ದ.ಕ. ಜಿಲ್ಲೆಯನ್ನು ವಿಶೇಷವಾಗಿ ಪರಿಗಣಿಸಿ ಈಗಿರುವ ಕಾನೂನುಗಳನ್ನು ಸಡಿಲಗೊಳಿಸಿ
ಜಂಟಿಯಾಗಿ ಪತ್ರಿಕಾಗೋಷ್ಠಿ ನಡೆಸಿ ಸರಕಾರಕ್ಕೆ ಮನವಿ ಮಾಡಿಕೊಂಡ ಸಿವಿಲ್ ಗುತ್ತಿಗೆದಾರ ಹಾಗೂ ವಿವಿಧ ಸಂಘಟನೆಗಳ ಮುಖಂಡರುಗಳು
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಂಪು ಕಲ್ಲು ಗಣಿಗಾರಿಕೆ ಹಾಗೂ ಮರಳು ಸಾಗಾಟ ಮತ್ತು ಇತರ ವಿಷಯಗಳಿಗೆ ಸಂಬಂಧಿಸಿದಂತೆ ಕಾನೂನಿನ ನಿಯಮಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು,ಇದಕ್ಕೆ ಸಂಬಂಧಪಟ್ಟ ಗುತ್ತಿಗೆದಾರರು ಹಾಗೂ ಲಾರಿ ಚಾಲಕ, ಮಾಲಕರುಗಳು, ಕಾರ್ಮಿಕ ವರ್ಗದವರು ಇಂದು ಒಂದು ಹೊತ್ತಿನ ಊಟಕ್ಕಾಗಿ ಕಷ್ಟಪಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಆದ್ದರಿಂದ ಸಂಬಂಧಪಟ್ಟ ಇಲಾಖೆಯವರು ಕೂಡಲೇ ಈ ಬಗ್ಗೆ ಕ್ರಮ ಕೈಗೊಂಡು ಈಗಿರುವ ಕಾನೂನನ್ನು ಸಡಿಲಗೊಳಿಸಿ ಕೊಡ ಬೇಕೆಂದು ಸುಳ್ಯದಲ್ಲಿ ಸಿವಿಲ್ ಗುತ್ತಿಗೆ ದಾರರ ಸಂಘದವರು, ಕಾರ್ಮಿಕ ಸಂಘಟನೆ, ಕೆಂಪು ಕಲ್ಲು ಹಾಗೂ ಲಾರಿ ಚಾಲಕ ಮಾಲಕ ಸಂಘಟನೆ ಸೇರಿದಂತೆ ವಿವಿಧ ಸಂಘಟನೆಗಳು ಜೂ ೨೮ ರಂದು ಸುಳ್ಯದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಸರಕಾರವನ್ನು ಅಗ್ರಹಿ ಸಿದ್ದಾರೆ.
ಅಲ್ಲದೆ ಆದಷ್ಟು ಶೀಘ್ರದಲ್ಲಿ ಈ ಬಗ್ಗೆ ಕ್ರಮ ಕೈಗೊಂಡು ವ್ಯವಸ್ಥೆಯನ್ನು ಕಲ್ಪಿಸಿ ಕೊಡದಿದ್ದಲ್ಲಿ ನಮ್ಮ ನ್ಯಾಯಕ್ಕಾಗಿ ಜಿಲ್ಲೆಯಾದ್ಯಂತ ರಸ್ತೆಗಿಳಿದು ಪ್ರತಿಭಟನೆಯನ್ನು ಹಮ್ಮಿ ಕೊಳ್ಳಬೇಕಾಗುತ್ತದೆ ಎಂದು ಅವರು ಎಚ್ಚರಿಕೆಯನ್ನು ನೀಡಿದ್ದಾರೆ.
















ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿರುವ ಗುತ್ತಿಗೆ ಸಂಘದ ಮುಖ್ಯಸ್ಥ ಸುಭಾಷ್ ಶೆಟ್ಟಿ ಮೇನಾಲರವರು ‘ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮರಳು ಸಾಗಾಟ ಮತ್ತು ಕೆಂಪು ಕಲ್ಲು ಗಣಿಗಾರಿಕೆ ಹಲವಾರು ವರ್ಷಗಳಿಂದ ನಡೆಯುತ್ತಾ ಬರುತ್ತಿದೆ. ಇದರಿಂದ ನೂರಾರು ಕುಟುಂಬಗಳು ಜೀವನ ಸಾಗಿಸುತ್ತಿದ್ದು ಯಾರೂ ಕೂಡ ಅಕ್ರಮವಾಗಿ ಗಣಿಗಾರಿಕೆ ಅಥವಾ ಸಾಗಣಿಕೆ ಇಲ್ಲಿ ಯಾರು ಕೂಡ ನಡೆಸುತ್ತಿಲ್ಲ.
