ಚರಂಡಿ ಇಲ್ಲದೆ ರಸ್ತೆಯಲ್ಲಿ ಹರಿಯುತ್ತಿದೆ ನೀರು : ಸ್ಥಳೀಯರ ಅಸಮಾಧಾನ
ನಮ್ಮ ಅವಧಿಯಲ್ಲೇ ಕಾಂಕ್ರೀಟ್ ರಸ್ತೆ ಮಾಡಲಾಗಿದೆ. ಮುಂದೆ ಆದ್ಯತೆಯಲ್ಲಿ ಚರಂಡಿ ಮಾಡುತ್ತೇವೆ : ಸದಸ್ಯ ರಿಯಾಜ್ ಕಟ್ಟೆಕಾರ್

ಬೂಡು ಪರಿಸರದಲ್ಲಿ ಬೇಸಿಗೆಕಾಲದಲ್ಲಿ ನಿರ್ಮಿಸಲಾದ ಕಾಂಕ್ರೀಟ್ ರಸ್ತೆಯ ಬದಿ ಹುಲ್ಲು ತುಂಬಿದ್ದು ಚರಂಡಿ ವ್ಯವಸ್ಥೆ ಇಲ್ಲದೆ ಮಳೆ ನೀರು ರಸ್ತೆಯಲ್ಲಿ
ಹರಿದು ಪರಿಸರದ ಮನೆಯಂಗಳಕ್ಕೆ ಹರಿಯುತ್ತಿರುವ ಬಗ್ಗೆ ಸ್ಥಳೀಯರು ನೀಡಿದ ದೂರಿನಂತೆ ಸಮಸ್ಯೆಯ ಕುರಿತು ಸುದ್ದಿ ವೆಬ್ ಸೈಟ್ ನಲ್ಲಿ ವರದಿ ಪ್ರಕಟಿಸಲಾಗಿತ್ತು.
ಇದೀಗ ವರದಿ ಬಿತ್ತರಗೊಂಡ ಹಿನ್ನೆಲೆಯಲ್ಲಿ ನಗರ ಪಂಚಾಯತ್ ನವರು ಗುತ್ತಿಗೆದಾರರ ಮೂಲಕ ರಸ್ತೆಯ ಇಕ್ಕೆಲಗಳಲ್ಲಿ ಇರುವ ಹುಲ್ಲುಗಳನ್ನು ಕಳೆ ಕೊಚ್ಚುವ ಮೆಷಿನ್ ಬಳಸಿ ಸ್ವಚ್ಛ ಮಾಡಿರುತ್ತಾರೆ. ಆದರೆ ಮಳೆ ಬಂದಾಗ ನೀರು ಮಾತ್ರ ರಸ್ತೆಯಲ್ಲಿ ಹರಿಯುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ
ಸ್ಥಳೀಯರು
ಚರಂಡಿ ವ್ಯವಸ್ಥೆ ನಿರ್ವಹಿಸದೆ ಹುಲ್ಲು ತೆಗೆದು ಸ್ವಚ್ಚ ಮಾಡಿ ಕಾಟಾಚಾರದ ಕೆಲಸ ಮಾಡುವ ಮೂಲಕ ಕಣ್ಣಿಗೆ ಮಣ್ಣೆರೆಚುವ ಕೆಲಸ ಮಾಡಿದ್ದಾರೆ ಎಂದು ಸ್ಥಳೀಯರು ಸುದ್ದಿಯೊಂದಿಗೆ ದೂರಿಕೊಂಡಿದ್ದಾರೆ.
















ಈ ಕುರಿತು ಪ್ರತಿಕ್ರಿಯೆ ನೀಡಿರುವ ವಾರ್ಡ್ ಸದಸ್ಯ ರಿಯಾಜ್ ಕಟ್ಟೆಕಾರ್ ರವರು “ಬಂಟರ ಭವನದಿಂದ ಹಿಂಬದಿ ಹೋಗುವ ರಸ್ತೆ ಅಭಿವೃದ್ಧಿ ಆಗಬೇಕೆಂದು ಬಹು ಬೇಡಿಕೆ ಇತ್ತು. ನಮ್ಮ ಅವಧಿಯಲ್ಲಿ ಅದಕ್ಕೆ ಅನುದಾನ ಇರಿಸಿ ಸುಸಜ್ಜಿತ ಕಾಂಕ್ರೀಟ್ ರಸ್ತೆ ಮಾಡಲಾಗಿದೆ. ಅದೇ ರಸ್ತೆಗೆ ಚರಂಡಿಯ ಅವಶ್ಯಕತೆ ಇದ್ದುದನ್ನು ಅರಿತು ನಾನು ಅನುದಾನ ಇಡಬೇಕೆಂದು ನ.ಪಂ. ಅಧಿಕಾರಿಗಳಿಗೆ ಒತ್ತಾಯಿಸಿದೆ. ರೂ.2 ಲಕ್ಷ ವಿಶೇಷ ಅನುದಾನ ಇರಿಸಿದರು. ಆದರೆ ಆ ಬಳಿಕ ಅದನ್ನು ಬದಲಾಯಿಸಿ ಇದೇ ವಾರ್ಡಿನ ಬೂಡು ಗದ್ದೆಯ ಬಳಿ ಚರಂಡಿ ಮಾಡಿದ್ದಾರೆ.
ಅಲ್ಲಿ ಚರಂಡಿಯ ಅವಶ್ಯಕತೆ ಇರಲಿಲ್ಲ. ಎಲ್ಲರೂ ಆ ಚರಂಡಿ ನೋಡಬಹುದು. ಎಲ್ಲಿ ಅಗತ್ಯವಿದೆಯೋ ಅಲ್ಲಿ ಚರಂಡಿ ಮಾಡದೇ ಬೇರೆಡೆಗೆ ಆ ಹಣ ವರ್ಗಾಯಿಸಿದ್ದರಿಂದ ಇಲ್ಲಿ ಚರಂಡಿ ಆಗದಂತೆ ಮಾಡಿದ್ದಾರೆ. ಆದರೆ ನಾವು ಮುಂದಿನ ದಿನದಲ್ಲಿ ಇಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆ ಮಾಡಿ ಕೊಡುತ್ತೇವೆ” ಎಂದು ತಿಳಿಸಿದ್ದಾರೆ.










