ಪಂಜ ವಲಯದ ಬಳ್ಪ ಸೆಕ್ಷನ್‌ನಲ್ಲಿ ಕಳೆದ ೪ ವರ್ಷಗಳಿಂದ ಉಪ ವಲಯಾರಣ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಸಂತೋಷ್ ರೈಯವರಿಗೆ ವಲಯಾರಣ್ಯಾಧಿಕಾರಿಯಾಗಿ ಮುಂಭಡ್ತಿಯಾಗಿದ್ದು, ಮಂಗಳೂರಿನ ಅರಣ್ಯ ಸಂಚಾರಿ ದಳಕ್ಕೆ ವರ್ಗಾವಣೆಯಾಗಿದೆ.















ಕಾಸರಗೋಡು ಜಿಲ್ಲೆಯ ಕಾಸರಗೋಡು ತಾಲೂಕಿನ ನೆಟ್ಟಣಿಗೆ ಗ್ರಾಮದ ಸಬ್ರುಕಜೆ ನಿವಾಸಿ ಸುಂದರ ರೈ ಹಾಗೂ ಶಂಕರಿ ರೈ ದಂಪತಿಯ ಪುತ್ರರಾದ ಸಂತೋಷ್ ರೈಯವರು ಸುಳ್ಯ ಪದವು ಬಾಲಸುಬ್ರಹ್ಮಣ್ಯ ಹಿ.ಪ್ರಾ.ಶಾಲೆ ಮತ್ತು ಸರ್ವೋದಯ ಪ್ರೌಢಶಾಲೆಯಲ್ಲಿ ಆರಂಭಿಕ ಶಿಕ್ಷಣ ಪಡೆದು ಶ್ರೀಕೃಷ್ಣ ಪದವಿ ಪೂರ್ವ ಕಾಲೇಜ್ ಪಟ್ಟೆ ಇಲ್ಲಿ ಪಿಯು ಶಿಕ್ಷಣ, ಶಿವಮೊಗ್ಗದ ಕುವೆಂಪು ಯುನಿವರ್ಸಿಟಿಯಲ್ಲಿ ಪದವಿ ಹಾಗೂ ಪುತ್ತೂರಿನ ವಿವೇಕಾನಂದ ಶಿಕ್ಷಕ ತರಬೇತಿ ಸಂಸ್ಥೆಯಲ್ಲಿ ಡಿ.ಎಡ್. ಶಿಕ್ಷಣ ಪಡೆದರು.
ಬಳಿಕ ೨೦೦೯ರಲ್ಲಿ ಅರಣ್ಯ ಇಲಾಖೆಗೆ ವನಪಾಲಕರಾಗಿ ಸೇರ್ಪಡೆಗೊಂಡು ಬೆಳ್ತಂಗಡಿ ವಲಯದ ಚಿಬಿದ್ರೆ ಶಾಖೆಯಲ್ಲಿ ೪ ವರ್ಷ, ಪುತ್ತೂರು ವಲಯದ ಬೆಳ್ಳಾರೆ ಶಾಖೆಯಲ್ಲಿ ೪ ವರ್ಷ, ಪಂಜ ವಲಯದ ಪಂಜ ಶಾಖೆಯಲ್ಲಿ ೪ ವರ್ಷ ಹಾಗೂ ಪಂಜ ವಲಯದ ಬಳ್ಪ ಶಾಖೆಯಲ್ಲಿ ೪ ವರ್ಷ ಹೀಗೆ ಒಟ್ಟು ೧೬ ವರ್ಷ ಸೇವೆ ಸಲ್ಲಿಸಿದರು.
ಇದೀಗ ರೇಂಜರ್ ಆಗಿ ಭಡ್ತಿಗೊಂಡು ಮಂಗಳೂರಿಗೆ ವರ್ಗಾವಣೆ ಗೊಂಡಿದ್ದಾರೆ.
ಹವ್ಯಾಸಿ ಕ್ರೀಡಾಪಟುವಾಗಿರುವ ಅವರು ಅರಣ್ಯ ಇಲಾಖೆಯ ರಾಜ್ಯ ಮಟ್ಟದ ಕ್ರೀಡಾ ಕೂಟಗಳಲ್ಲಿ ಶಾಟ್‌ಪುಟ್ ಮತ್ತು ಡಿಸ್ಕಸ್ ತ್ರೋದಲ್ಲಿ ಬೆಳ್ಳಿ ಪದಕ ಪಡೆದಿದ್ದಾರೆ. ಶ್ವಾನಪ್ರಿಯರೂ ಆಗಿರುವ ಇವರು ಊರವರ ಮೆಚ್ಚುಗೆ ಗೌರವಕ್ಕೆ ಪಾತ್ರರಾಗಿದ್ದಾರೆ. ಇವರ ಪತ್ನಿ ವಿತಿಶ್ರೀ ರೈ ಕಡಬದ ಬ್ಯಾಂಕ್ ಆಫ್ ಬರೋಡಾ ಶಾಖೆಯಲ್ಲಿ ಉದ್ಯೋಗಿಯಾಗಿದ್ದು, ಪುತ್ರಿ ಸಾನ್ವಿ ರೈ ಬೆಳ್ಳಾರೆ ಜ್ಞಾನಗಂಗಾ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿ. ಪುತ್ರ ತನಿಶ್ ರೈ ಮೂರು ತಿಂಗಳ ಮಗು.










