ಭಯವನ್ನು ಗೆದ್ದವನು ಜೀವನದಲ್ಲಿ ಸಾಧಕನಾಗುತ್ತಾನೆ:ಸಂಸದ ಕ್ಯಾ.ಬ್ರಿಜೇಶ್ ಚೌಟ

0

ಸುಳ್ಯ ಸ.ಪ.ಪೂರ್ವ ಕಾಲೇಜಿನಲ್ಲಿ ಡಿಸ್ಟಿಂಕ್ಷನ್ ವಿದ್ಯಾರ್ಥಿಗಳಿಗೆ ಸನ್ಮಾನ

*ಹೆದರಿಕೆ ಮನುಷ್ಯನ ಸಹಜ ಗುಣ. ನಾವೆಲ್ಲರೂ ಹೆದರಿಕೆ ಬಿಟ್ಟು ಬದುಕಬೇಕು. ಯಾರೂ ಆ ರೀತಿ ಬದುಕುತ್ತಾನೋ ಆತ ಜೀವನದಲ್ಲಿ ಸಾಧಕನಾಗುತ್ತಾನೆ. ವಿದ್ಯಾರ್ಥಿಗಳು ಭಯ ಬಿಟ್ಟು ಶ್ರಮಪಟ್ಟು ಓದಿರುವುದರಿಂದ ಇಂದು ಸಾಧಕರಾಗಿದ್ದೀರಿ. ನಿಮ್ಮ ಭವಿಷ್ಯ ಉಜ್ವಲವಾಗಲಿ” ಎಂದು ದಕ್ಷಿಣ ಕನ್ನಡ ಲೋಕಸಭಾ ಸದಸ್ಯ ಕ್ಯಾ.ಬ್ರಿಜೇಶ್ ಚೌಟ ಹೇಳಿದ್ದಾರೆ.

ಜೂ.16ರಂದು ಸುಳ್ಯದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಎಸ್.ಎಸ್.ಎಲ್.ಸಿ.ಯಲ್ಲಿ ಡಿಸ್ಟಿಂಕ್ಷನ್ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ ನೆರವೇರಿಸಿ ಅವರು ಮಾತನಾಡಿದರು.

“ವಿದ್ಯಾರ್ಥಿ ಜೀವನದಲ್ಲೇ ನಾಯಕತ್ವ ಗುಣ ಬೆಳೆಸಿಕೊಳ್ಳಬೇಕು. ಮುಂದೆ ಯಾವ ಕ್ಷೇತ್ರ ಆಯ್ಕೆ ಮಾಡಿದಾಗಲೂ ಅಲ್ಲಿಯೂ ನಾಯಕತ್ವವನ್ನೇ ನೀವು‌ ಬಯಸಬೇಕು. ಮತ್ತು ಹಿಡಿದ ಕೆಲಸಕ್ಕೆ ನ್ಯಾಯಕೊಟ್ಟಾಗ ಯಶಸ್ಸು ಲಭಿಸುತ್ತದೆ” ಎಂದವರು ಹೇಳಿದರು.

ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷೆ ರಾಜೇಶ್ವರಿ ಕಾಡುತೋಟ ಅಧ್ಯಕ್ಷತೆ ವಹಿಸಿದ್ದರು.

ಶಾಸಕಿ ಭಾಗೀರಥಿ ಮುರುಳ್ಯ, ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರಬಿದಿರೆ ಭಾಗವಹಿಸಿದ್ದರು.

ಸುಂದರ ಭಾರತ್ ಪ್ರತಿಷ್ಠಾನ ಬೆಂಗಳೂರು ಇಲ್ಲಿಯ ಪ್ರತಾಪ್, ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಮೋಹನ್ ಗೌಡ ಬೊಮ್ಮೆಟ್ಟಿ, ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಪ್ಪ, ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುಧಾಕರ್ ರೈ ಪಿ.ಬಿ., ಸುಳ್ಯ ಲಯನ್ಸ್ ನಿಯೋಜಿತ ಅಧ್ಯಕ್ಷ ದೀಪಕ್ ಕುತ್ತಮೊಟ್ಟೆ, ಹಿರಿಯ ಶಿಕ್ಷಕ ಡಾ. ಸುಂದರ ಕೇನಾಜೆ, ಸರಕಾರಿ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರಶೇಖರ ವೇದಿಕೆಯಲ್ಲಿದ್ದರು.

ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಎಸ್.ಎಸ್.ಎಲ್.ಸಿ. ಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ಸೃಜನಾದಿತ್ಯಶೀಲ‌ ಹಾಗೂ 8 ನೇ ಸ್ಥಾನಿಯಾದ ಅನನ್ಯ ಕಾಡುತೋಟ ಹಾಗೂ ಡಿಸ್ಟಿಂಕ್ಷನ್ ಪಡೆದ 37 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಈ ಎಲ್ಲ ವಿದ್ಯಾರ್ಥಿಗಳಿಗೆ ನಿವೃತ್ತ ಅಧ್ಯಾಪಕ ಲೋಕಯ್ಯ ಗೌಡ ಅತ್ಯಾಡಿ ಹಾಗೂ ಬುಟ್ಟಿ ಸಂಸ್ಥೆಯ ಶ್ರೀಮುಖರವರು ಸೇರಿ ರೂ.1ಸಾವಿರ ನಗದು ನೀಡಿ ಗೌರವಿಸಿದರು.
ವಿಜ್ಞಾನ ಶಿಕ್ಷಕರಾದ ಚಂದ್ರಶೇಖರ್ ರವರು ವಿಜ್ಞಾನ ವಿಷಯದಲ್ಲಿ 100 ಅಂಕ ಗಳಿಸಿದ ಸೃಜನಾದಿತ್ಯಶೀಲರಿಗೆ ರೂ.10 ಸಾವಿರ ಹಾಗೂ 99 ಅಂಕ ಪಡೆದ ಅನನ್ಯಾರಿಗೆ ರೂ.5 ಸಾವಿರ ನಗದು‌ ಬಹುಮಾನ ನೀಡಿ ಗೌರವಿಸಿದರು.

ಉಪಪ್ರಾಂಶುಪಾಲ ಪ್ರಕಾಶ ಮೂಡಿತ್ತಾಯ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕಿ ಚಂದ್ರಮತಿ ಕಾರ್ಯಕ್ರಮ ನಿರೂಪಿಸಿದರು.