
ಕೆ ಎಸ್ ಗೌಡ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲೆ, ವರ್ಷನಗರ ನಿಂತಿಕಲ್ಲು ಇಲ್ಲಿ 2024-25ನೇ ಸಾಲಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು 2024-25ನೇ ಸಾಲಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಹೆತ್ತವರ/ ಪೋಷಕರ ವತಿಯಿಂದ ‘ಗುರುವಂದನಾ ಕಾರ್ಯಕ್ರಮ’ವು ಜೂ. 21ರಂದು ಕೆ ಎಸ್ ಗೌಡ ಸಮೂಹ ವಿದ್ಯಾಸಂಸ್ಥೆಗಳ ವಠಾರದಲ್ಲಿರುವ ಶ್ರೀ ಪರಿವಾರ ಪಂಚಲಿಂಗೇಶ್ವರ ತಾಂತ್ರಿಕ ಸಭಾಭವನದಲ್ಲಿ ನಡೆಯಿತು.
2024-25ನೇ ಶೈಕ್ಷಣಿಕ ವರ್ಷದ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾದ 9 ವಿದ್ಯಾರ್ಥಿಗಳನ್ನು ಹಾಗೂ ಸಂಸ್ಥೆಗೆ ಸತತ ಐದನೇ ಬಾರಿಗೆ ಶೇ 100 ಫಲಿತಾಂಶ ತರಲು ಕಾರಣರಾದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಇದೇ ಸಂದರ್ಭದಲ್ಲಿ 2024-25ನೇ ಸಾಲಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಹೆತ್ತವರ/ಪೋಷಕರ ವತಿಯಿಂದ ಶೇ 100 ಫಲಿತಾಂಶ ಸಾಧನೆಗೆ ದುಡಿದ ಮುಖ್ಯ ಶಿಕ್ಷಕರಾದ ಉಮೇಶ ಗೌಡ ಹೆಚ್, ಸಹಶಿಕ್ಷಕರುಗಳಾದ ಮೋಹನ ಕುಮಾರ ಕೆ, ಅಜಿತ್ ಐವರ್ನಾಡು, ಶ್ರೀಮತಿ ವಿಶಾಲಾಕ್ಷಿ ಪಿ, ಶ್ರೀಮತಿ ವೇದಾವತಿ ಎಸ್, ಕು. ಪ್ರಜ್ಞಾ ಮತ್ತು ಕು. ಶ್ವೇತಾ ಪಿ.ಕೆ ಇವರನ್ನು ಗೌರವಿಸಲಾಯಿತು. ಅಲ್ಲದೇ ಶಿಕ್ಷಣ ಸಂಸ್ಥೆಯೊಂದಿಗೆ ನಿಕಟ ಸಂಪರ್ಕವನ್ನು ಹೊಂದಿ, ಸದಾ ಶಿಕ್ಷಣ ಸಂಸ್ಥೆಯ ಏಳಿಗೆಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸೇವೆ ಸಲ್ಲಿಸಿದ ನಾರಾಯಣ ಶಿರಾಜೆ ಮತ್ತು ಶ್ರೀಮತಿ ಯಮುನಾ ಕಾರ್ಜಾ ಇವರನ್ನು ಶಾಲೆಯ ವತಿಯಿಂದ ಸನ್ಮಾನಿಸಲಾಯಿತು.
ಕೆ ಎಸ್ ಗೌಡ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸದಾನಂದ ರೈ ಕೂವೆಂಜ ಕಾರ್ಯಕ್ರಮವನ್ನು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿ ಮಾತನಾಡುತ್ತಾ ವಿದ್ಯಾರ್ಥಿಗಳ ಬದುಕಿನ ಯಶಸ್ಸು ಅವರ ಪರಿಶ್ರಮ, ಸತತ ಅಧ್ಯಯನ ಹಾಗೂ ಶಿಕ್ಷಕ ವೃಂದದವರ ತ್ಯಾಗದಲ್ಲಿದೆ. ವಿದ್ಯಾರ್ಥಿಗಳು ಯಾವುದೇ ನಕಾರಾತ್ಮಕ ವಿಚಾರಗಳಿಗೆ ಮನಸ್ಸನ್ನು ನೀಡದೇ ಕೇವಲ ಓದು ಹಾಗೂ ವಿಚಾರಗಳನ್ನು ಆರ್ಜಿಸುವ ನೆಲೆಯಲ್ಲಿ ಕೇಂದ್ರೀಕರಿಸಬೇಕೆಂದು ಎಂದರು.
