ಜಾನುವಾರು ಸಾಗಾಟ ಪ್ರಕರಣ : ಆರೋಪ ಸಾಬೀತು – ಶಿಕ್ಷೆ ವಿಧಿಸಿದ ನ್ಯಾಯಾಲಯ

0

ಜಾನುವಾರು ಸಾಗಾಟ ಪ್ರಕರಣದ ವಿಚಾರಣೆ ಸುಳ್ಯ ನ್ಯಾಯಾಲಯದಲ್ಲಿ‌ ನಡೆದು ಆರೋಪಿಯ ಮೇಲಿನ ಆರೋಪ ಸಾಬೀತಾಗಿದ್ದು ನ್ಯಾಯಾಲಯ ಶಿಕ್ಷೆ ವಿಧಿಸಿದೆ.

2023 ಜುಲೈ 13 ರಂದು ರತೀಶ್ ಎಂಬವರು ಒಂದು ಎಮ್ಮೆ ಹಾಗೂ ಒಂದು ಗಂಡು, ಒಂದು ಹೆಣ್ಣು ಎಮ್ಮೆ ಕರುಗಳನ್ನು ಸುಳ್ಳು ಕಾರಣ ಹೇಳಿ ವಧೆಮಾಡುವ ಉದ್ಧೇಶದಿಂದ ಹಣ ನೀಡಿ ಖರೀದಿಸಿ ಪರವಾನಿಗೆ ಇಲ್ಲದೇ ಕೆಎಲ್ 60 ಟಿ 7120 ನಂಬ್ರದ ಪಿಕ್ ಅಪ್ ವಾಹನದಲ್ಲಿ ಹಿಂಸಾತ್ಮಕವಾಗಿ ತುಂಬಿಕೊಂಡು ಹೋಗುತ್ತಿದ್ದಾರೆಂಬ ಮಾಹಿತಿ ಪಡೆದ ಸುಳ್ಯ ಪೋಲೀಸರು ವಾಹನವನ್ನು ಜಾಲ್ಸೂರು ಗ್ರಾಮದ ಸೋಣಂಗೇರಿ ಆರ್ತಾಜೆ ಪೈಚಾರ್ ಸೋಣಂಗೇರಿ ರಸ್ತೆಯಲ್ಲಿ ತಡೆದು, ಆರೋಪಿಯನ್ನು ವಶಪಡಿಸಿಕೊಂಡು ಕೇಸು ದಾಖಲಿಸಿದ್ದರು.

ಈ ಪ್ರಕರಣದ ವಿಚಾರಣೆಯು ಸುಳ್ಯ ಹಿರಿಯ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯದ ನ್ಯಾಯಾಧೀಶರಾದ ಬಿ. ಮೋಹನ್ ಬಾಬು ರವರು ನಡೆಸಿ ಆರೋಪಿಯನ್ನು ಜೂನ್ 24 , 2025 ರಂದು ದೋಷಿ ಎಂದು ತೀರ್ಪು ನೀಡಿ ಈ ಕೆಳಕಂಡಂತೆ ಶಿಕ್ಷೆ ಪ್ರಕಟಿಸಿರುತ್ತಾರೆ.

ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧಿನಿಯಮ, 2020 ರ ಕಲಂ 4 ರಡಿಯಲ್ಲಿನ ಅಪರಾಧಕ್ಕೆ 3 ವರ್ಷಗಳ ಸಾದಾ ಕಾರಾಗೃಹ ವಾಸ ಮತ್ತು ಕಲಂ 6 ರಡಿಯಲ್ಲಿ 3 ವರ್ಷಗಳ ಸಾದಾ ಕಾರಾಗೃಹ ವಾಸ.

ಪ್ರಾಣಿಗಳಿಗೆ ಹಿಂಸಾಚಾರ ಮಾಡುವುದನ್ನು ತಡೆಗಟ್ಟುವ ಅಧಿನಿಯಮ, 1960 ರ ಕಲಂ 11(1)(D) ರಡಿಯಲ್ಲಿ ₹50/- ದಂಡ, ದಂಡ ಕಟ್ಟಲು ತಪ್ಪಿದ್ದಲ್ಲಿ 1 ವಾರ ಸಾದಾ ಕಾರಾಗೃಹ ವಾಸ.

ಮೇಲೆ ವಿಧಿಸಲಾದ ಶಿಕ್ಷೆಯನ್ನು ಏಕಕಾಲಕ್ಕೆ ಜಾರಿಗೊಳಿಸತಕ್ಕದ್ದು ಎಂದು ನ್ಯಾಯಾಧೀಶರು ಆದೇಶ ನೀಡಿರುತ್ತಾರೆ.

ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕರು ನಡೆಸಿ, ವಾದ ಮಂಡಿಸಿರುತ್ತಾರೆ.