ಸುಳ್ಯ ಕಸಾಪ ವತಿಯಿಂದ 10ನೇ ತರಗತಿಯಲ್ಲಿ ಕನ್ನಡ ವಿಷಯದಲ್ಲಿ ಶೇ 100ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಗೌರವಾರ್ಪಣೆ

0

ಕನ್ನಡ ಭಾಷೆಗೆ ಪ್ರೋತ್ಸಾಹ ಕೊಡುವುದು ನಮ್ಮ ಕರ್ತವ್ಯ; ಡಾ‌.ಕೆ.ವಿ.ಚಿದಾನಂದ

ಕನ್ನಡ ಸಾಹಿತ್ಯ ಪರಿಷತ್ತು ಸುಳ್ಯ ತಾಲೂಕು ಘಟಕದ ಆಶ್ರಯದಲ್ಲಿ 2024- 25ನೇ ಸಾಲಿನ 10ನೇ ತರಗತಿಯ ವಾರ್ಷಿಕ ಪರೀಕ್ಷೆಯ ಕನ್ನಡ ವಿಷಯದಲ್ಲಿ ಶೇಕಡಾ 100 ಅಂಕ ಗಳಿಸಿದ ಸುಳ್ಯ ತಾಲೂಕಿನ ವಿದ್ಯಾರ್ಥಿಗಳಿಗೆ ಗೌರವಾರ್ಪಣೆ ಕಾರ್ಯಕ್ರಮ ಇಂದು (ಜೂ.21) ಸುಳ್ಯ ಕನ್ನಡ ಭವನದಲ್ಲಿ ನಡೆಯಿತು.


ಸಮಾರಂಭದ ಅಧ್ಯಕ್ಷತೆಯನ್ನು ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತ್ ನ ಅಧ್ಯಕ್ಷರಾದ ಚಂದ್ರ ಶೇಖರ ಪೇರಾಲು ವಹಿಸಿದ್ದರು. ಉದ್ಘಾಟನೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಪ್ಪ ಎ.ನೆರವೇರಿಸಿ ಮಾತನಾಡಿ ಕನ್ನಡ ಭಾಷೆಗೆ ಪ್ರಾಧಾನ್ಯತೆ ಕೊಡಬೇಕು ಆಗ ಭಾಷೆಯ ಬೆಳವಣಿಗೆ ಸಾಧ್ಯವಾಗುತ್ತದೆ. ನಮ್ಮ ಅಭಿವ್ಯಕ್ತಿ ಯನ್ನು ವ್ಯಕ್ತಪಡಿಸಲು ಮಾತೃಭಾಷೆಯಿಂದ ಮಾತ್ರ ಸಾಧ್ಯ ಎಂದು ಹೇಳಿದರು. ವಿದ್ಯಾರ್ಥಿಗಳಿಗೆ ಗೌರವಾರ್ಪಣೆ ನೆರವೇರಿಸಿ ಮಾತನಾಡಿದ ಸುಳ್ಯದ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ನ ಅಧ್ಯಕ್ಷರಾದ ಡಾ.ಕೆ.ವಿ.ಚಿದಾನಂದರವರು ಕನ್ನಡಕ್ಕೆ ಪ್ರೋತ್ಸಾಹ ಕೊಡುವುದು ನಮ್ಮ ಕರ್ತವ್ಯ.ಕನ್ನಡವನ್ನು ಭಾಷಾ ವಿಷಯವಾಗಿ ತೆಗೆದುಕೊಳ್ಳುವ ‌ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಕೇವಲ ಅಂಕ ಗಳಿಸುವ ಉದ್ದೇಶಕ್ಕಾಗಿ ಬೇರೆ ಭಾಷೆಯನ್ನು ತೆಗೆದುಕೊಳ್ಳುತ್ತಾರೆ.ಶಿಕ್ಷಕರು ವಿದ್ಯಾರ್ಥಿಗಳಿಗೆ ಜೀವನದ ದಾರಿ ತೋರಿಸುವ ಕೆಲಸ ಮಾಡಬೇಕು. ಭಾಷಾಭಿಮಾನ ಬೆಳೆಸಬೇಕು ಎಂದ ಅವರು ಕಸಾಪ ಸುಳ್ಯ ಘಟಕ ಉತ್ತಮ ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳುತ್ತಿದೆ ಎಂದು ಹೇಳಿದರು. ಅಭಿನಂದನಾ ಮಾತುಗಳನ್ನಾಡಿದ ಸುಳ್ಯ ನೆಹರು ಮೆಮೋರಿಯಲ್ ಪ.ಪೂ.ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ ಮಿಥಾಲಿ ಪಿ.ರೈ ಮಾತನಾಡಿ ಕನ್ನಡ ಭಾಷೆ ಬಳಕೆಯಿಂದ ಜೀವನ ಸಂಪನ್ಮೂಲ ಸಂಪದ್ಭರಿತ ವಾಗುತ್ತದೆ.ಕನ್ನಡ ಎಂಬುದು ಜೀವನ. ಇಲ್ಲಿನ ಸೊಗಡು, ಸಂಸ್ಕೃತಿಯನ್ನು ತೋರ್ಪಡಿಸುವ ಭಾಷೆ ಕನ್ನಡ ಎಂದು ಹೇಳಿದರು.