ಜಿಲ್ಲೆಯಲ್ಲಿ ಮತ್ತು ನಮ್ಮ ತಾಲೂಕಿನಲ್ಲಿ ಕಟ್ಟಡಗಳು ಮತ್ತು ಮನೆ ಸಂಸ್ಥೆಗಳ ಕಾಮಗಾರಿಗಳಿಗೆ ನಮ್ಮ ಪರಿಸರದ ಕೆಂಪು ಕಲ್ಲುಗಳು ಮತ್ತು ಮರಳುಗಳನ್ನು ಅವಲಂಬಿತವಾಗಿದೆ.
ಆದರೆ ಪ್ರಸ್ತುತ ಸಂದರ್ಭದಲ್ಲಿ ಬದಲಾಗುತ್ತಿರುವ ಕಾನೂನಿನ ನಿಯಮಗಳಿಂದಾಗಿ ಇಂದು ನೂರಾರು ಕಟ್ಟಡಗಳು ನೂತನ ಸಂಸ್ಥೆಗಳ ಕಾಮಗಾರಿ ಅರ್ಧದಲ್ಲಿಯೇ ನಿಂತಿರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಅಲ್ಲದೆ ನಮ್ಮ ಪಯಸ್ವಿನಿ ನದಿಯಿಂದ ಮರಳುಗಾರಿಕೆ ಮಾಡುವುದು ಅಥವಾ ನಮ್ಮ ಗ್ರಾಮೀಣ ಭಾಗದಲ್ಲಿ ಕೆಂಪುಕಲ್ಲಿಗಾಗಿ ಗಟ್ಟಿ ಇರುವ ಸ್ಥಳದಲ್ಲಿ ಕಲ್ಲುಗಳನ್ನು ಕೆತ್ತುವುದರಿಂದ ಜಿಲ್ಲೆಗಾಗಲಿ ಅಥವಾ ಪರಿಸರಕ್ಕಾಗಲಿ ಯಾವುದೇ ರೀತಿಯ ಅನಾಹುತ ಉಂಟಾಗುವುದಿಲ್ಲ. ಗ್ರಾಮೀಣ ಭಾಗದಲ್ಲಿ ಈ ಕೆಂಪು ಕಲ್ಲು ಗಣಿಗಾರಿಕೆ ಮಾಡುವುದರಿಂದ ಕೃಷಿಗೆ ಉತ್ತಮವಾದ ಸ್ಥಳಾವಕಾಶ ಲಭಿಸುತ್ತಿದೆ. ನದಿಯಿಂದ ಹೊಯ್ಗೆಯನ್ನು ತೆಗೆಯುವ ಕಾರಣ ಮಳೆಗಾಲದಲ್ಲಿ ಮಳೆ ನೀರು ಸರಾಗವಾಗಿ ನದಿಯಲ್ಲಿ ಏಕ ದಿಕ್ಕಿನಲ್ಲಿ ಸಾಗಲು ವ್ಯವಸ್ಥೆಯಾಗುತ್ತಿದ್ದು ಇವೆಲ್ಲವೂ ಜನರಿಗೆ ಉಪಯೋಗವೇ ಹೊರತು ತೊಂದರೆಗಳಾಗಲು ಸಾಧ್ಯವೇ ಇಲ್ಲ ಎಂದು ಅವರು ಹೇಳಿದರು.
ಯಾವುದೇ ಪಕ್ಷಗಳು ಅಧಿಕಾರಕ್ಕೆ ಬಂದರೂ ಜಿಲ್ಲೆಯಲ್ಲಿ ಕಾನೂನನ್ನು ಮತ್ತಷ್ಟು ಬಿಗಿಗೊಳಿಸುತ್ತಾರೆ ವಿನಹ ಅದನ್ನು ಸಡಿಲ ಗೊಳಿಸುತ್ತಿಲ್ಲ. ಇದರಿಂದಾಗಿ ಇದನ್ನೇ ನಂಬಿ ಜೀವನ ನಡೆಸುತ್ತಿರುವ ಸರ್ವರಿಗೂ ಸಮಸ್ಯೆ ಬಂದೊದಗಿದೆ.
