ತೋಟಕ್ಕೆ ನುಗ್ಗಿ ಕೃಷಿ ಪುಡಿಗೈದ ಕಾಡಾನೆಗಳ ಹಿಂಡು
ಸುಳ್ಯದ ಗ್ರಾಮೀಣ ಭಾಗಗಳಲ್ಲಿ ಕೃಷಿಕರ ನಿದ್ದೆ ಗೆಡಿಸಿರುವ ಕಾಡಾನೆಗಳ ಹಿಂಡು ಇದೀಗ ಸುಳ್ಯ ನಗರಕ್ಕೂ ಲಗ್ಗೆ ಇಟ್ಟಿದೆ. ಸುಳ್ಯ ಸೂರ್ತಿಲದಲ್ಲಿ ಕೃಷಿಕರ ತೋಟಕ್ಕೆ ಬಂದ ನಾಲ್ಕು ಕಾಡಾನೆಗಳು ಕೃಷಿಕರ ತೋಟವನ್ನು ಪುಡಿಗಟ್ಟಿವೆ.
















ಮೇ.24ರಂದು ರಾತ್ರಿ ಸೂರ್ತಿಲದ ಪುರುಷೋತ್ತಮ, ಜಯರಾಮ ಪ್ರಭು, ಬಾಲಕೃಷ್ಣ ಶೆಟ್ಟಿ, ಶಶಿಧರ ಶೆಟ್ಟಿ , ಪುಂಡರೀಕ ಸೂರ್ತಿಲ, ಮಾಧವ ಪುಂದ್ರೂಕೋಡಿ ಅವರ ತೋಟ ಕ್ಕೆ ಕಾಡಾನೆಗಳು ನುಗ್ಗಿವೆ.
ಕೆಲ ದಿನಗಳ ಹಿಂದೆ ಉಬರಡ್ಕ ಗ್ರಾಮದಲ್ಲಿ ವಿವಿಧ ಏರಿಯಾಗಳ ಕೃಷಿ ತೋಟಕ್ಕೆ ಹೋಗಿದ್ದ ಈ ಕಾಡಾನೆಗಳ ಗುಂಪು ಬಳ್ಳಡ್ಕದಲ್ಲಿ ಸುಮಿತ್ರ ಇಂಜಿನಿಯರ್ ರ ತೋಟಕ್ಕೆ ಹೋಗಿ ಕೃಷಿ ಹಾಳುಗೆಡವಿದೆ. ಅಲ್ಲಿಂದ ಉಬರಡ್ಕ ರಸ್ತೆಯಲ್ಲಿ ಬಂದು ಸೂರ್ತಿಲ ರಸ್ತೆಯಾಗಿ ಕೃಷಿಕರ ತೋಟಕ್ಕೆ ನುಗ್ಗಿದೆ. ಬಾಳೆ, ಅಡಿಕೆ, ತೆಂಗು, ಕೊಕ್ಕೊ ಗಿಡಗಳನ್ನು ಹಾಳುಗೆಡವಿದೆ. ಸ್ಪಿಂಕ್ಲೆರ್ ಜೆಟ್ ಗಳನ್ನು ತುಂಡು ಮಾಡಿವೆ. ಈ ಕುರಿತು ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದೆ ಎಂದು ತಿಳಿದುಬಂದಿದೆ.

ಸುಳ್ಯ ತಾಲೂಕಿನಲ್ಲಿ ಮಂಡೆಕೋಲು, ಅಜ್ಜಾವರ, ಆಲೆಟ್ಟಿ, ಸಂಪಾಜೆ, ತೊಡಿಕಾನ ಸೇರಿದಂತೆ ಕಾಡಂಚಿನ ಗಡಿ ಪ್ರದೇಶದಲ್ಲಿ ಆನೆಗಳು ಕೃಷಿ ತೋಟಕ್ಕೆ ಬರುತ್ತಿದ್ದು ಕೃಷಿಗೆ ತೊಂದರೆಯಾಗುತ್ತಿದೆ. ಕೆಲವು ಕಡೆಗಳಲ್ಲಿ ಆನೆ ಕಂದಕ, ಸೋಲಾರ್ ಬೇಲಿ ಇತ್ಯಾದಿಗಳನ್ನು ಮಾಡಲಾಗಿದೆಯಾದರೂ ಶಾಶ್ವತವಾಗಿ ಆನೆ ಬಾರದಂತೆ ಮಾಡುವಂತ ಕ್ರಮ ಆಗಬೇಕಾಗಿದೆ.