ಸಮಾರಂಭದ ಮುಖ್ಯ ಅತಿಥಿಯಾಗಿ ವೇದಿಕೆಯನ್ನು ಅಲಂಕರಿಸಿದ್ದ ನೆಹರು ಮೆಮೋರಿಯಲ್ ಕಾಲೇಜು, ಸುಳ್ಯ ಇಲ್ಲಿನ ಕನ್ನಡ ಉಪನ್ಯಾಸಕಿಯಾದ ಶ್ರೀಮತಿ ಡಾ ಅನುರಾಧಾ ಕುರುಂಜಿ ವಿದ್ಯಾರ್ಥಿಗಳು, ಹೆತ್ತವರು ಮತ್ತು ಶಿಕ್ಷಕ ಬಳಗವನ್ನು ಉದ್ದೇಶಿಸಿ ಮಾತನಾಡುತ್ತಾ, ಶಿಕ್ಷಣ ವ್ಯವಸ್ಥೆಯ ವಾಸ್ತವಿಕ ನೆಲೆಯ ಕುರಿತು ಬೆಳಕು ಚೆಲ್ಲಿದರು. ಪ್ರಸ್ತುತ ಶಿಕ್ಷಣ ವ್ಯವಸ್ಥೆಯು ಯಾಂತ್ರಿಕ ಶಿಕ್ಷಣದತ್ತ ವಾಲುತ್ತಿದೆ. ವಿದ್ಯಾರ್ಥಿಗಳ ಸಾಧನೆ ಕೇವಲ ವರ್ಷವೊಂದರ ಮೂರು ಗಂಟೆಗಳ ಪರೀಕ್ಷೆಗಷ್ಟೇ ಸೀಮಿತವಾಗುತ್ತಿದೆ. ಈ ವ್ಯವಸ್ಥೆ ಬದಲಾಗಬೇಕು. ವಿದ್ಯಾರ್ಥಿಗಳ ಓದು ಕೇವಲ ಅಂಕಗಳ ಗಳಿಕೆಗೆ ಮಾತ್ರ ಮೀಸಲಾಗಿರದೆ ವಿದ್ಯಾರ್ಥಿಗಳ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುವಂತಾಗಬೇಕು. ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡು ಸರ್ವತೋಮುಖ ಅಭಿವೃದ್ಧಿಯನ್ನು ಕಾಣುವಂತಾದರೆ ಅದೇ ನಿಜವಾದ ಯಶಸ್ಸು ಎಂದು ತಿಳಿಸುತ್ತಾ, ವಿದ್ಯಾರ್ಥಿಗಳ ಉತ್ತಮ ಜೀವನದಲ್ಲಿ ಹೆತ್ತವರ ಹಾಗೂ ಶಿಕ್ಷಕ ವೃಂದದವರ ಪಾತ್ರ ಯಾವ ರೀತಿ ಪ್ರಮುಖವಾಗಿರುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕೆ ಎಸ್ ಗೌಡ ಸಮೂಹ ವಿದ್ಯಾಸಂಸ್ಥೆಗಳ ಅಧ್ಯಕ್ಷರಾದ ಅಶೋಕ್ ಕುಮಾರ್ ಕೆ ಎಸ್ ಸಂಸ್ಥೆಯ ಏಳಿಗೆಯಲ್ಲಿ ಶಿಕ್ಷಕರ ಪಾತ್ರ ಎಷ್ಟರ ಮಟ್ಟಿಗೆ ಮಹತ್ವದ್ದು ಎಂಬುದನ್ನು ನೆನಪಿಸಿಕೊಳ್ಳುತ್ತಾ, ಎಲ್ಲಾ ಸನ್ಮಾನಿತರನ್ನು ಅಭಿನಂದಿಸಿದರು.















ಕೆ ಎಸ್ ಗೌಡ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ಆಡಳಿತಾಧಿಕಾರಿಗಳಾದ ಕುಮಾರಸ್ವಾಮಿ ಕೆ ಎಸ್ ಇವರು ವಿದ್ಯಾರ್ಥಿಗಳ ಭವಿಷ್ಯಕ್ಕೆ ಶುಭ ಹಾರೈಸುತ್ತಾ, ಶಿಕ್ಷಕ ವೃಂದದವರನ್ನು ಅಭಿನಂದಿಸಿದರು.
ಕೆ ಎಸ್ ಗೌಡ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ಶಿಕ್ಷಕ – ರಕ್ಷಕ ಸಂಘದ ಅಧ್ಯಕ್ಷರಾದ ವೆಂಕಟರಮಣ ಕೆ, ಉಪಾಧ್ಯಕ್ಷೆ ಶ್ರೀಮತಿ ಚೇತನಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕೆ ಎಸ್ ಗೌಡ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಮುಖ್ಯ ಶಿಕ್ಷಕರಾರ ಉಮೇಶ ಗೌಡ ಹೆಚ್ ಸ್ವಾಗತಿಸಿ, ಸಹಶಿಕ್ಷಕರಾದ ಮೋಹನ ಕುಮಾರ ಕೆ ವಂದಿಸಿದರು. ಸಹಶಿಕ್ಷಕಿ ಶ್ರೀಮತಿ ವಿಶಾಲಾಕ್ಷಿ ಪಿ ಕಾರ್ಯಕ್ರಮವನ್ನು ನಿರೂಪಿಸಿದರು.










