ಖಾಸಗಿ ಶಾಲೆಯವರು ಮಕ್ಕಳ ಕುರಿತು ತೆಗೆದುಕೊಳ್ಳುವ ಕಾಳಜಿ ಸರಕಾರಿ ಶಾಲೆಯವರೂ ತೆಗೆದುಕೊಳ್ಳಬೇಕು : ಬಿ.ಇ.ಒ. ಗೆ ತಾ.ಪಂ. ಆಡಳಿತಾಧಿಕಾರಿ ಸೂಚನೆ
ಹೋಟೆಲ್ ಗಳಲ್ಲಿ ಗುಣಮಟ್ಟದ ಆಹಾರ ಸಿಗಬೇಕು : ನಗರ ಸಭೆ, ಆರೋಗ್ಯ ಇಲಾಖೆ ಪರಿಶೀಲಿಸಿ
ಸುಳ್ಯ ತಾಲೂಕು ಪಂಚಾಯತ್ ಸಾಮಾನ್ಯ ಸಭೆಯು ತಾಲೂಕು ಪಂಚಾಯತ್ ಆಡಳಿತಾಧಿಕಾರಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಜಯಲಕ್ಷ್ಮಿ ಯವರ ಅಧ್ಯಕ್ಷತೆಯಲ್ಲಿ ಜೂ.29ರಂದು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.
ಮಳೆಗಾಲದಲ್ಲಿ ಮಕ್ಕಳ ಬಗ್ಗೆ ಕಾಳಜಿ ಇರಲಿ
ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಆಡಳಿತಾಧಿಕಾರಿ ಜಯಲಕ್ಷ್ಮಿ ಯವರು, ಮಳೆಗಾಲವಾಗಿರುವುದಿಂದ ವಿಪರೀತ ಮಳೆ ಬಂದು ರಜೆ ನೀಡಬೇಕಾದ ಸಂದರ್ಭದಲ್ಲಿ ಮಕ್ಕಳು ಶಾಲೆಯಲ್ಲಿದ್ದರೆ ಆ ಎಲ್ಲ ಮಕ್ಕಳ ಪೋಷಕರಿಗೆ ಖುದ್ದಾಗಿ ಶಿಕ್ಷಕರು ಕರೆ ಮಾಡಿ ರಜೆ ನೀಡುವ ವಿಷಯ ತಿಳಿಸಬೇಕು. ಮಕ್ಕಳನ್ನು ಹಾಗೇ ಬಿಡಬಾರದು. ಎಲ್ಲ ಮಕ್ಕಳ ಪೋಷಕರ ದೂರವಾಣಿ ಸಂಖ್ಯೆಯನ್ನು ಶಿಕ್ಷಕರು ಇಟ್ಟುಕೊಂಡಿರಬೇಕು. ಈ ಕುರಿತು ಎಲ್ಲ ಶಾಲೆಗಳಿಗೆ ಶಿಕ್ಷಣಾಧಿಕಾರಿಗಳು ಸೂಚನೆ ನೀಡಬೇಕೆಂದು ಅವರು ಹೇಳಿದರು. ಖಾಸಗಿ ಶಾಲೆಯವರು ಯಾವ ರೀತಿಯಲ್ಲಿ ಮಕ್ಕಳ ಕುರಿತು ರೆಸ್ಪಾನ್ಸ್ ತೆಗೆದುಕೊಳ್ಳುತ್ತಾರೋ ಅದೇ ಕಾಳಜಿ ನಮ್ಮ ಶಿಕ್ಷಕರು ತೆಗೆದುಕೊಳ್ಳಬೇಕು. ಈ ನಿಟ್ಟಿನಲ್ಲಿ ನಿರ್ದೇಶನ ನೀಡಬೇಕು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಎಂದು ಹೇಳಿದರು.