ಮುಖ್ಯ ಅತಿಥಿಯಾಗಿದ್ದ ಸುಳ್ಯ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಂ.ಮುಸ್ತಫಾರವರು ಮಾತನಾಡಿ ಕನ್ನಡ ಭಾಷೆ, ನಾಡು ನುಡಿಯ ರಕ್ಷಣೆಯನ್ನು ನಾವೆಲ್ಲರೂ ಮಾಡಬೇಕು ಎಂದರು.
ವೇದಿಕೆಯಲ್ಲಿ ಕಸಾಪ ಗೌರವ ಕಾರ್ಯದರ್ಶಿಗಳಾದ ತೇಜಸ್ವಿ ಕಡಪಳ, ಚಂದ್ರಮತಿ ಕೆ. ಗೌ.ಕೋಶಾಧಿಕಾರಿ ದಯಾನಂದ ಆಳ್ವ, ಕಸಾಪ ಸುಳ್ಯ ಹೋಬಳಿ ಘಟಕದ ಅಧ್ಯಕ್ಷೆ ಚಂದ್ರಾವತಿ ಬಡ್ಡಡ್ಕ, ಪಂಜ ಹೋಬಳಿ ಘಟಕದ ಅಧ್ಯಕ್ಷ ಬಾಬು ಗೌಡ ಅಚ್ರಪ್ಪಾಡಿ ಉಪಸ್ಥಿತರಿದ್ದರು.
ಕನ್ನಡ ಮಾಧ್ಯಮದಲ್ಲಿ ಪರೀಕ್ಷೆ ಬರೆದು ಪ್ರಥಮ, ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಕನ್ನಡ ವಿಷಯದಲ್ಲಿ ಶೇ 100 ಅಂಕ ಪಡೆದ ಸುಮಾರು 65 ವಿದ್ಯಾರ್ಥಿಗಳಿಗೆ ಹಾಗೂ ಕನ್ನಡ ಶಿಕ್ಷಕರುಗಳಿಗೆ ಗೌರವಾರ್ಪಣೆ ಮಾಡಲಾಯಿತು.


ಸುಳ್ಯ ಪ.ಪೂ.ಕಾಲೇಜು ಶಿಕ್ಷಕಿ ಶ್ರೀಮತಿ ಮಮತಾ ಮೂಡಿತ್ತಾಯ, ರೋಟರಿ ಶಾಲೆಯ ವಿದ್ಯಾರ್ಥಿ ಕ್ಷತಿಕರಾಮ್ ಅಭಿಪ್ರಾಯ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಸುಳ್ಯದ ಹಿರಿಯ ಸಾಹಿತಿ ಜಯಮ್ಮ ಬಿ.ಚೆಟ್ಟಿಮಾಡರವರು ತಾಲೂಕಿನ ಸಾಹಿತಿಗಳ ಪುಸ್ತಕ ಸಂಗ್ರಹಿಸಿಡಲು ಕನ್ನಡ ಭವನಕ್ಕೆ ನೀಡಿದ ಕಪಾಟಿನ ಕೀ ಹಸ್ತಾಂತರ ಮಾಡಿದರು.


ಕಾರ್ಯಕ್ರಮದಲ್ಲಿ ಗಾಯಕರಾದ ಕೆ.ಆರ್.ಗೋಪಾಲಕೃಷ್ಣ ಆಶಯಗೀತೆ ಹಾಡಿದರು. ಕಸಾಪ ಗೌರವ ಕಾರ್ಯದರ್ಶಿಗಳಾದ ತೇಜಸ್ವಿ ಕಡಪಳ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.ಶ್ರೀಮತಿ ಚಂದ್ರಮತಿ ಕೆ. ಗೌರವಾರ್ಪಣೆ ಪಡೆದ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು. ಕಸಾಪ ಕಾರ್ಯಕಾರಿ ಸಮಿತಿ ಸದಸ್ಯ ರಮೇಶ್ ನೀರಬಿದಿರೆ ವಂದಿಸಿದರು.ಕಾರ್ಯಕ್ರಮ ಸಂಯೋಜಕಿ ಶ್ರೀಮತಿ ಲತಾಶ್ರೀ ಸುಪ್ರೀತ್ ಮೋಂಟಡ್ಕ ಕಾರ್ಯಕ್ರಮ ನಿರೂಪಿಸಿದರು.


ಕಸಾಪ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾದ ಹರೀಶ್ ಬಂಟ್ವಾಳ್, ಕಸಾಪ ಜಿಲ್ಲಾ ಪ್ರತಿನಿಧಿ ರಾಮಚಂದ್ರ ಪಲ್ಲತ್ತಡ್ಕ, ತಾ.ಕಸಾಪ ಕಾರ್ಯಕಾರಿ ಸಮಿತಿ ಸದಸ್ಯರಾದ ಪ್ರೊ.ಬಾಲಚಂದ್ರ ಗೌಡ, ಪ್ರೊ. ಸಂಜೀವ ಕುದ್ಪಾಜೆ ಉಪಸ್ಥಿತರಿದ್ದರು. ತಾ.ಕಸಾಪ ಸದಸ್ಯರಾದ ಕೇಶವ ಸಿ.ಎ., ಸಂಕೀರ್ಣ ಚೊಕ್ಕಾಡಿ, ಚರಿಷ್ಮಾ ಕಡಪಳ ಸಹಕರಿಸಿದರು.