ತೊಡಿಕಾನ – ಕುಂಟುಕಾಡು ರಸ್ತೆಯ ಮಧ್ಯೆಯೇ ಹರಿಯುವ ಮಳೆನೀರು

0

ರಸ್ತೆ ಮಧ್ಯೆ ನಿರ್ಮಾಣವಾಗಿದೆ ಕಣಿವೆ – ವಾಹನ ಸಂಚಾರ ದುಸ್ತರ

ತೊಡಿಕಾನ ಗ್ರಾಮದ ಕುಂಟುಕಾಡು ರಸ್ತೆಯಲ್ಲಿ ರಸ್ತೆ ಮಧ್ಯೆ ನಿರ್ಮಾಣವಾಗಿರುವ ಕಣಿವೆಯಿಂದಾಗಿ ವಾಹನ ಸಂಚಾರ ದುಸ್ತರವಾಗಿದೆ.
ತೊಡಿಕಾನ ಅಂಚೆ ಕಚೇರಿಯಿಂದ ಕುಂಟುಕಾಡು ಕಡೆಗೆ ಹೋಗುವ ರಸ್ತೆಯಲ್ಲಿ ಸುಮಾರು 75 ಮೀಟರ್ ಮುಂದೆ ಹೋಗುವಾಗ ಸುಮಾರು ಆರು ಮೀಟರ್ ಉದ್ದದ ಕಣಿವೆ ಕಣ್ಣೆದುರು ಸಿಗುತ್ತದೆ. ರಸ್ತೆ ಪಕ್ಕದ ಬರೆಯ ಮಣ್ಣು ಜರಿದು ಬಿದ್ದಿರುವುದರಿಂದ ಚರಂಡಿ ಮುಚ್ಚಲ್ಪಟ್ಟು ಮಳೆ ನೀರು ರಸ್ತೆಯಲ್ಲಿ ಹರಿಯತೊಡಗಿ ಈ ಕಣಿವೆ ನಿರ್ಮಾಣವಾಗಿದ್ದು ಜೀಪು, ಕಾರು, ಲಾರಿಗಳು ಸಾಗುವಾಗ ಪೂರ್ಣವಾಗಿ ವಾಲಿಕೊಳ್ಳುತ್ತವೆ. ಇದರಿಂದ ವಾಹನಗಳು ಸರ್ಕಸ್ ಮಾಡಿದಂತೆ ಸಾಗಬೇಕಾಗುತ್ತದೆ.
ಈ ಕಣಿವೆಗೆ ಊರವರು ಹಿಂದೆ ಮಣ್ಣು ತುಂಬಿಸಿ ತಾತ್ಕಾಲಿಕವಾಗಿ ಸರಿಪಡಿಸುತ್ತಿದ್ದರು. ಆದರೆ ಮಳೆಗಾಲದಲ್ಲಿ ಮಣ್ಣು ಕೊಚ್ಚಿಹೋಗುವುದರಿಂದ ಮತ್ತೆ ಕಣಿ ನಿರ್ಮಾಣವಾಗುತ್ತಿತ್ತು. ಅದಕ್ಕಾಗಿ ಈಗ ಊರವರು ಮಣ್ಣು ತುಂಬಿಸುವುದನ್ನು ಬಿಟ್ಟಿದ್ದಾರೆ. ಅರಂತೋಡು ಗ್ರಾಮ ಪಂಚಾಯತ್ ನವರು ರಸ್ತೆಯ ಎರಡೂ ಬದಿ ಚರಂಡಿ ಸರಿಯಾಗಿ ನಿರ್ಮಿಸಿ, ಆ ಕಣಿಯನ್ನು ಕಲ್ಲು ಮಣ್ಣು ಹಾಕಿ ಮುಚ್ಚಿದರೆ ಸಮಸ್ಯೆ ಪರಿಹಾರವಾಗಬಹುದೆಂದು ಊರವರು ಹೇಳುತ್ತಾರೆ.

ಹಿಂದೆ ನಾನು ಆ ಕಣಿಯನ್ನು ಮಣ್ಣು ಹಾಕಿ ಮುಚ್ಚುತ್ತಿದ್ದೆ. ಮೊನ್ನೆ ಒಂದು ದಿನ ನಮ್ಮ ಲಾರಿ ಕೂಡ ಹೋಗಲಾಗದೆ ಸಮಸ್ಯೆಯಾಗಿತ್ತು. ಆ ಕಣಿಯನ್ನು ಪಂಚಾಯತ್ ನವರು ಚರಂಡಿ ಸರಿಪಡಿಸಿ, ಕಣ್ಣುಮಣ್ಣು ಹಾಕಿ ಮುಚ್ಚುವುದರ ಮೂಲಕ ಸರಿಪಡಿಸಬೇಕಾಗುತ್ತದೆ. ಪಂಚಾಯತ್ ಅಧ್ಯಕ್ಷರಲ್ಲಿ ಹೇಳಿದ್ದೇನೆ.
– ದೀಪಕ್ ಕುತ್ತಮೊಟ್ಟೆ