ಸಂಘದ ಅಧ್ಯಕ್ಷರಿಂದ ವಿನೂತನ ಸಾಲ ಯೋಜನೆಗೆ ಚಾಲನೆ
ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ತನ್ನ ವ್ಯಾಪ್ತಿಯ ಗ್ರಾಮದ ಸದಸ್ಯರಿಗೆ ಚಿನ್ನ ಖರೀದಿಸಲು ಸಾಲ ನೀಡುವ ವಿನೂತನ ಯೋಜನೆಗೆ ಚಾಲನೆ ನೀಡಿದೆ.
ಯೋಜನೆಗೆ ಚಾಲನೆ ನೀಡಿದ ಸಂಘದ ಅಧ್ಯಕ್ಷ ಎಸ್.ಎನ್. ಮನ್ಮಥರವರು ಮಾತನಾಡಿ, ಇದು ಶೇ.೭೫ ರಷ್ಟು ಸೊಸೈಟಿ, ಶೇ.೨೫ ರಷ್ಟು ಸಾಲಗಾರ ಸಹಭಾಗಿತ್ವ ವಹಿಸುವ ಚಿನ್ನ ಖರೀದಿ ಸಾಲ. ಚಿನ್ನ ಖರೀದಿಗೆ ಸಾಲ ಬೇಕಿರುವ ಐವರ್ನಾಡು ಸಹಕಾರ ಸಂಘದ ವ್ಯಾಪ್ತಿಯ ಸದಸ್ಯ ಅದಕ್ಕೆ ಬೇಕಾದ ದಾಖಲೆಯೊಂದಿಗೆ ಅರ್ಜಿ ಸಲ್ಲಿಸಬೇಕು. ಆ ಅರ್ಜಿಯನ್ನು ಪರಿಶೀಲಿಸಿ ಕೇಳುವ ಮೊತ್ತಕ್ಕೆ ಬೇಕಾದಷ್ಟು ದಾಖಲೆ ಇದ್ದರೆ ಆಡಳಿತ ಮಂಡಳಿ ಇದಕ್ಕೆ ಅನುಮತಿ ನೀಡುತ್ತದೆ. ಸಾಲ ಮಂಜೂರಾತಿಗೆ ಅನುಮತಿ ಸಿಕ್ಕಿದ ಬಳಿಕ ಅರ್ಜಿದಾರ ತಾನು ಚಿನ್ನ ಖರೀದಿಸುವ ದಿನ, ಮಳಿಗೆಯ ಬಗ್ಗೆ ಸೊಸೈಟಿಯ ಗಮನಕ್ಕೆ ತರಬೇಕು. ಆ ದಿನ ಫಲಾನುಭವಿ ಜತೆಗೆ ಸೊಸೈಟಿಯಿಂದ ಓರ್ವ ಸಿಬಂದಿ ಚಿನ್ನ ಖರೀದಿಸುವ ಮಳಿಗೆಗೆ ತೆರಳುತ್ತಾರೆ. ಅಲ್ಲಿ ನಿಗದಿತ ಮೊತ್ತದ ಚಿನ್ನ ಖರೀದಿಸಿದ ಬಳಿಕ ಶೇ.೨೫ ರಷ್ಟು ಮೊತ್ತವನ್ನು ಫಲಾನುಭವಿ, ಉಳಿದ ಶೇ.೭೫ ರಷ್ಟು ಮೊತ್ತವನ್ನು ಸಹಕಾರ ಸಂಘ ಪಾವತಿಸುತ್ತದೆ ಎಂದರು.















ಮಳಿಗೆಯಲ್ಲಿ ಖರೀದಿಸಿದ ಚಿನ್ನವನ್ನು ಫಲಾನುಭವಿ ಮನೆಗೆ ಕೊಂಡು ಹೋಗುವಂತಿಲ್ಲ. ಇದು ಸೊಸೈಟಿಯ ಲಾಕರ್ ನಲ್ಲಿ ಇರುತ್ತದೆ. ಅಂದರೆ ಆಭರಣ ಮಳಿಗೆಯಿಂದ ನೇರವಾಗಿ ಸೊಸೈಟಿಯ ಲಾಕರ್‌ಗೆ ಬರುತ್ತದೆ. ಸಾಲ ಪಡೆದ ಫಲಾನುಭವಿಗೆ ತಿಂಗಳು ತಿಂಗಳು ಇಎಂಐ ರೂಪದಂತೆ ಸಾಲದ ಮೊತ್ತವನ್ನು ಪಾವತಿಸುತ್ತಾ ಬರಬೇಕು. ಕೆಲ ಕಂತು ಪಾವತಿಸಿದ ಬಳಿಕ ಒಂದೇ ಕಂತಿನಲ್ಲಿ ಸಾಲ ಭರ್ತಿ ಮಾಡಬಹುದು. ಸಾಲ ಪೂರ್ಣ ಪಾವತಿ ಆದ ಬಳಿಕ ಚಿನ್ನವನ್ನು ಆ ಫಲಾನುಭವಿಗೆ ನೀಡಲಾಗುತ್ತದೆ. ಓರ್ವ ಸದಸ್ಯನಿಗೆ ಕೃಷಿ ಮೌಲ್ಯದ ಆಧಾರದಲ್ಲಿ ಗರಿಷ್ಟ ೫ ಲಕ್ಷ ರೂ. ತನಕ ಚಿನ್ನ ಖರೀದಿಗೆ ಸಾಲ ನೀಡಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಮಹೇಶ್ ಜೆ, ನಿರ್ದೇಶಕರಾದ ಅನಂತ ಕುಮಾರ್ ಕೆ, ನಟರಾಜ ಎಸ್, ಸತೀಶ್ ಎ.ಕೆ., ದಿವ್ಯಾ ಎಂ.ಆರ್., ಭವಾನಿ ಎಂ.ಸಿ., ಮಧುಕರ ಎನ್, ರವಿನಾಥ ಎಂ.ಎಸ್., ಚಂದ್ರಶೇಖರ ಎಸ್, ಎಸ್.ಪುರಂದರ, ವೃತ್ತಿಪರ ನಿರ್ದೇಶಕರಾದ ಗೋಪಾಲಕೃಷ್ಣ ಸಿ.ಎಚ್., ರಾಜೇಂದ್ರ ಪಿ.ವೈ., ರತನ್ ಕೆ.ಎಸ್, ಸಿಇಓ ದೀಕ್ಷಿತ್ ಉಪಸ್ಥಿತರಿದ್ದರು.










