ಭಾರೀ ಮಳೆ ಹಿನ್ನೆಲೆಯಲ್ಲಿ ಶಾಲೆಗಳಿಗೆ ರಜೆ ಘೋಷಣೆ

0

ತಡವಾದ ಆದೇಶಕ್ಕೆ ಪೋಷಕರ ಅಸಮಾಧಾನ

ಭಾರೀ ಮಳೆಯ ಹಿನ್ನೆಲೆಯಲ್ಲಿ ತಾಲೂಕು ಆಡಳಿತ ಇಂದು ಶಾಲೆಗಳಿಗೆ ರಜೆ ಘೋಷಣೆ ಮಾಡಿದ್ದರೂ , 8 ಗಂಟೆಯ ಬಳಿಕ ಈ ಆದೇಶ ಮಾಡಿದ್ದರಿಂದ ನೂರಾರು ಮಕ್ಕಳು ಅದಾಗಲೇ ಮನೆಯಿಂದ ಹೊರಟ ಕಾರಣ ಪೋಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮೊನ್ನೆಯಿಂದಲೇ ಧಾರಾಕಾರವಾಗಿ ಸುರಿಯುತ್ತಿದ್ದ ಮಳೆ ನಿನ್ನೆ ಸಂಜೆಯಿಂದ ಬಿಡುವು ಪಡೆದಿದ್ದು ಮಧ್ಯರಾತ್ರಿಯಿಂದ ಮತ್ತೆ ಬಿರುಸಾಗಿತ್ತು. ಬೆಳಗ್ಗಿನ ಜಾವವೂ ಮಳೆ ಧಾರಾಕಾರವಾಗಿ ಸುರಿಯತೊಡಗಿತ್ತು. ಪಕ್ಕದ ಉಡುಪಿ, ಕೊಡಗು, ಕಾಸರಗೋಡು ಜಿಲ್ಲೆಗಳಲ್ಲಿ ಶಾಲೆಗಳಿಗೆ ಇಂದು ರಜೆ ಘೋಷಿಸಲಾಗಿತ್ತು.

ಇಂದು ಬೆಳಗ್ಗಿನಿಂದಲೇ ಮಾಧ್ಯಮ ಪ್ರತಿನಿಧಿಗಳಿಗೆ ರಜೆಯ ಕುರಿತು ಪೋಷಕರಿಂದ ಕರೆಗಳು ಬರತೊಡಗಿತ್ತು. ತಹಶೀಲ್ದಾರ್ ಸಹಿತ ಅಧಿಕಾರಿಗಳಿಗೂ ಫೋನ್ ಮಾಡಿ ವಿಚಾರಿಸುತ್ತಿದ್ದರು.

ಈ ಹಿನ್ನೆಲೆಯಲ್ಲಿ ಸಮಾಲೋಚಿಸಿದ ತಹಶೀಲ್ದಾರರು ಸ್ಥಳೀಯವಾಗಿ ಸುಳ್ಯ ತಾಲೂಕಿನ ಎಲ್ಲಾ ಶಾಲೆಗಳಿಗೆ ರಜೆ ನೀಡಿ ಸೂಚನೆ ಹೊರಡಿಸಿದರು.

ಆದರೆ ಬಹುತೇಕ ಖಾಸಗಿ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳು ಶಾಲಾ ವಾಹನದಲ್ಲಿ ಮನೆಯಿಂದ ಬರುವ ಕಾರಣ ದೂರದಿಂದ ಬರುವ ವಾಹನಗಳು 7.30 ವೇಳೆಗೇ ಹೊರಟಾಗುತ್ತದೆ. ಇಂದು ಕೂಡಾ ವಿದ್ಯಾರ್ಥಿಗಳು ಮನೆಯಿಂದ ಹೊರಟ ಕಾರಣ ಸಮಸ್ಯೆಯಾಯಿತು. ಹಾಗಾಗಿ ಹಲವು ಖಾಸಗಿ ವಿದ್ಯಾ ಸಂಸ್ಥೆಗಳು ರಜೆಯ ಸೂಚನೆ ನೀಡದ ಕಾರಣ ವಿದ್ಯಾರ್ಥಿಗಳು ಶಾಲೆಗೆ ಹೋದರು. ಕೆಲವು ಶಾಲೆಗಳಲ್ಲಿ ವಿದ್ಯಾರ್ಥಿಗಳನ್ನು ಅದೇ ಶಾಲಾ ವಾಹನದಲ್ಲಿ ವಾಪಾಸ್ ಕಳುಹಿಸಲಾಯಿತು.

ಮಳೆ ಹಿನ್ನೆಲೆಯಲ್ಲಿ ರಜೆಯ ಸೂಚನೆ ನೀಡುವುದಿದ್ದರೆ ಕನಿಷ್ಠ 7 ಗಂಟೆ ಮೊದಲಾದರೂ ಸೂಚನೆ ನೀಡಬೇಕು ಎಂದು ಹಲವು ಪೋಷಕರು ಹೇಳುತ್ತಿದ್ದಾರೆ.