ಮಕ್ಕಳನ್ನು ಸ್ಥಳಾಂತರಿಸಿ
ಪಾಲಾನ ವರದಿಯ ಮೇಲಿನ ಚರ್ಚೆಯಂತೆ ತಾಲೂಕಿನ 15 ಶಾಲೆಗಳಲ್ಲಿ ಶಿಥಿಲಗೊಂಡಿರುವ ಹಳೆ ಕಟ್ಟಡ ಕೆಡವಲು ಅನುಮತಿ ಪಡೆಯುವ ವಿಚಾರ ಬಂದಾಗ, ಮಾತನಾಡಿದ ಆಡಳಿತಾಧಿಕಾರಿಯವರು ಮಕ್ಕಳು ಅದೇ ಕಟ್ಟಡದಲ್ಲಿದ್ದ ಸಂದರ್ಭ ಇನ್ನೊಂದು ಬದಿ ಕೆಲಸ ಮಾಡುವುದೇ ಬೇಡ. ಕಟ್ಟಡ ಕೆಡವುತ್ತೀರಿ ಎಂದಾದರೆ ಮಕ್ಕಳನ್ನು ಬೇರೆ ಕಟ್ಟಡಕ್ಕೆ ಸ್ಥಳಾಂತರ ಮಾಡಬೇಕು. ಮತ್ತು ಆ ಕಟ್ಟಡದಿಂದ ಸುಮಾರು 20 ಮೀಟರ್ನಷ್ಟು ದೂರ ಪ್ರವೇಶ ನಿಷೇಧಿಸಿದ ಬಳಿಕವಷ್ಟೆ ಕಟ್ಟಡ ಕೆಡವಿ. ಮುನ್ನೆಚ್ಚರಿಕೆ ತೆಗೆದುಕೊಳ್ಳದೇ ಅವಘಡ ಸಂಭವಿಸಿದರೆ ಯಾರು ಹೊಣೆ ಎಂದು ಅವರು ಪ್ರಶ್ನಿಸಿದರು. ಈ ಕುರಿತು ಆ 15 ಶಾಲೆಗಳಿಗೂ ಮಾಹಿತಿ ನೀಡುವಂತೆ ಅವರು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡಿದರು.

ಫಾಲೋಅಪ್ ಮಾಡಿ
ತೀರಾ ಶಿಥಿಲಾವಸ್ಥೆಯಲ್ಲಿರುವ ಬೆಳ್ಳಾರೆ ಗ್ರಾಮದ ಪಾಟಾಜೆ ಅಂಗನವಾಡಿ ಹಾಗೂ ಗುತ್ತಿಗಾರಿನ ಮೊಗ್ರ ಅಂಗನವಾಡಿ ಕೇಂದ್ರಕ್ಕೆ ನರೇಗಾ ಒಗ್ಗೂಡಿಸುವಿಕೆಯಲ್ಲಿ ನೂತನ ಕಟ್ಟಡ ಮಂಜೂರು ಮಾಡುವಂತೆ ಜಿ.ಪಂ. ಕಾರ್ಯನಿರ್ವಹಣಾಧಿಕಾರಿಗಳಿಗೆ ಬರೆದುಕೋಡಿರುವ ಕುರಿತು ಸಿಡಿಪಿಒ ಹೇಳಿದಾಗ, “ಈಬಗ್ಗೆ ಫಾಲೋ ಅಪ್ ಮಾಡುವಂತೆ” ಆಡಳಿತಾಧಿಕಾರಿ ಜಯಲಕ್ಷ್ಮಿ ಯವರು ಸೂಚನೆ ನೀಡಿದರು.
