ಬ್ರಸೆಲ್ಸ್ ನಲ್ಲಿ ನಡೆದ ಯುರೋ ಮೆಡ್ ಲ್ಯಾಬ್-2025 ನಲ್ಲಿ ಲೆಫ್ಟಿನೆಂಟ್ ಕರ್ನಲ್ ಡಾ.ಕಾರ್ತಿಕ್ ಕಣಕ್ಕೂರು

0

ಬೆಲ್ಜಿಯಂನ ಬ್ರಸೆಲ್ಸ್ ನಲ್ಲಿ ಮೇ.18 ರಿಂದ 22 ರ ವರೆಗೆ ಅಂತರರಾಷ್ಟ್ರೀಯ ಕ್ಲಿನಿಕಲ್ ಕೆಮಿಸ್ಟ್ರಿ ಮತ್ತು ಲ್ಯಾಬೋರೇಟರಿ ಮೆಡಿಸಿನ್ ಫೆಡರೇಶನ್ (ಐ.ಎಫ್.ಸಿ.ಸಿ.) ಆಯೋಜಿಸಿದ್ದ ಲ್ಯಾಬೋರೇಟರಿ ವೈದ್ಯಕೀಯ ಕ್ಷೇತ್ರದ ಪ್ರಮುಖ ಜಾಗತಿಕ ಸಮಾರಂಭಗಳೊಂದಾದ ಐ.ಎಫ್.ಸಿ.ಸಿ. ಯುರೋ ಮೆಡ್ ಲ್ಯಾಬ್ -2025 ಸಮ್ಮೇಳನದಲ್ಲಿ ಸುಳ್ಯದ ವೈದ್ಯ , ಮಿಲಿಟರಿಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸಿ ಹಿಂತಿರುಗಿರುವ ಲೆಫ್ಟಿನೆಂಟ್ ಕರ್ನಲ್ ಡಾ.ಕಾರ್ತಿಕ್ ಕಣಕ್ಕೂರು ಭಾಗವಹಿಸಿದ್ದಾರೆ.


ಮೈಸೂರಿನ ಜೆಎಸ್ಎಸ್ ವೈದ್ಯಕೀಯ ಕಾಲೇಜಿನ ಬಯೋಕೆಮಿಸ್ಟ್ರಿ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಡಾ.ಕಾರ್ತಿಕ್ ಕಣಕ್ಕೂರುರವರು, ಭಾರತದಿಂದ ಕೇವಲ ಇಬ್ಬರು ಯುವ ವಿಜ್ಞಾನಿಗಳಿಗೆ ಮಾತ್ರ ಕೊಡಲಾಗುವ ಐ.ಎಫ್.ಸಿ.ಸಿ. ಟ್ರಾವೆಲ್ ಸ್ಕಾಲರ್ಷಿಪ್ ಗೆ ಆಯ್ಕೆಯಾಗಿ ಬ್ರಸೆಲ್ಸ್ ನಲ್ಲಿ ನಡೆದ ಐ.ಎಫ್.ಸಿ.ಸಿ. 4ನೇ ಯುವ ವಿಜ್ಞಾನಿಗಳ ಫೋರಂನಲ್ಲಿ ಪಾಲ್ಗೊಂಡು ತಮ್ಮ ಸಂಶೋಧನೆಯನ್ನು ಮಂಡಿಸಿ ಸ್ಕಾಲರ್ಷಿಪ್ ಸ್ವೀಕರಿಸಿದರು.

ಜೆಎಸ್ಎಸ್ ಗೆ ಪ್ರಥಮ ಸ್ಥಾನ ಇದೇ ಸಂದರ್ಭದಲ್ಲಿ ಪ್ರತಿವರ್ಷದಂತೆ ಐ.ಎಫ್.ಸಿ.ಸಿ ಆಯೋಜಿಸುವ ಗ್ಲೋಬಲ್ ಮೆಡ್ ಲ್ಯಾಬ್ ವೀಕ್-2025ನ ವೀಡಿಯೋ ಸ್ಪರ್ಧೆಯಲ್ಲಿ ಮೈಸೂರಿನ ಜೆಎಸ್ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ (ಜೆಎಸ್ಎಸ್ಎಹೆಚ್ಇಆರ್)/ಜೆಎಸ್ಎಸ್ ವೈದ್ಯಕೀಯ ಕಾಲೇಜಿನ ಬಯೋಕೆಮಿಸ್ಟ್ರಿ ವಿಭಾಗವು ಪ್ರಥಮ ಸ್ಥಾನ ಪಡೆದಿದೆ. ಈ ವರ್ಷದ ಸ್ಪರ್ಧೆಯ ವಿಷಯ “ಲ್ಯಾಬ್ ಜೀವ ಉಳಿಸುತ್ತದೆ” ಎಂಬುದಾಗಿದ್ದು, ಆರೋಗ್ಯ ಸೇವೆಯಲ್ಲಿ ಲ್ಯಾಬೋರೇಟರಿಗಳ ಪಾತ್ರವನ್ನು ಬೆಳಕಿಗೆ ತರುವ ಉದ್ದೇಶವನ್ನು ಹೊಂದಿತ್ತು. ವಿಶ್ವದ ವಿವಿಧ ಭಾಗಗಳಿಂದ ಒಟ್ಟು 27 ದೇಶಗಳು ಸ್ಪರ್ಧೆಗೆ ಭಾಗವಹಿಸಿ, ಭಾರತವನ್ನು ಪ್ರತಿನಿಧಿಸಿದ ಜೆಎಸ್ಎಸ್ ವೈದ್ಯಕೀಯ ಕಾಲೇಜು ಚಿತ್ರೀಕರಿಸಿದ ವೀಡಿಯೊ ಏಷ್ಯಾ-ಪೆಸಿಫಿಕ್ ಭಾಗದಲ್ಲಿ ಪ್ರಥಮ ಸ್ಥಾನಕ್ಕೆ ಪಾತ್ರವಾಯಿತು. ವೀಡಿಯೊ ತಯಾರಿಕೆಯಲ್ಲಿ ಪಾಲ್ಗೊಂಡ ವಿಜೇತ ತಂಡದ ಸದಸ್ಯರಾದ ಬಯೋಕೆಮಿಸ್ಟ್ರಿ ವಿಭಾಗದ ಡಾ. ಅಖಿಲ ಪ್ರಶಾಂತ್, ಡಾ. ಪ್ರಶಾಂತ್ ವಿಶ್ವನಾಥ್ ಹಾಗೂ ಡಾ.(ಲೆ.ಕರ್ನಲ್) ಕಾರ್ತಿಕ್ ಕಣಕ್ಕೂರು ಪ್ರಶಸ್ತಿ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಸುದ್ದಿಯೊಂದಿಗೆ ಮಾತನಾಡಿದ ಡಾ.ಕಾರ್ತಿಕ್ ಅವರು, ಈ ಸಾಧನೆಯನ್ನು ತಿಂಗಳ ಹಿಂದೆ ತೀರಿ ಹೋದ ತಮ್ಮ ತಂದೆಯವರಾದ ದಿ. ಜನಾರ್ದನ ಕಣಕ್ಕೂರು ಅವರ ಆತ್ಮಕ್ಕೆ ಸಮರ್ಪಿಸುವುದಾಗಿ ತಿಳಿಸಿದರು.