ದಿ. ಪದ್ಮನಾಭ ಗೌಡ ಪಾದೆಯವರಿಗೆ ನುಡಿ ನಮನ

0

ಪಂಜಕ್ಕೆ ಗೌರವ ತಂದುಕೊಟ್ಟ ವ್ಯಕ್ತಿತ್ವ : ಜಾಕೆ

ಇತ್ತೀಚೆಗೆ ಅಗಲಿದ ನಿವೃತ್ತ ಉಪನ್ಯಾಸಕ, ಜ್ಯೋತಿಷಿ ಪದ್ಮನಾಭ ಗೌಡ ಪಾದೆಯವರ ವೈಕುಂಠ ಸಮಾರಾಧನೆ ಮತ್ತು ನುಡಿ ನಮನ ಕಾರ್ಯಕ್ರಮವು ಪಂಜ ಸಹಕಾರಿ ಸಂಘದ ಉತ್ಕರ್ಷ ಸಭಾ ಭವನದಲ್ಲಿ ನಡೆಯಿತು.

ಹಿರಿಯ ಸಹಕಾರಿ ಧುರೀಣ ಜಾಕೆ ಮಾಧವ ಗೌಡರು ನುಡಿ ನಮನ ಸಲ್ಲಿಸಿ, ಪದ್ಮನಾಭ ಗೌಡರು ತನ್ನ ಜೀವಿತಾವಧಿಯ ಸಾಧನೆಯ ಮೂಲಕ ಮನೆ ತನಕ್ಕೆ, ಕುಟುಂಬಕ್ಕೆ ಗೌರವ ತರುವ ಕಾರ್ಯ ಮಾಡಿದ್ದಾರೆ. ಊರಿಗೂ ಗೌರವ ತಂದುಕೊಟ್ಟ ವ್ಯಕ್ತಿತ್ವ ಅವರದು ಎಂದರು.

ಸುಳ್ಯ ಸುದ್ದಿ ಚಾನೆಲ್ ಮುಖ್ಯಸ್ಥ ದುರ್ಗಾಕುಮಾರ್ ನಾಯರ್ ಕೆರೆ ಮಾತನಾಡಿ, ಗುರುಗಳಾಗಿ ಅಸಂಖ್ಯ ವಿದ್ಯಾರ್ಥಿಗಳಿಗೆ ಶಿಸ್ತಿನ ಪಾಠ ಹೇಳುತ್ತಾ ತನ್ನ ವೃತ್ತಿ ಬದುಕಿಗೆ ಸಂಪೂರ್ಣ ನ್ಯಾಯ ಸಲ್ಲಿಸಿದ ವ್ಯಕ್ತಿತ್ವ ಪದ್ಮನಾಭ ಪಾದೆಯವರದು. ಪಂಜದ ಊರಿಗೇ ಶಿಸ್ತು ಬೋಧಿಸಿದ ಮಹಾನುಭಾವರು ಎಂದರು.

ಪದ್ಮನಾಭ ಪಾದೆಯವರ ಅಳಿಯ, ನಿವೃತ್ತ ನ್ಯಾಯಾಧೀಶ ಶಿವರಾಮ ಕೇವಳ ಮಾತನಾಡಿ, ಸದಾ ಹೊಸತನದ ಚಿಂತನೆಯ ಮೂಲಕ ಮಾವ ನಮಗೆಲ್ಲ ಮಾರ್ಗರ್ಶಕರಾಗಿದ್ದರು ಎಂದರು.

ಗುರುಪ್ರಸಾದ್ ತೋಟ ಕಾರ್ಯಕ್ರಮ ನಿರೂಪಿಸಿ ನುಡಿನಮನ ಸಲ್ಲಿಸಿದರು.

ಪದ್ಮನಾಭ ಪಾದೆಯವರ ಭಾವಚಿತ್ರಕ್ಕೆ ದೀಪ ಬೆಳಗಿ ಮೌನ ಪಾರ್ಥನೆ ಸಲ್ಲಿಸಲಾಯಿತು.

ಪದ್ಮನಾಭ ಪಾದೆಯವರ ಪುತ್ರ ಗಿರೀಶ್ ಪಾದೆ, ಸತೀಶ್ ಪಾದೆ, ಪುತ್ರಿಯರಾದ ಶ್ರೀಮತಿ ನಂದಾ, ರೇಖಾ, ಸಹೋದರ, ಸಹೋದರಿಯರು, ಸೊಸೆ, ಕುಟುಂಬಸ್ಥರು ಉಪಸ್ಥಿತರಿದ್ದರು.