ದುಗಲಡ್ಕದಲ್ಲಿ ಘನತ್ಯಾಜ್ಯಕ್ಕೆ ಜಮೀನು
ಈ ಹಿಂದಿನ ಸಭೆಯಲ್ಲಿ ಪ್ರಸ್ತಾಪವಾದಂತೆ ಈ ಬಾರಿಯ ಸಾಮಾನ್ಯ ಸಭೆಯಲ್ಲಿ ದುಗಲಡ್ಕದಲ್ಲಿ ಘನತ್ಯಾಜ್ಯಕ್ಕೆ ಜಮೀನು ಕಾಯ್ದಿರಿಸುವ ಕುರಿತು ಸಭೆಯಲ್ಲಿ ಪ್ರಸ್ತಾಪವಾಯಿತು.















ಅಲ್ಲಿ ಅರಣ್ಯ ಸಮಸ್ಯೆ ಇರುವುದರಿಂದ ನಿರಾಕ್ಷೇಪನಾ ಪತ್ರಕ್ಕಾಗಿ ಮಂಗಳೂರು ಉಪ ಅರಣ್ಯ ಸಂರಕ್ಷಣಾಧಿಕಾರಿಯವರಿಗೆ ಬರೆದುಕೊಂಡಿರುವ ಕುರಿತು ರೇಂಜರ್ ಹೇಳಿದಾಗ, ನ.ಪಂ. ಮುಖ್ಯಾಧಿಕಾರಿಗಳೇ ಈ ಕುರಿತು ನನಗೆ ನೆನಪಿಸಬೇಕು. ಉಪ ಅರಣ್ಯ ಸಂರಕ್ಷಣಾಧಿಕಾರಿಯವರಲ್ಲಿ ಮಾತನಾಡುತ್ತೇನೆ. ಮುಂದಿನ ಭವಿಷ್ಯಕ್ಕಾದರೂ ಸುಳ್ಯದಲ್ಲಿ ಘನತ್ಯಾಜ್ಯಕ್ಕೆ ಜಮೀನು ಬೇಕು” ಎಂದು ಅವರು ಹೇಳಿದರು.
ಗುಣಮಟ್ಟದ ಆಹಾರ ಸಿಗಬೇಕು
ಹೋಟೆಲ್ ಗಳಲ್ಲಿ ಗುಣಮಟ್ಟದ ಆಹಾರ ಸಿಗಬೇಕು. ಶುದ್ದ ನೀರು, ಸ್ವಚ್ಚತೆ ಇರಬೇಕು. ನಗರ ಸೇರಿದಂತೆ ಗ್ರಾಮಾಂತರ ಭಾಗದ ಎಲ್ಲ ಹೋಟೆಲ್ ಗಳಿಗೆ ನಗರದಲ್ಲಿ ಮುಖ್ಯಾಧಿಕಾರಿಗಳ ತಂಡ ಹಾಗೂ ಗ್ರಾಮೀಣ ಭಾಗದಲ್ಲಿ ಪಂಚಾಯತ್ ನವರು ಹೋಟೆಲ್ ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವಂತೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಆರೋಗ್ಯ ಇಲಾಖೆಯ ಸಹಕಾರವನ್ನು ಪಡೆದುಕೊಳ್ಳಿ ಎಂದು ಹೇಳಿದರು.
ಟೀಮ್ ಮಾಡಿ
ಪ್ರಾಕೃತಿಕ ವಿಕೋಪ ಸಂಭವಿಸದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು. ಫಾಲ್ಸ್ ಗಳು ತುಂಬಿ ಹರಿಯುತ್ತಿದ್ದು ಪ್ರೇಕ್ಷಕರುಹೋಗದಂತೆ ಎಲ್ಲಕಡೆ ಫಲಕ ಅಳವಡಿಸಿ. ಕೆರೆ, ತೋಡುಗಳಿಗೂ ಇಳಿಯದಂತೆ ಮುನ್ನೆಚ್ಚರಿಕೆ ವಹಿಸಿ. ಎಲ್ಯಾದರೂ ಅವಘಡ ಸಂಭವಿಸಿದರೆ ಅದಕ್ಕಾಗಿ ರಕ್ಷಣಾ ತಂಡ ಮಾಡಿಕೊಳ್ಳಿ ಎಂದು ಸೂಚನೆ ನೀಡಿದರು.
