿಬಿರದ ಆಯೋಜನೆಯಲ್ಲಿ ಕಾಲೇಜಿನ ಜೊತೆ ಕೈ ಜೋಡಿಸಿದ್ದರು. ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗದ ಸಂಯೋಜಕರಾದ ಗೋವಿಂದರಾಜ್ ಕೆ. ಓ. ಹಾಗೂ ಉಪನ್ಯಾಸಕರಾದ ಶ್ರೀಮತಿ ಸ್ವಪ್ನ ಡಿ. ಇವರು ಶಿಬಿರವನ್ನು ನಿರ್ವಹಿಸಿದರು.