ಪ್ರಫುಲ್ಲಿತ ಮನಸಿನ ಔನತ್ಯಕ್ಕೆ ಕಲಾಸಂಪತ್ತಿನ ಕೊಡುಗೆ ಅನನ್ಯ : ವಿಮಲಾ ರಂಗಯ್ಯ

0

ಸುಬ್ರಹ್ಮಣ್ಯ: ಎಸ್‌ಎಸ್‌ಪಿಯು ಕಾಲೇಜಿನಲ್ಲಿ ಪ್ರತಿಭಾ ದಿನಾಚರಣೆಗೆ ಚಾಲನೆ

ಮನಸ್ಸನ್ನು ಅರಳಿಸುವ ಭಾರತೀಯ ಕಲಾ ಪ್ರಕಾರಗಳು ಎಂದೆಂದಿಗೂ ವಿದ್ಯಾರ್ಥಿಗಳಿಗೆ ಸಂತಸ ನೀಡುವುದರೊಂದಿಗೆ ಪಠ್ಯ ವಿಚಾರದಲ್ಲಿ ಹುಮ್ಮಸ್ಸಿನಿಂದ ತೊಡಗಿಕೊಳ್ಳಲು ಸ್ಪೂರ್ತಿ ನೀಡುತ್ತದೆ. ಪ್ರಫುಲ್ಲಿತ ಮನಸುಗಳ ನಿರ್ಮಾಣಕ್ಕೆ ಕಲಾಸಂಪತ್ತು ಅಭೂತಪೂರ್ವ ಕೊಡುಗೆ ನೀಡಿದೆ. ಎಳವೆಯಲ್ಲಿ ಮಕ್ಕಳಲ್ಲಿ ಅಡಕವಾಗಿರುವ ಸುಪ್ತ ಪ್ರತಿಭೆಗಳ ಅನಾವರಣಕ್ಕೆ ಪ್ರತಿಭಾ ಪ್ರದರ್ಶನಗಳು ಅಡಿಗಲ್ಲಾಗಿವೆ. ವಿದ್ಯಾರ್ಥಿಗಳು ತಮ್ಮ ಕಲಾಸಂಪತ್ತಿನ ಶ್ರೇಷ್ಠತೆಗೆ ತಮ್ಮದೆ ಆದ ಕೊಡುಗೆ ನೀಡಬೇಕು ಎನ್ನುವ ಉದ್ದೇಶದಿಂದ ಪ್ರತಿಭಾ ಪ್ರದರ್ಶನವನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾ ಧಾರ್ಮಿಕ ಪರಿಷತ್‌ನ ಮಾಜಿ ಸದಸ್ಯೆ ವಿಮಲಾ ರಂಗಯ್ಯ ಹೇಳಿದರು.
ಸುಬ್ರಹ್ಮಣ್ಯದ ಎಸ್.ಎಸ್.ಪಿ.ಯು.ಕಾಲೇಜಿನ ಬೆಳ್ಳಿಹಬ್ಬ ಸಭಾಂಗಣದಲ್ಲಿ ಶುಕ್ರವಾರ ನಡೆದ ಕಾಲೇಜಿನ ಸಾಂಸ್ಕೃತಿಕ ಸಂಘ ಮತ್ತು ಪ್ರತಿಭಾ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳಲ್ಲಿ ಅಡಕವಾಗಿರುವ ಸುಪ್ತ ಪ್ರತಿಭೆಗಳನ್ನು ಅನಾವರಣಗೊಳಿಸಲು ಈ ಮೂಲಕ ವೇದಿಕೆ ಕಲ್ಪಿಸಲಾಗಿದೆ.ಮಕ್ಕಳಲ್ಲಿನ ವಿಶೇಷ ಪ್ರತಿಭೆಗಳನ್ನು ಗುರುತಿಸಿ ಅವುಗಳನ್ನು ಪೋಷಿಸುವ ಉದ್ದೇಶದಿಂದ ಕಲಾ ಪ್ರದರ್ಶನ ಏರ್ಪಡಿಸಲಾಗಿದೆ ಎಂದರು.

