ಸುಳ್ಯದ ಇಎಸ್‌ಐ ಆಸ್ಪತ್ರೆ ಲೆಕ್ಕಕ್ಕುಂಟು ಆಟಕ್ಕಿಲ್ಲದಂತಾಗಿದೆಯೇ?

0

ಎರಡೂವರೆ ತಿಂಗಳಿಂದ ಇಲ್ಲಿ ಔಷಧಿಗಳೇ ಸಿಗುತ್ತಿಲ್ಲ….

ಸುಳ್ಯದ ಇಎಸ್‌ಐ ಆಸ್ಪತ್ರೆ ಲೆಕ್ಕಕ್ಕುಂಟು..ಆದರೆ ಆಟಕ್ಕಿಲ್ಲದಂತಾಗಿದೆ. ಸುಮಾರು ಎರಡೂವರೆ ತಿಂಗಳಿನಿಂದ ಈ ಆಸ್ಪತ್ರೆಯಲ್ಲಿ ಕಾರ್ಮಿಕರಿಗೆ ಔಷಧಿಗಳು ಸಿಗುತ್ತಿಲ್ಲ.

ಕಾರ್ಮಿಕರ ಹಣದಿಂದಲೇ, ಕಾರ್ಮಿಕರಿಗಾಗಿಯೇ ಕಾರ್ಮಿಕರ ರಾಜ್ಯ ವಿಮಾ ಆಸ್ಪತ್ರೆ(ಇಎಸ್‌ಐ)ಇರುವುದು. ಪ್ರಾವಿಡೆಂಟ್ ಫಂಡ್ ಕಟ್ಟುವ ಕಾರ್ಮಿಕರು ಇದರ ಫಲಾನುಭವಿಗಳು. ಈಗ ಮಳೆಗಾಲ. ಜ್ವರ, ಶೀತ ಅಥವಾ ಇನ್ನಾವುದೇ ಖಾಯಿಲೆಗಳು ಹೆಚ್ಚಾಗಿ ಬರುವ ಹೊತ್ತು ಇದು. ಆದರೆ ನಮ್ಮ ಸುಳ್ಯದ ಶ್ರೀರಾಮಪೇಟೆಯ ಕುರುಂಜಿಕಾರ್ ಹೆಲ್ತ್ ಕಾಂಪ್ಲೆಕ್ಸ್ ನಲ್ಲಿರುವ ಇ.ಎಸ್.ಐ. ಆಸ್ಪತ್ರೆಯಲ್ಲಿ ಮೆಡಿಸಿನ್ ಸಪ್ಲೈ ಇಲ್ಲ. ಇದರಿಂದ ಕಾರ್ಮಿಕರು ತಮ್ಮ ಸಂಬಳದಿಂದ ಹಣ ಕಟ್ ಆಗುತ್ತಿದ್ದರೂ ಅವರಿಗೆ ಬೇಕಾದ ಸೌಲಭ್ಯ ಪಡೆಯಲಾಗುತ್ತಿಲ್ಲ.

ಮಳೆಗಾಲದ ಆರಂಭದಲ್ಲಿ ಜ್ವರ, ಶೀತ, ತಲೆನೋವು ಸರ್ವೇಸಾಮಾನ್ಯವಾಗಿದೆ. ಈ ಸಮಯದಲ್ಲಿ ಔಷಧಿಗಳು ಸಿಗದಿದ್ದರೆ ಮತ್ಯಾವಾಗ ದೊರೆಯುವುದು? ಇಲ್ಲಿ ಔಷಧಿಗೆಂದು ಬಂದ ಕಾರ್ಮಿಕರು ಔಷಧಿ ಸಿಗದೆ ನಿರಾಶರಾಗಿ ವಾಪಸ್ ಹಿಂತಿರುಗುವ ಪರಿಸ್ಥಿತಿ ಎದುರಾಗಿದೆ.

ಈ ಬಗ್ಗೆ ಇಎಸ್‌ಐ ಡಾಕ್ಟರ್‌ರನ್ನು ವಿಚಾರಿಸಿದಾಗ, ” ನಮಗೆ ಎರಡೂವರೆ ತಿಂಗಳಿನಿಂದ ಔಷಧಿ ಸಪ್ಲೈ ಆಗಿಲ್ಲ. ಔಷಧಿ ಬಂದರೆ ನಾವು ಕೊಡುತ್ತೇವೆ. ದಿನಾ ಪ್ರಧಾನ ಕಚೇರಿಗೆ ಫೋನ್ ಮುಖಾಂತರ ಹಾಗೂ ಇಮೇಲ್ ಮಾಡಿ ತಿಳಿಸುತ್ತಿದ್ದೇವೆ. ಅವರು ಕಳುಹಿಸುತ್ತೇವೆ ಎಂದು ಹೇಳ್ತಾರೆ. ಆದರೆ ಇದುವರೆಗೆ ಕಳುಹಿಸಿಲ್ಲ. ನಾವೇನು ಮಾಡುವುದು?”  ಎಂದು ತಿಳಿಸಿದರು.