ಸುಳ್ಯಕ್ಕೆ ಬಂದು ಹೋದ ಸಚಿವರಿಗೆ ಹಲವು ಮನವಿಗಳು ಸಲ್ಲಿಕೆ

0

ಸುಳ್ಯಕ್ಕೆ ಜೂ.18ರಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್‌ರವರು ಆಗಮಿಸಿದ್ದು ಅವರಿಗೆ ಹಲವು ಮನವಿಗಳು ಸಲ್ಲಿಕೆಯಾಗಿವೆ. ಸುಳ್ಯದ ಶಾಸಕರು, ನಗರ ಪಂಚಾಯತ್ ಅಧ್ಯಕ್ಷರು ತಮ್ಮ ಭಾಷಣದ ಸಂದರ್ಭ ಅಭಿವೃದ್ಧಿ ಕುರಿತು ಮನವಿ ಮಾಡಿಕೊಂಡರೆ, ಬ್ಲಾಕ್ ಕಾಂಗ್ರೆಸ್, ಪಿಡಬ್ಲ್ಯುಡಿ ಮತ್ತು ಪಂಚಾಯತ್ ರಾವ್ ಇಲಾಖೆ ಗುತ್ತಿಗೆದಾರರ ಸಂಘದವರು ಹಾಗೂ ಸಾರ್ವಜನಿಕರು ವಿವಿಧ ಮನವಿಗಳನ್ನು ಸಲ್ಲಿಸಿದರು.

ಬ್ಲಾಕ್ ಕಾಂಗ್ರೆಸ್ ವತಿಯಿಂದ ಪಿ.ಸಿ.ಜಯರಾಮ್ ಹಾಗೂ ಪ್ರಧಾನ ಕಾರ್ಯದರ್ಶಿ ಪಿ.ಎಸ್. ಗಂಗಾಧರ್‌ರವರು ಸುಳ್ಯ ಆರೋಗ್ಯ ಇಲಾಖೆಗೆ ಸಂಬಂಧಿಸಿ ಸಲ್ಲಿಸಿದ ಮನವಿಯಲ್ಲಿ ತಾಲೂಕು ಆಸ್ಪತ್ರೆಗೆ ಎಲುಬು ತಜ್ಞರು, ಜನರಲ್ ಸರ್ಜನ್, ತುರ್ತು ಚಿಕಿತ್ಸಾ ವೈದ್ಯರು 4 ಹುದ್ದೆ, ಶುಶೂಷಕಾಧಿಕಾರಿಗಳು 2 ಹುದ್ದೆ, ನೇತ್ರಾಧಿಕಾರಿ, ಕ್ಷಕಿರಣ ತಂತ್ರಜ್ಞರು ೨ ಹುದ್ದೆ, ಫಾರ್ಮಸಿಸ್ಟ್ 2 ಹುದ್ದೆ, ಪ್ರಯೋಗಶಾಲಾ ತಂತ್ರಜ್ಞರು 2 ಹುದ್ದೆ, ಕಛೇರಿ ಸಹಾಯಕರು, ನಗುಮಗು ಅಂಬಲೆನ್ಸ್ ಹಳೆಯದಾಗಿದ್ದು ಹೊಸ ನಗುಮಗು ಅಂಬಲೆನ್ಸ್ ಒದಗಿಸಬೇಕು. 20 ವಸತಿಗೃಹ ಅವಶ್ಯಕತೆಯಿದೆ. ಈಗಿರುವ ಕ್ಯಾಂಟಿನ್ ಕಟ್ಟಡ ಸ್ಥಳಾಂತರಿಸಿದಲ್ಲಿ ವಿಶಾಲ ಪಾರ್ಕಿಂಗ್ ಲಭ್ಯವಾಗುವುದು. ರೋಗಿಗಳ ಸಹಾಯಕರಿಗೆ ತಂಗಲು ಸೌಲಭ್ಯ : ಆಸ್ಪತ್ರೆಯಲ್ಲಿ ರೋಗಿಗಳ ಸಹಾಯಕರಿಗೆ ತಂಗಲು ಡಾರ್ಮಿಟರಿ ಸೌಲಭ್ಯ ಅವಶ್ಯಕತೆಯಿದೆ ಇತ್ಯಾದಿ ಬೇಡಿಕೆ ಸಲ್ಲಿಸಿದರು.
ಪಿ.ಡಿ.ಒ.ಗಳ ನೇಮಕಕ್ಕೆ ಮನವಿ