ಸಮಸ್ಯೆ ಹೇಳದೇ ಸುಮ್ಮನೇ ಕುಳಿತ ಅಧಿಕಾರಿಗಳು
ತಾಲೂಕು ಪಂಚಾಯತ್ ಆಡಳಿತಾಧಿಕಾರಿಯಾಗಿರುವ ಯೋಜನಾ ನಿರ್ದೇಶಕಿ ಜಯಲಕ್ಷ್ಮಿ ಯವರು ಸಭೆಯ ಪಾಲನಾ ವರದಿ ಚರ್ಚೆಯ ಬಳಿಕ ಬಳಿಕ ಎರಡು ಮೂರು ಬಾರಿ ಸಭೆಯಲ್ಲಿದ್ದ ತಾಲೂಕು ಮಟ್ಟದ ಅಧಿಕಾರಿಯವರಲ್ಲಿ ಸಮಸ್ಯೆಗಳಿದ್ದರೆ ಹೇಳಿ, ಮಾತನಾಡೋಣ ಎಂದು ಕೇಳಿಕೊಂಡರು. ಆಗ ಪಶು ಇಲಾಖೆಯ ಆಡಳಿತಾಧಿಕಾರಿ ಡಾ.ನಿತಿನ್ ಪ್ರಭುಗಳು ಹಾಗೂ ತಾಲೂಕು ಆರೋಗ್ಯ ಅಧಿಕಾರಿ ಡಾ.ತ್ರಿಮೂರ್ತಿ ಯವರು ಎದ್ದುನಿಂತು ತಮ್ಮ ವ್ಯಾಪ್ತಿಯ ವಿಷಯಗಳ ಕುರಿತು ಹೇಳಿಕೊಂಡರು.
ಉಳಿದ ಯಾವೊಬ್ಬ ಅಧಿಕಾರಿಯೂ ಬಾಯಿ ಬಿಡಲಿಲ್ಲ. ನಗರದಲ್ಲಿ ರಸ್ತೆ ಅವ್ಯವಸ್ಥೆ, ಚರಂಡಿ ಮುಚ್ಚಿರುವುದು, ವಿದ್ಯುತ್ ಸಮಸ್ಯೆ, ಬಹುಗ್ರಾಮ ಕುಡಿಯುವ ನೀರಿನ ಕಾಮಗಾರಿ ವಿಳಂಬ, ನಗರದ ಅಮೃತ್ ಯೋಜನೆ ಕುರಿತು, ಗಾಳಿ ಮಳೆಯಿಂದ ತೋಟಗಾರಿಕಾ, ಕೃಷಿ ಬೆಳೆ ಹಾನಿ, ಅಲ್ಲಲ್ಲಿ ಅವಘಡ ಸಂಭವಿಸಿರುವುದು, ಗ್ರಾಮಾಂತರಕ್ಕೆ ಬಸ್ ಸಮಸ್ಯೆ ಇಷ್ಟು ವಿಚಾರಗಳಿದ್ದರೂ ಸಭೆಯಲ್ಲಿ ಯಾವ ಅಧಿಕಾರಿಯೂ ಆಡಳಿತಾಧಿಕಾರಿ ಸಮಸ್ಯೆ ಕೇಳಿದರೂ ಹೇಳದೇ ಸುಮ್ಮನಿದ್ದುದು ಆಶ್ಚರ್ಯವುಂಟು ಮಾಡಿತು.
ಸಭೆ ಮುಗಿದ ಬಳಿಕ ಪತ್ರಕರ್ತರು ಆಡಳಿತಾಧಿಕಾರಿ ಬಳಿ ನಗರದ ಸಮಸ್ಯೆ ಕುರಿತು ಮಾತನಾಡಿದರು.