ಸಾಂಸ್ಕೃತಿಕ ತಂಡ ರಚನೆ: ಸೋಮಶೇಖರ ನಾಯಕ್


ಕಾಲೇಜು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯುತ್ತಾ ಬರುತ್ತಿದೆ.ಅದರೊಂದಿಗೆ ಸಂಸ್ಥೆಯ ವಿದ್ಯಾರ್ಥಿಗಳ ಪ್ರತಿಭೆಯು ಸರ್ವರಿಗೂ ತಿಳಿಸುವ ಉದ್ದೇಶದಿಂದ ಸಾಂಸ್ಕೃತಿಕ ತಂಡ ರಚಿಸಲಾಗುತ್ತದೆ.ತಂಡವನ್ನು ಸಂಘದ ಸಂಚಾಲಕರ ನೇತೃತ್ವದಲ್ಲಿ ಸಾರ್ವಜನಿಕ ವೇದಿಕೆಯಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡಲು ಸಜ್ಜುಗೊಳಿಸಲಾಗುವುದು. ಕುಕ್ಕೆ ಸೇರಿದಂತೆ ವಿವಿಧ ಊರುಗಳಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಕಾಲೇಜಿನ ತಂಡವನ್ನು ಕಳುಹಿಸುವ ವ್ಯವಸ್ಥೆ ಮಾಡಲಾಗುವುದು. ಈ ಮೂಲಕ ನಮ್ಮ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳ ಪ್ರತಿಭೆ ಸರ್ವರಿಗೂ ತಿಳಿಯುವಂತೆ ಯೋಜನೆ ಸಿದ್ದಪಡಿಸಲಾಗಿದೆ ಎಂದು ಪ್ರಾಚಾರ್ಯ ಸೋಮಶೇಖರ ನಾಯಕ್ ಹೇಳಿದರು.


ಕಾಲೇಜಿನ ಪ್ರಾಚಾರ್ಯ ಸೋಮಶೇಖರ ನಾಯಕ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ತೀರ್ಪುಗಾರರಾದ ಗ್ರಾ.ಪಂ.ಸದಸ್ಯೆ ಭಾರತಿ ದಿನೇಶ್, ಕೆ.ಎಸ್.ಎಸ್ ಕಾಲೇಜಿನ ಉಪನ್ಯಾಸಕ ಉದಯ ಕುಮಾರ್ ಮುಖ್ಯಅತಿಥಿಗಳಾಗಿದ್ದರು. ಸಾಂಸ್ಕೃತಿಕ ತಂಡದ ಸಂಚಾಲಕಿ ರೇಖಾರಾಣಿ ಸೋಮಶೇಖರ್, ವಿದ್ಯಾರ್ಥಿ ಸರಕಾರದ ಸಂಚಾಲಕ ಜಯಪ್ರಕಾಶ್.ಆರ್, ಉಪನ್ಯಾಸಕಿ ಸೌಮ್ಯಾ ದಿನೇಶ್, ಸಾಂಸ್ಕೃತಿಕ ಸಂಘದ ಕಾರ್ಯದರ್ಶಿ ಧೃತಿ ವೇದಿಕೆಯಲ್ಲಿದ್ದರು. ಯಶಸ್ವಿ ದೇವತಾ ಪ್ರಾರ್ಥನೆ ಮಾಡಿದರು.
ಕಾಲೇಜಿನ ರೆಡ್ ಕ್ರಾಸ್ ಘಟಕದ ನಾಯಕಿ ಶ್ರುತಿ ಅಶ್ವತ್ ಮಾರ್ಗದರ್ಶನದಲ್ಲಿ ರೆಡ್‌ಕ್ರಾಸ್ ವಿದ್ಯಾರ್ಥಿಗಳು ಕಲಾತ್ಮಕವಾಗಿ ವೇದಿಕೆ ನಿರ್ಮಿಸಿದ್ದರು. ವಿದ್ಯಾರ್ಥಿನಿ ಶ್ರುತಿ.ಕೆ ನಿರೂಪಿಸಿದರು. ಯಶಸ್ವಿ ದೇವತಾ ಪ್ರಾರ್ಥನೆ ಹಾಡಿದರು. ಧೃತಿ ಸ್ವಾಗತಿಸಿದರು. ನಿರೀಕ್ಷಾ ವಂದಿಸಿದರು. ಉಪನ್ಯಾಸಕಿ ಶ್ರುತಿ ಅಶ್ವಥ್ ಸಹಕರಿಸಿದರು.