ಸುಳ್ಯ ತಾಲೂಕಿನ 25 ಪಂಚಾಯತುಗಳಲ್ಲಿ ಕೇವಲ 10 ಪಂಚಾಯತುಗಳಲ್ಲಿ ಮಾತ್ರ ಪಂಚಾಯತು ಅಭಿವೃದ್ಧಿ ಅಧಿಕಾರಿಗಳು ಕರ್ತವ್ಯನಿರ್ವಹಿಸುತ್ತಿದ್ದು, 15 ಪಂಚಾಯತುಗಳಿಗೆ ನಿಯೋಜನೆ ಮೇರೆಗೆ ಕರ್ತವ್ಯದಲ್ಲಿರುತ್ತಾರೆ. ಮತ್ತು ತಾಲೂಕು ಪಂಚಾಯತುಗಳ ಕರ್ತವ್ಯದಲ್ಲಿಯೂ ಇರುವುದರಿಂದ ಪಂಚಾಯತು ಅಭಿವೃದ್ಧಿ ಅಧಿಕಾರಿಗಳ ಕೊರತೆ ಇದೆ. ಆದ್ದರಿಂದ ಪಿಡಿಒಗಳ ನೇಮಕ ಮಾಡಬೇಕೆಂದು ಬ್ಲಾಕ್ ಕಾಂಗ್ರೆಸ್ ಮನವಿ ಸಲ್ಲಿಸಿದೆ.

ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿ ಭಾಗದಲ್ಲಿ ಸಹಾಯಕ ಅಭಿಯಂತರರು, ಕಿರಿಯ ಅಭಿಯಂತರರು, ಸಹಾಯಕ ಅಭಿಯಂತರರು ಖಾಲಿ ಹುದ್ದೆ ಸೇರಿ 6 ಹುದ್ದೆಗಳ ಭರ್ತಿ ಮಾಡಬೇಕೆಂದು ಬ್ಲಾಕ್ ಕಾಂಗ್ರೆಸ್ ಮನವಿ ಸಲ್ಲಿಸಿದ್ದಾರೆ.

ಗುತ್ತಿಗೆದಾರರ ಮನವಿ
ಸುಳ್ಯ ತಾಲೂಕು ಪಿ. ಡಬ್ಲ್ಯೂ.ಡಿ ಮತ್ತು ಪಂಚಾಯತ್ ರಾಜ್ ಇಂಜನಿಯರಿಂಗ್ ಇಲಾಖೆ ಗುತ್ತಿಗೆದಾರರ ಸಂಘದವರು ಮನವಿ ಸಲ್ಲಿಸಿ, ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮರಳು ಮತ್ತು ಕೆಂಪುಕಲ್ಲಿನ ಗಣಿಗಾರಿಕೆ ಹಾಗೂ ಸಾಗಟವನ್ನು ಸಂಪೂರ್ಣ ನಿಷೇಧಿಸಿರುವುದರಿಂದ ಇಗಾಗಲೆ ಟೆಂಡರ್/ತುಂಡು ಗುತ್ತಿಗೆ ಮುಖಾಂತರ ಪಡೆದುಕೊಂಡಿರುವ ಕಾಮಗಾರಿಗಳನ್ನು ನಿರ್ವಹಿಸಲು ಅಸಾಧ್ಯವಾಗಿದ್ದು ಅಭಿವೃದ್ಧಿ ಕಾರ್ಯ ಕುಂಠಿತಗೊಂಡಿರುತ್ತದೆ.
ಆದುದರಿಂದ ಸ್ಥಳೀಯವಾಗಿ ದೊರಕುವ ಮರಳು ಹಾಗೂ ಕೆಂಪುಕಲ್ಲಿನ ಗಣಿಗಾರಿಕೆ ಹಾಗೂ ಸಾಗಾಟಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳುವ ಮುಖಾಂತರ ಜಿಲ್ಲೆಯ ಸರ್ವಾಂಗಿಣ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.

