ವಿರಾಜಪೇಟೆ ಬಳಿ ರಸ್ತೆ ದಾಟುತ್ತಿದ್ದ ಮಗುವಿಗೆ ದ್ವಿಚಕ್ರ ವಾಹನ ಡಿಕ್ಕಿ

0

ಸುಳ್ಯ ಕೆವಿಜಿ ಆಸ್ಪತ್ರೆಗೆ ಅಂಬ್ಯುಲೆನ್ಸ್ ಮೂಲಕ ತರುತ್ತಿದ್ದ ಗಾಯಾಳು ಮಗು ಮಡಿಕೇರಿ ಆಸ್ಪತ್ರೆಯಲ್ಲಿ ಮೃತ್ಯು

ದ್ವಿಚಕ್ರ ವಾಹನವೊಂದು ಮಗುವಿಗೆ ಡಿಕ್ಕಿ ಹೊಡೆದು ತಲೆ ಹಾಗೂ ಕಾಲಿಗೆ ಗಂಭೀರ ಗಾಯಗೊಂಡಿದ್ದ ಮಗುವನ್ನು ಚಿಕಿತ್ಸೆಗಾಗಿ ಸುಳ್ಯದ ಕೆವಿಜಿ ಆಸ್ಪತ್ರೆಗೆ ಅಂಬ್ಯುಲೆನ್ಸ್ ಮೂಲಕ ತರುತ್ತಿದ್ದ ವೇಳೆ ಮಡಿಕೇರಿ ಆಸ್ಪತೆಯಲ್ಲಿ ಮೃತಪಟ್ಟ ಘಟನೆ ಇಂದು ಮಧ್ಯಾಹ್ನ ಸಂಭವಿಸಿದೆ.


ಕೊಡಗಿನ ವಿರಾಜಪೇಟೆಯ ಚೊಕ್ಕಂಡ ಹಳ್ಳಿ ಬಳಿ ರಸ್ತೆ ದಾಟುತ್ತಿದ್ದ ವೇಳೆ ೮ ವರ್ಷದ ಮಗುವಿಗೆ ದ್ವಿಚಕ್ರ ವಾಹನ ಡಿಕ್ಕಿ ಹೊಡೆಯಿತು. ಪರಿಣಾಮ ಮಗುವಿನ ತಲೆ ಹಾಗೂ ಕಾಲಿಗೆ ಗಂಭೀರ ಗಾಯಗಳಾಯಿತು.
ಸ್ಥಳೀಯರು ಕೂಡಲೇ ಮಗುವನ್ನು ವಿರಾಜಪೇಟೆ ಆಸ್ಪತ್ರೆಗೆ ಕೊಡೊಯ್ದಿದ್ದು ಅಲ್ಲಿ ಪ್ರಥಮ ಚಿಕಿತ್ಸೆಯ ಬಳಿಕ ವ್ಯದ್ಯರು ಸುಳ್ಯದ ಕೆವಿಜಿ ಆಸ್ಪತ್ರೆಗೆ ರೆಫರ್ ಮಾಡಿ ಆಂಬುಲೆನ್ಸ್ ಮೂಲಕ ಮಗುವನ್ನು ತರಲಾಗುತ್ತಿತ್ತು.


ಈ ವೇಳೆ ಆಂಬುಲೆನ್ಸ್ ಚಾಲಕರು ವಾಟ್ಸಾಪ್ ಗ್ರೂಪ್ ಮೂಲಕ ಮಾಹಿತಿ ನೀಡಿ ರಸ್ತೆ ಟ್ರಾಫಿಕ್ ಸಮಸ್ಯೆ ಉಂಟಾಗದಂತೆ ಸಹಕರಿಸಲು ಸುಳ್ಯದ ಅಂಬ್ಯುಲೆನ್ಸ್ ಚಾಲಕ ಸಂಘದವರಲ್ಲಿ ವಿನಂತಿಸಿಕೊಂಡಿದ್ದರು.
ಕೂಡಲೇ ಕಾರ್ಯಪ್ರವೃತ್ತರಾದ ಸುಳ್ಯ ಅಂಬ್ಯುಲೆನ್ಸ್ ಚಾಲಕರು ಅಂಬ್ಯುಲೆನ್ಸ್ ಸಂಚಾರಕ್ಕೆ ಸಂಪಾಜೆ, ಕಲ್ಲುಗುಂಡಿ, ಸುಳ್ಯ ನಗರ ಭಾಗದಲ್ಲಿ ತಮ್ಮ ಸಂಘದ ಸದಸ್ಯರನ್ನು ನೇಮಿಸಿ ಸಿದ್ಧತೆ ನಡೆಸಿದ್ದರು.

ಆದರೆ ಸುಳ್ಯ ಕಡೆ ಬರುತ್ತಿದ್ದ ಮಗುವಿಗೆ ಮಡಿಕೇರಿ ಬಳಿ ಬರುತ್ತಿದ್ದಂತೆ ರಕ್ತಸ್ರಾವ ಹೆಚ್ಚಾಗಿದ್ದು, ಅಂಬ್ಯುಲೆನ್ಸ್ ಚಾಲಕ ಮಡಿಕೇರಿ ಜಿಲ್ಲಾಸ್ಪತ್ರೆಗೆ ಕೊಂಡೊಯ್ದರು.
ಆದರೆ ಅದಾಗಲೇ ಮಗು ಮೃತಪಟ್ಟಿರುವುದಾಗಿ ವೈದ್ಯರು ಪರೀಕ್ಷಿಸಿ ತಿಳಿಸಿದರು.