ಆದ್ದರಿಂದ ಸಂಬಂಧಪಟ್ಟವರು ಕೂಡಲೇ ಇದನ್ನು ಸರಿಪಡಿಸಿಕೊಡಬೇಕು ಇಲ್ಲದಿದ್ದಲ್ಲಿ ಜಿಲ್ಲೆಯಾದ್ಯಂತ ನಮ್ಮ ಸಂಘಟನೆಯನ್ನು ಬಲಪಡಿಸಿ ನ್ಯಾಯಕ್ಕಾಗಿ ಮತ್ತು ನಮ್ಮ ಜೀವನಕ್ಕಾಗಿ ಹೋರಾಟವನ್ನು ಮಾಡುವ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ಎಚ್ಚರಿಕೆಯನ್ನು ನೀಡಿದರು.
ಇದಕ್ಕಾಗಿ ನಾವು ಎಲ್ಲಾ ಸಂಘ ಸಂಸ್ಥೆಗಳನ್ನು ಸೇರಿಸಿಕೊಂಡು ಒಟ್ಟಾಗಿ ನಾವು ನಮ್ಮ ಸಮಸ್ಯೆಯನ್ನು ಸಂಬಂಧಪಟ್ಟವರ ಗಮನಕ್ಕೆ ತರುವ ಪ್ರಯತ್ನವನ್ನು ಮಾಡುತ್ತಿದ್ದೇವೆ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ಮರಳು ಮತ್ತು ಲಾರಿ ಚಾಲಕ ಮಾಲಕ ಸಂಘಟನೆಯ ಮುಖಂಡ ದಿನೇಶ್ ಅಡ್ಕಾರ್ ಮಾತನಾಡಿ ಮರಳು ಗಾರಿಕೆಯಿಂದ ಯಾವುದೇ ರೀತಿಯ ತೊಂದರೆ ಊರಿಗಾಗಲಿ ಅಥವಾ ಸಂಬಂಧಪಟ್ಟವರಿಗಾಗಲಿ ಇಲ್ಲಿ ಇಲ್ಲ. ಎಲ್ಲರೂ ಕಾನೂನಿನ ನಿಯಮಗಳನ್ನು ಪಾಲಿಸಿ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದಾರೆ. ಆದರೆ ಇತ್ತೀಚೆಗೆ ಜಿಲ್ಲೆಯಲ್ಲಿ ನಡೆದ ಕೆಲವು ಅಹಿತಕರ ಘಟನೆಗಳಿಗೆ ಇದು ಕಾರಣ ಎಂಬಂತೆ ಬಿಂಬಿಸಿ ಬಡವರ ಜೀವನಕ್ಕೆ ತೊಂದರೆಯಾಗುವ ರೀತಿಯಲ್ಲಿ ಇಲಾಖೆಗಳು ವರ್ತಿಸುತ್ತಿದೆ.
ಕೆಂಪು ಕಲ್ಲು ಮರಳುಗಾರಿಕೆಯ ಮೇಲೆ ಕಾನೂನಿನ ನಿಯಮಗಳನ್ನು ಹೆಚ್ಚಾಗಿ ಏರುವ ಕಾರಣ ಸಮಾಜದಲ್ಲಿ ಪ್ರತಿಯೊಂದು ವರ್ಗವು ಕೂಡ ಇಂದು ಬೇರೆ ಬೇರೆ ರೀತಿಯ ಸಮಸ್ಯೆಗಳನ್ನು ಎದುರಿಸಲು ಕಾರಣವಾಗುತ್ತಿದೆ. ಆದ್ದರಿಂದ ನಾವೆಲ್ಲರೂ ಸಂಘಟಿತವಾಗಿ ಈ ಒಂದು ಹೋರಾಟಕ್ಕೆ ಮುಂದಾಗಿದ್ದು, ಕೂಡಲೆ ದಕ್ಷಿಣ ಕನ್ನಡ ಜಿಲ್ಲೆಯ ಕಾನೂನಿನ ಬಗ್ಗೆ ವಿಶೇಷವಾಗಿ ಪರಿಗಣಿಸಿ ಬೇಕಾದ ವ್ಯವಸ್ಥೆಯನ್ನು ಕಲ್ಪಿಸಿ ಕೊಡಬೇಕೆಂದು ಅವರು ಆಗ್ರಹಿಸಿದರು.