ಕಾಮಗಾರಿಳ ಬಾಕಿ ಬಿಲ್ ಪಾವತಿಗೆ ಮನವಿ
ಸುಳ್ಯ ತಾಲೂಕಿನ ವ್ಯಾಪ್ತಿಯಲ್ಲಿ ಪಂಚಾಯತ್ ರಾಜ್ ಮತ್ತು ಲೋಕೋಪಯೋಗಿ ಇಲಾಖೆಯಲ್ಲಿ ನಿರ್ವಹಿಸಿದ ಬಹುತೇಕ ಕಾಮಗಾರಿಗಳ ಬಿಲ್ ಪಾವತಿಗಳು ಬಾಕಿ ಇರುತ್ತದೆ. ಅದಕ್ಕೆ ಸಂಬಂಧಪಟ್ಟ ಅನುದಾನಗಳನ್ನು ಶೀಘ್ರವಾಗಿ ಬಿಡುಗಡೆ ಮಾಡಿ ಗುತ್ತಿಗೆದಾರರ ಸಮಸ್ಯೆಗಳಿಗೆ ಸ್ಪಂದಿಸಬೇಕಾಗಿ ಗುತ್ತಿಗೆದಾರರ ಸಂಘ ಮನವಿ ಮಾಡಿದೆ.
ಪಂಚಾಯತ್ ರಾಜ್ ಇಂಜನಿಯರಿಂಗ್ ಉಪ ವಿಭಾಗ ಸುಳ್ಯದಲ್ಲಿ ಇಂಜನಿಯರ್‌ಗಳ ಕೊರತೆ ಇದ್ದು ಖಾಲಿ ಹುದ್ದೆ ತುಂಬುವಂತೆ ಅವರು ಗುತ್ತಿಗೆದಾರರ ಸಂಘದ ಅಧ್ಯಕ್ಷ ತೀರ್ಥರಾಮ ಕುಂಚಡ್ಕ, ಸುಭೋದ್ ಶೆಟ್ಟಿ ಮೇನಾಲ, ಗಿರೀಶ್ ನಾರ್ಕೋಡು ಮೊದಲಾದವರಿದ್ದು ಮನವಿ ಸಲ್ಲಿಸಿದ್ದಾರೆ.
ಅಜ್ಜಾವರ ಗ್ರಾಮದ ವಿವಿಧ ರಸ್ತೆಗಳ ಅಭಿವೃದ್ಧಿಗೆ ಅನುದಾನಕ್ಕಾಗಿ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ರಂಜಿತ್ ರೈ ಹಾಗೂ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ಅಬ್ಬಾಸ್ ಅಡ್ಕ ಮನವಿ ಸಲ್ಲಿಸಿದ್ದಾರೆ.
ಅಕ್ರಮ ಸಕ್ರಮ ಸಿಟ್ಟಿಂಗ್‌ನಲ್ಲಿ ಮಂಜೂರಾದ ಕಡತವನ್ನು ಮತ್ತೆ ಅರಣ್ಯಾಧಿಕಾರಿಗಳ ಕ್ಲಿಯರೆನ್ಸ್‌ಗೆ ತಹಶೀಲ್ದಾರ್ ಕಳುಹಿಸುತ್ತಿರುವುದರಿಂದ ಸಮಸ್ಯೆಗಳು ಆಗುತ್ತಿದೆ. ಸಿಟ್ಟಿಂಗ್‌ಗೆ ಬರುವ ಮೊದಲೇ ಎಲ್ಲ ಪ್ರಕ್ರಿಯೆ ಮುಗಿಸಿಕೊಳ್ಳುವಂತೆ ತಾವು ನಿರ್ದೇಶನ ನೀಡಬೇಕು ಎಂದು ಅಕ್ರಮ ಸಕ್ರಮ ಸಮಿತಿ ಸದಸ್ಯೆ ಗೀತಾ ಕೋಲ್ಚಾರ್ ಸಚಿವರಲ್ಲಿ ಮನವಿ ಸಲ್ಲಿಸಿದರು.