ಸುಳ್ಯ ತಾಲೂಕು ಬಿ ಎಂ ಎಸ್ ಕಾರ್ಮಿಕರ ಸಂಘದ ಮುಖ್ಯಸ್ಥ ಮಧುಸೂದನ್ ಮಾತನಾಡಿ, ಇಂದು ಜಿಲ್ಲೆಯಲ್ಲಿ ಕಾರ್ಮಿಕರ ಮಕ್ಕಳು ಮತ್ತು ಮನೆಯವರು ಒಂದು ಹೊತ್ತಿನ ಊಟಕ್ಕಾಗಿ ಸಂಕಷ್ಟಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಾನೂನನ್ನು ತರುವಾಗ ಎಲ್ಲರಿಗೂ ಒಂದೇ ರೀತಿಯ ಕಾನೂನು ತರಬೇಕು. ಬಡವರಿಗೊಂದು ಶ್ರೀಮಂತರಿಗೊಂದು ಎಂದು ತಂದಲ್ಲಿ ಬಡವರು ಪ್ರತಿಯೊಂದಕ್ಕೂ ಬೇರೆಯವರ ಜೊತೆ ಕೈ ಒಡ್ದುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಪ್ರಸ್ತುತ ಸಮಯದಲ್ಲಿ ಮನೆ ಕಟ್ಟುವ ಸಾಮಗ್ರಿಗಳುಗಳು ಸರಿಯಾಗಿ ದೊರಕದೆ ಇದ್ದು ಕಾರ್ಮಿಕರ ಮಕ್ಕಳಿಗೆ ಬೇಕಾದ ಶಾಲಾ ಬ್ಯಾಗು ಪುಸ್ತಕಗಳನ್ನು ಹೊಂದಿಸಿ ಕೊಡಲು ಮನೆಯವರು ಕಷ್ಟಪಡುತ್ತಿದ್ದಾರೆ.
ಈ ಸಮಸ್ಯೆ ಕೇವಲ ಅವರಿಗೆ ಮಾತ್ರವಲ್ಲ ಪರಿಸರದ ಗೂಡು ಅಂಗಡಿಗಳಿಂದ ಇಡಿದು ದೊಡ್ಡ ಹಾರ್ಡ್ ವೇರ್ ಅಂಗಡಿ, ಸಿಮೆಂಟ್ ಅಂಗಡಿ ಈಗೆ ಪ್ರತಿಯೊಂದು ವಿಭಾಗದ ಸಂಸ್ಥೆಗಳಿಗೂ ಮತ್ತು ಜನತೆಗೂ ಒಂದಲ್ಲ ಒಂದು ರೀತಿಯಲ್ಲಿ ಸಮಸ್ಯೆಗಳಿಗೆ ಕಾರಣರಾಗಿದೆ.
ಆದ್ದರಿಂದ ಈ ಬಗ್ಗೆ ಸಂಬಂಧಪಟ್ಟವರು ಕೂಡಲೇ ಕ್ರಮ ಕೈಗೊಂಡು ವ್ಯವಸ್ಥೆಗಳನ್ನು ಸರಿಯಾದ ರೀತಿಯಲ್ಲಿ ಕಲ್ಪಿಸಿಕೊಡಬೇಕು ಮತ್ತು ಜಿಲ್ಲೆಯ ಅಭಿವೃದ್ಧಿಗೆ ಪೂರಕವಾದ ಕಾನೂನನ್ನು ಈ ಒಂದು ವಿಷಯಕ್ಕೆ ಸಂಬಂಧಪಟ್ಟಂತೆ ಮಾರ್ಪಾಡುಗೊಳಿಸಿ ಕೊಡಬೇಕೆಂದು ಆಗ್ರಸಿದರು.
ಪತ್ರಿಕಾಗೋಷ್ಠಿಯಲ್ಲಿ ಲಾರಿ ಚಾಲಕಮಾಲಕ ಸಂಘದ ಮುಖ್ಯಸ್ಥರಾದ ಪ್ರಕಾಶ್ ಅಡ್ಕಾರ್,ಕಿಟ್ಟಣ್ಣ ರೈ, ಸಿ ಡಬ್ಲ್ಯೂ ಎಫ್ ಐ ಸಂಘದ ವಿಶ್ವನಾಥ ನೆಲ್ಲಿ ಬಂಗಾರು, ಗುತ್ತಿಗೆದಾರರಾದ ಮನು ದೇವ್, ರಾಜೇಶ್ ಹಾಗೂ ಅನಿಲ್ ಮಂಡೆಕೋಲು ಉಪಸ್ಥಿತರಿದ್ದರು.










